

ಇಂದು ಜಗತ್ತಿನಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ.ದಶಕಗಳಿಂದ ನಾವೆಲ್ಲರೂ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಬಳಸುತ್ತಿದ್ದೇವೆ. ಈಗ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು ಅಥವಾ EVಗಳು ಜನಪ್ರಿಯವಾಗುತ್ತಿವೆ.
ಭಾರತದಲ್ಲಿಯೂ ಸಹ ಸರ್ಕಾರದ ಪ್ರೋತ್ಸಾಹ, ಇಂಧನ ದರ ಏರಿಕೆ , ಪರಿಸರದ ಬಗ್ಗೆ ಜಾಗೃತಿ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆ EV ವಾಹನಗಳ ಕಡೆ ಜನರನ್ನು ಆಕರ್ಷಿಸುತ್ತಿವೆ. ಆದರೆ ಇನ್ನೂ ಬಹುತೇಕರನ್ನು ಎರಡು ಮಹಾ ಪ್ರಶ್ನೆಗಳು ಕಾಡುತ್ತಿವೆ. ಒಂದು EV ಕಾರುಕೊಳ್ಳುವುದು ಸರಿಯೇ ಅಥವಾ ಪೆಟ್ರೋಲ್ /ಡೀಸೆಲ್ ಕಾರು ಕೊಳ್ಳುವುದು ಉತ್ತಮವೇ ಎನ್ನುವುದು , ಇನ್ನೊಂದು EV ರೇಂಜ್ ಬಗ್ಗೆ ಕೂಡ ಸಾಕಷ್ಟು ಅನುಮಾನಗಳಿವೆ.
ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ. ಏಕೆಂದರೆ ಇದು ವ್ಯಕ್ತಿಯ ಬಳಕೆ, ಪ್ರಯಾಣದ ದೂರ, ನಗರ ಅಥವಾ ಗ್ರಾಮ ಪ್ರದೇಶ, ವಿದ್ಯುತ್ ಸೌಲಭ್ಯ, ಬಜೆಟ್, ನಿರ್ವಹಣಾ ವೆಚ್ಚ ಮತ್ತು ದೀರ್ಘಕಾಲದ ಲಾಭಗಳ ಮೇಲೆ ಅವಲಂಬಿತವಾಗಿದೆ. ಆದರೂ ಇವುಗಳಿಗೆ ಒಂದಷ್ಟು ಉತ್ತರ ಪಡೆದುಕೊಳ್ಳುವ ಪ್ರಯತ್ನ ಇಲ್ಲಿದೆ.
ಮೂಲಭೂತ ವ್ಯತ್ಯಾಸ:
ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಲ್ಲಿ ಇಂಧನವನ್ನು ಎಂಜಿನ್‌ನಲ್ಲಿ ಸುಟ್ಟು ಶಕ್ತಿ ಉತ್ಪಾದಿಸಲಾಗುತ್ತದೆ. ಅದರಿಂದ ವಾಹನ ಚಲಿಸುತ್ತದೆ. ಆದರೆ EVಗಳಲ್ಲಿ ಬ್ಯಾಟರಿ ಶಕ್ತಿಯಿಂದ ಮೋಟಾರ್ ಕೆಲಸ ಮಾಡುತ್ತದೆ. ಇಲ್ಲಿ ಎಂಜಿನ್, ಗೇರ್‌ಬಾಕ್ಸ್, ಎಕ್ಸಾಸ್ಟ್, ಎಂಜಿನ್ ಆಯಿಲ್ ಮುಂತಾದ ಭಾಗಗಳು ಇಲ್ಲ ಅಥವಾ ಬಹಳ ಕಡಿಮೆ.ಅದರ ಪರಿಣಾಮವಾಗಿ EV ವಾಹನಗಳು ಶಾಂತವಾಗಿರುತ್ತವೆ, ಕಂಪನ ಕಡಿಮೆ ಇರುತ್ತದೆ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ.
ವೆಚ್ಚದ ಹೋಲಿಕೆ:
ನಾವು ಕೊಂಡುಕೊಳ್ಳುವ ಕಾರು EV ಆಗಿರಲಿ ಅಥವಾ ಟ್ರಡಿಷನಲ್ ಕಾರು ಆಗಿರಲಿ ಎರಡರ ಖರೀದಿ ಬೆಲೆ 20 ಲಕ್ಷ ರೂಪಾಯಿ ಎಂದುಕೊಳ್ಳೋಣ.
ಜನರು ಸಾಮಾನ್ಯವಾಗಿ “ಮೈಲೇಜ್” ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಪೆಟ್ರೋಲ್ ಕಾರುಗಳು ಸಾಮಾನ್ಯವಾಗಿ 15/20 km/l ಕೊಡುತ್ತವೆ. ಡೀಸೆಲ್ ಕಾರುಗಳು 15/25 km/l ಕೊಡಬಹುದು. ಆದರೆ EVಗಳಲ್ಲಿ “ಒಂದು ಯೂನಿಟ್ ವಿದ್ಯುತ್‌ಗೆ ಎಷ್ಟು ದೂರ” ಎಂಬ ಲೆಕ್ಕ ಬರುತ್ತದೆ.
ಉದಾಹರಣೆಗೆ: ಒಂದು EV ಕಾರು 40 ಯೂನಿಟ್ ಬ್ಯಾಟರಿಯಿಂದ 300 km ಓಡುತ್ತದೆ. ಒಂದು ಯೂನಿಟ್ ವಿದ್ಯುತ್ 8 ರೂಪಾಯಿ ಎಂದು ತೆಗೆದುಕೊಂಡರೆ, ಒಟ್ಟು ಚಾರ್ಜಿಂಗ್ ವೆಚ್ಚ = ₹320. ಅಂದರೆ ಪ್ರತಿkmಗೆ ಸುಮಾರು 1 ರೂಪಾಯಿ ಮಾತ್ರ ವೆಚ್ಚ.
ಆದರೆ ಪೆಟ್ರೋಲ್ ಕಾರಿನಲ್ಲಿ: 15 km/l ಮೈಲೇಜ್ ಸಿಗುತ್ತದೆ ಎಂದುಕೊಳ್ಳೋಣ, ಮತ್ತು ಪೆಟ್ರೋಲ್ 105 ರೂಪಾಯಿ ಪ್ರತಿ ಲೀಟರಿಗೆ ಎಂದುಕೊಳ್ಳೋಣ. ಈ ಲೆಕ್ಕಾಚಾರದಲ್ಲಿ ಪ್ರತಿ km ವೆಚ್ಚ ಸುಮಾರು 7 ರೂಪಾಯಿ ಬಿದ್ದಹಾಗಾಯ್ತು. ಇದರರ್ಥ ಬಹಳ ಸರಳ. ದಿನನಿತ್ಯ ಹೆಚ್ಚು ಓಡಿಸುವವರಿಗೆ EV ದೀರ್ಘಕಾಲದಲ್ಲಿ ಬಹಳಷ್ಟು ಹಣ ಉಳಿಸುತ್ತದೆ.
ಇದಕ್ಕೆ ಪೂರಕವಾಗಿ ಒಂದು ಕೇಸ್ ಸ್ಟಡಿ ನೋಡೋಣ:
ಒಂದು ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದೆ . ಮತ್ತು ಅವರು ತಿಂಗಳಿಗೆ ಸುಮಾರು 1500 km ಪ್ರಯಾಣ ಮಾಡುತ್ತಾರೆ ಎಂದುಕೊಳ್ಳೋಣ.
ಪೆಟ್ರೋಲ್ ಕಾರಿನ ವೆಚ್ಚ, 15 ಕಿಲೋಮೀಟರ್ ಮೈಲೇಜ್ ಲೆಕ್ಕಾಚಾರದಲ್ಲಿ 100 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಪೆಟ್ರೋಲ್ ದರ ಮೇಲಿನ ಉದಾಹರಣೆಯಂತೆ 105 ರೂಪಾಯಿ ಲೀಟರಿಗೆ ಎಂದುಕೊಳ್ಳೋಣ. ಈ ಲೆಕ್ಕಾಚಾರದಲ್ಲಿ ತಿಂಗಳಿಗೆ ಹತ್ತೂವರೆ ಸಾವಿರ ರೂಪಾಯಿ ಪೆಟ್ರೋಲ್ ಮೇಲೆ ಈ ಕುಟುಂಬ ವ್ಯಯ ಮಾಡಬೇಕಾಗುತ್ತದೆ. ವಾರ್ಷಿಕ ವೆಚ್ಚ , 10,500*12 ಅಂದರೆ ಒಂದು ಲಕ್ಷ ಇಪ್ಪತ್ತಾರು ಸಾವಿರ ರೂಪಾಯಿ.
ಈಗ ಈ ಕುಟುಂಬ EV ಕಾರನ್ನು ಖರೀದಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ. 1500 ಕಿಲೋಮೀಟರ್ ಮಾಸಿಕ, ಒಂದು ಕಿಲೋಮೀಟರ್ ಚಲಾಯಿಸಲು ತಗಲುವ ವೆಚ್ಚ 1 ರೂಪಾಯಿ, ಮಾಸಿಕ 1,500 ರೂಪಾಯಿ, ವಾರ್ಷಿಕ ವೆಚ್ಚ 18 ಸಾವಿರ ರೂಪಾಯಿ. ಇವರೆಡರ ನಡುವಿನ ವಾರ್ಷಿಕ ಉಳಿತಾಯ: 1,26,000- 18,000 ಅಂದರೆ 108,000
ಗಮನಿಸಿ ಪ್ರತಿ ವಾಹನದ ಆಯಸ್ಸು 15 ವರ್ಷ ಎಂದು ನಿಗದಿ ಪಡಿಸಲಾಗಿದೆ. ಆ ನಂತರ ಚಲಾವಣೆಗೆ ಅರ್ಹವೇ? ಎನ್ನುವ ಪ್ರಮಾಣ ಪತ್ರ ತೆಗೆದುಕೊಳ್ಳಬೇಕು. ಹೀಗಾಗಿ ನಾವು ಪೆಟ್ರೋಲ್/ಡೀಸೆಲ್ ಅಥವಾ EV ಯಾವುದೇ ಇರಲಿ ಅದರ ಆಯಸ್ಸು 15 ವರ್ಷ ಎಂದುಕೊಳ್ಳೋಣ. ಈ ಲೆಕ್ಕಾಚಾರದಲ್ಲಿ 15 ವರ್ಷದಲ್ಲಿ EV ಬಳಸಿದ ಕಾರಣ ಆದ ಒಟ್ಟು ಉಳಿತಾಯ 108,000*15 ಅಂದರೆ 16,20,000 ರೂಪಾಯಿ.
ಈಗ ಇನ್ನೊಂದು ಲೆಕ್ಕ ಮಾಡೋಣ: ಪ್ರಾಥಮಿಕ ಬಂಡವಾಳ ಎರಡಕ್ಕೂ 20 ಲಕ್ಷ. ಪೆಟ್ರೋಲ್ ಕಾರಿಗೆ ಹಾಕಿದ ತೈಲದ ಬೆಲೆ (126,000*12) 15,12,000 ಈ ಹದಿನೈದು ವರ್ಷದಲ್ಲಿ ಒಟ್ಟು ಚಲಾಯಿಸಿದ ಕಿಲೋಮೀಟರ್ ಎರಡು ಲಕ್ಷ ಎಪ್ಪತ್ತು ಸಾವಿರ . ಪ್ರತಿ ಹತ್ತು ಸಾವಿರ ಕಿಲೋಮೀಟರ್ ಗೆ ಒಮ್ಮೆ ಮೈಂಟೆನನ್ಸ್ ಎಂದುಕೊಂಡರೂ 27 ಬಾರಿ ಸರ್ವಿಸ್ ಗೆ ಬಿಡಬೇಕಾಗುತ್ತದೆ. ಪ್ರತಿ ಸರ್ವಿಸ್ 15 ಸಾವಿರ ಖರ್ಚು ಎಂದು ಕೊಂಡರು ಕೂಡ ನಾಲ್ಕು ಲಕ್ಷದ ಐದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಇದು ಬಿಟ್ಟು ಟೈರು , ಇತರೆ ಬಿಡಿಭಾಗಗಳ ಸವಕಳಿಯನ್ನು ಎರಡೂವರೆ ಲಕ್ಷ ಎಂದುಕೊಂಡರೂ ಕೂಡ , 15 ವರ್ಷದಲ್ಲಿ ನಮ್ಮ ಕೈಯಿಂದ ಹೋದ ಹಣದ ಮೊತ್ತ ಹೀಗಿದೆ : 20 ಲಕ್ಷ ಪ್ಲಸ್ 15,12,000 ಪ್ಲಸ್ 4,05,000 ಪ್ಲಸ್ 2,50,000 ಒಟ್ಟಾರೆ 41 ಲಕ್ಷ 67 ಸಾವಿರ ರೂಪಾಯಿ.
EV ಲೆಕ್ಕಾಚಾರ ನೋಡೋಣ: 20 ಲಕ್ಷ , ಸರ್ವಿಸ್ 27*2500, ಒಟ್ಟು 67 ಸಾವಿರ 500 ರೂಪಾಯಿ. ಕರೆಂಟ್ ಬಿಲ್ 18000*12 , ಒಟ್ಟು 2,16,000 ರೂಪಾಯಿ. ಟೈರು ಮತ್ತಿತರ ಬಿಡಿಭಾಗ ಎರಡು ಲಕ್ಷ ಎಂದುಕೊಳ್ಳೋಣ. ಹೀಗಾಗಿ 15 ವರ್ಷದಲ್ಲಿ ಕೈಯಿಂದ ಹೋದ ಹಣ 24 ಲಕ್ಷ 83 ಸಾವಿರದ 500 ರೂಪಾಯಿ ಮಾತ್ರ!
ಇದರಿಂದ ನಾವು ಒಂದು ತೀರ್ಮಾನಕ್ಕೆ ಬರಬಹುದು. ದೀರ್ಘಕಾಲದ ಬಳಕೆಯಲ್ಲಿ EV ಲಾಭದಾಯಕ. ಎರಡು ಅಥವಾ ಮೂರು ವರ್ಷ ಬಳಸಿ ಮಾರಾಟ ಮಾಡಲು ಹೋದರೆ ಅದರಿಂದ ನಷ್ಟ ಹೆಚ್ಚಾಗುತ್ತದೆ. ಏಕೆಂದರೆ EV ಕಾರುಗಳ ಮರುಮಾರಾಟ ಬೆಲೆ ಬಹಳ ಕಡಿಮೆಯಿದೆ.
EV ಕಾರು ದೀರ್ಘಾವಧಿಯಲ್ಲಿ ಅಥವಾ ಹೆಚ್ಚು ಬಳಕೆ ಮಾಡುವವರಿಗೆ ಲಾಭದಾಯಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಜನ ಸಾಮಾನ್ಯನಿಗೆ ಈ ಲೆಕ್ಕಾಚಾರದ ಹೊರತಾಗಿ ಕೂಡ ಒಂದಷ್ಟು ಸಂಶಯಗಳು ಇದ್ದೆ ಇವೆ . ಅವುಗಳಲ್ಲಿ ಪ್ರಮುಖವಾದವನ್ನು ನೋಡೋಣ.
ಬ್ಯಾಟರಿ ಬಗ್ಗೆ ಭಯ: ಬಹಳ ಜನರಿಗೆ EV ಬಗ್ಗೆ ದೊಡ್ಡ ಭಯ ಎಂದರೆ ಬ್ಯಾಟರಿ.“ಬ್ಯಾಟರಿ ಕೆಟ್ಟರೆ ಏನು?” ಎನ್ನುವುದು ಪ್ರಶ್ನೆ ಸಾಮಾನ್ಯ. ಬ್ಯಾಟರಿ ಬದಲಿಸಲು ನಾಲ್ಕೈದು ಲಕ್ಷ ಆಗುತ್ತಂತೆ ಹೌದ ? ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಉಳಿಸಿದ ಹಣ ಬ್ಯಾಟರಿಗೆ ಕೊಡುತ್ತೇವೆ ಅಲ್ವಾ? ಎನ್ನುವ ಪ್ರಶ್ನೆಗಳು ಕೂಡ ಸಾಮಾನ್ಯ. ಇಂದು ಹೆಚ್ಚಿನ ಕಂಪನಿಗಳು 8 ವರ್ಷ ಅಥವಾ 1.6 ಲಕ್ಷ km ವರೆಗೆ ವಾರಂಟಿ ಕೊಡುತ್ತಿವೆ.
ಕೆಲವೊಂದು ಕಂಪನಿಗಳು ಲೈಫ್ ಟೈಮ್ ಅಂದರೆ 15 ವರ್ಷ ಗ್ಯಾರಂಟಿ ಕೊಡುತ್ತಿವೆ. ಹೀಗಾಗಿ ಬ್ಯಾಟರಿ ಬಗ್ಗೆ ಭಯ ಬೇಡ. ಅಲ್ಲದೆ ಬ್ಯಾಟರಿ ಪೂರ್ತಿ ಒಮ್ಮೆಲೇ ಕೆಡುವುದಿಲ್ಲ. ಅವುಗಳಲ್ಲಿನ ಕೆಲವು ಸೆಲ್ ಗಳು ಮಾತ್ರ ಕೆಟ್ಟಿರುತ್ತವೆ. ಹೀಗಾಗಿ ನಾಲ್ಕೈದು ಲಕ್ಷ ಬೇಕು ಎನ್ನುವುದು ಸುಳ್ಳು. ಇದರ ಜೊತೆಗೆ ಬ್ಯಾಟರಿ ತಂತ್ರಜ್ಞಾನವೂ ವೇಗವಾಗಿ ಸುಧಾರಿಸುತ್ತಿದೆ. ಹಿಂದಿನಂತೆ ಬ್ಯಾಟರಿ ಬೇಗ ಹಾಳಾಗುವುದಿಲ್ಲ. ಆದರೆ ಬ್ಯಾಟರಿ ಬದಲಾವಣೆ ದುಬಾರಿ ಎಂಬುದು ಸತ್ಯ. ಆದರೆ ಸಾಮಾನ್ಯ ಬಳಕೆಯಲ್ಲಿ 10/12 ವರ್ಷಕ್ಕಿಂತ ಮೊದಲು ಬದಲಾವಣೆ ಅಗತ್ಯವಾಗದೇ ಇರಬಹುದು.
ಚಾರ್ಜಿಂಗ್ ಸಮಸ್ಯೆ: ಇನ್ನೊಂದು ದೊಡ್ಡ ಸಂಶಯ. ಚಾರ್ಜಿಂಗ್ ಹೇಗೆ ? ದೂರ ಊರಿಗೆ ಇದರಲ್ಲಿ ಹೋಗಬಹುದಾ ? ಎಲ್ಲ ಕಡೆ ಚಾರ್ಜಿಂಗ್ ಸ್ಟೇಷನ್ ಇದೆಯಾ ? ಚಾರ್ಜ್ ಮಾಡಲು ತಗಲುವ ಸಮಯವೆಷ್ಟು ? ಹೌದು EVಗಳ ದೊಡ್ಡ ಸವಾಲು ಎಂದರೆ ಚಾರ್ಜಿಂಗ್.ಪೆಟ್ರೋಲ್ ಬಂಕ್ ಎಲ್ಲೆಡೆ ಸಿಗುತ್ತದೆ. ಆದರೆ ಚಾರ್ಜಿಂಗ್ ಸ್ಟೇಷನ್‌ಗಳು ಇನ್ನೂ ಎಲ್ಲ ಕಡೆ ಲಭ್ಯವಿಲ್ಲ.ಆದರೆ ಕೆಳೆದ 3/4 ವರ್ಷದಲ್ಲಿ ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅಲ್ಲದೆ ಬಹಳ ಕಾರುಗಳು ಹೈ ರೇಂಜ್ ನಲ್ಲಿ ಕೂಡ ಸಿಗುತ್ತಿವೆ. ಅಂದರೆ 500/600/700 ಕಿಲೋಮೀಟರ್ ಒಂದು ಚಾರ್ಜ್ ನಲ್ಲಿ ಚಲಿಸಬಲ್ಲ ಕಾರುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಉದಾಹರಣೆಗೆ ನನ್ನ ಕಾರು 450 ಕಿಲೋಮೀಟರ್ ರೇಂಜ್ ಸಿಗುತ್ತಿದೆ. ಬೆಂಗಳೂರಿಗೆ ಮೈಸೂರಿನಿಂದ ಬಂದು ಹೋಗಬಹುದು. ಎಲ್ಲೂ ಚಾರ್ಜ್ ಮಾಡುವ ಅಗತ್ಯವಿಲ್ಲ. ಹಾಗೊಮ್ಮೆ ಬಹಳ ದೂರದ ಪ್ರಯಾಣವಿದೆ ಎಂದರೂ ಮಾಡಬಹುದು. ಎಲ್ಲೆಲ್ಲಿ ಚಾರ್ಜಿಂಗ್ ಸೆಂಟರ್ ಇವೆ ಎಂದು ತೋರಿಸುವ ಆಪ್ ಗಳು ಸೃಷ್ಟಿಯಾಗಿವೆ. ನಾವು ಹೋಗುವ ದಾರಿಯಲ್ಲಿ ಎಲ್ಲಿ ಸಿಗುತ್ತದೆ ಎನ್ನುವುದನ್ನು ಅಂದಾಜಿಸಿ , ಒಂದಷ್ಟು ಪ್ಲಾನ್ ಮಾಡಬೇಕಾಗುತ್ತದೆ ಅಷ್ಟೇ. ಉಳಿದಂತೆ ಇವತ್ತಿನ ತಂತ್ರಜ್ಞಾನದ ಸಹಾಯದಿಂದ ಕೇವಲ 40/50 ನಿಮಿಷದಲ್ಲಿ ಪೂರ್ಣ ಚಾರ್ಜ್ ಮಾಡಿಬಿಡಬಹುದು. ದೂರದ ಜಾಗಕ್ಕೆ ಹೋಗುವಾಗ ನಾವು ಸಾಮಾನ್ಯವಾಗಿ ಇಷ್ಟು ಸಮಯ ತಿಂಡಿ , ಕಾಫಿಗೆ ನಿಲ್ಲಿಸುತ್ತೇವೆ ಅಲ್ಲವೇ?
ಇವತ್ತಿನ ಜಾಗತಿಕ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಸಂಕಷ್ಟಗಳು ನಿಲ್ಲುವಂತೆ ಕಾಣುತ್ತಿಲ್ಲ. ಹೀಗಾಗಿ ತೈಲ ಬೆಲೆಗಳು ಉತ್ತರಾಭಿಮುಖಿಯಾಗಿವೆ. ಮುಂಬರುವ ದಿನಗಳಲ್ಲಿ ಕೂಡ ಜಾಗತಿಕ ತಲ್ಲಣಗಳು ತಪ್ಪಿದ್ದಲ್ಲ. ಅಲ್ಲದೆ ಜಗತ್ತು ನಿಧಾನವಾಗಿ ಕ್ಲೀನ್ ಎನೆರ್ಜಿ ಕಡೆಗೆ ವಾಲುತ್ತಿದೆ. ಭಾರತದಂತಹ ದೇಶದಲ್ಲಿ ಅಂದರೆ ವರ್ಷದ 365 ದಿನದಲ್ಲಿ 300 ದಿನಕ್ಕೂ ಹೆಚ್ಚು ಸೂರ್ಯನ ಶಾಖ ಇರುವ ದೇಶದಲ್ಲಿ ಸೋಲಾರ್ ಬಳಕೆಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿದರೆ ಮತ್ತು ಅದರಿಂದ EV ಚಾಲನೆ ಮಾಡಿದರೆ ಕಿಲೋಮೀಟರ್ ಗೆ ಐವತ್ತು ಪೈಸೆ ತಗಲುತ್ತದೆ. ಭಾರತದ ವಿದೇಶಿ ವಿನಿಮಯ ಕೂಡ ಒಂದಷ್ಟು ಉಳಿತಾಯವಾಗುತ್ತದೆ. ಹೀಗಾಗಿ EV ಖರೀದಿ ಎಲ್ಲಾ ರೀತಿಯಲ್ಲೂ ಉತ್ತಮ.
ಒಬ್ಬ ವ್ಯಕ್ತಿ ದಿನನಿತ್ಯ ನಗರದಲ್ಲಿ ಹೆಚ್ಚು ಪ್ರಯಾಣ ಮಾಡುತ್ತಿದ್ದರೆ, ಮನೆ ಅಥವಾ ಕಚೇರಿಯಲ್ಲಿ ಚಾರ್ಜಿಂಗ್ ವ್ಯವಸ್ಥೆ ಇದ್ದರೆ, ಮತ್ತು ದೀರ್ಘಕಾಲದ ಉಳಿತಾಯವನ್ನು ನೋಡುತ್ತಿದ್ದರೆ EV ಉತ್ತಮ ಆಯ್ಕೆ.ಆದರೆ ಹೆಚ್ಚು ಹೈವೇ ಪ್ರಯಾಣ, ದೂರದ ಊರುಗಳಿಗೆ ಸಂಚಾರ, ತಕ್ಷಣದ ಇಂಧನ ತುಂಬುವ ಸೌಲಭ್ಯ ಮತ್ತು ಈಗಾಗಲೇ ಸೃಷ್ಟಿಯಾಗಿರುವ ವಿಶ್ವಾಸ ಬೇಕಿದ್ದರೆ ಪೆಟ್ರೋಲ್ ಅಥವಾ ಡೀಸೆಲ್ ಕಾರು ಉತ್ತಮ ಆಯ್ಕೆ. ನೆನಪಿರಲಿ ನಮ್ಮ ಆಯ್ಕೆ ನಾವ್ಯಾರು ಎನ್ನುವುದನ್ನು ನಿರ್ಧರಿಸುತ್ತದೆ.
Advertisement