ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ, ಬೃಹತ್ IVF ದಂಧೆ ಬಟಾ ಬಯಲು!

ಇಂತಹ ಸಂಕಷ್ಟದ ಸಮಯದಲ್ಲಿ ಹಣದ ಆಸೆ ತೋರಿಸಿ 25 ವರ್ಷದ ಯುವತಿಯೊಬ್ಬಳನ್ನು ಅಂಡಾಣು ಮಾರಾಟ ಜಾಲಕ್ಕೆ ಸೆಳೆಯಲಾಗಿದೆ. ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಐವಿಎಫ್ (IVF) ದಂಧೆಯ ಕರಾಳ..
Egg Donation Racket
IVF ಕರಾಳ ದಂಧೆ ಬಟಾಬಯಲು
Updated on: 

ಹೈದರಾಬಾದ್: ತಂದೆಯ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಯುವತಿಯೊಬ್ಬಳು ತನ್ನ ಅಂಡಾಣು ಮಾರಾಟಕ್ಕೆ ಮುಂದಾದ ದಾರುಣ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ತಂದೆಯ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದವು. ಕಿಡ್ನಿ ಕಸಿ ಮಾಡಿಸಲು ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಬೇಕಿತ್ತು. ಮನೆಯ ಬಾಗಿಲಿಗೆ ಪ್ರತಿದಿನ ಸಾಲಗಾರರು ಬಂದು ಹಣ ವಾಪಸ್ ಕೇಳುತ್ತಿದ್ದರು.

ಇಂತಹ ಸಂಕಷ್ಟದ ಸಮಯದಲ್ಲಿ ಹಣದ ಆಸೆ ತೋರಿಸಿ 25 ವರ್ಷದ ಯುವತಿಯೊಬ್ಬಳನ್ನು ಅಂಡಾಣು ಮಾರಾಟ ಜಾಲಕ್ಕೆ ಸೆಳೆಯಲಾಗಿದೆ. ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಐವಿಎಫ್ (IVF) ದಂಧೆಯ ಕರಾಳ ಮುಖವಿದು.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ಈ ಯುವತಿ ಸೇರಿದಂತೆ ಒಟ್ಟು 43 ಮಹಿಳೆಯರನ್ನು ತೆಲಂಗಾಣದ ಮಲ್ಕಾಜ್‌ಗಿರಿ ಪೊಲೀಸರು ಅಕ್ಟೋಬರ್ 30ರಂದು ರಕ್ಷಿಸಿದ್ದಾರೆ.

ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಅಕ್ರಮವಾಗಿ ಮಹಿಳೆಯರ ಅಂಡಾಣು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

Egg Donation Racket
2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು, ಕೊಡಲಿಯಿಂದ ಕೊಚ್ಚಿ ಹತ್ಯೆ!

ತಂದೆಯ ಚಿಕಿತ್ಸೆಗಾಗಿ ಕುಟುಂಬ 3.5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿತ್ತು. ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದು, ನಾಲ್ವರು ಸಹೋದರ-ಸಹೋದರಿಯರು ಇನ್ನೂ ಓದುತ್ತಿದ್ದಾರೆ. ಕುಟುಂಬದ ಆರ್ಥಿಕ ಸಂಕಷ್ಟದಿಂದ ಹೊರಬರಲು ಯುವತಿ ಈ ಜಾಲದ ಆಮಿಷಕ್ಕೆ ಒಳಗಾಗಿದ್ದಾಳೆ.

"ನನ್ನ ತಂದೆಯ ಕಿಡ್ನಿಗಳು ವಿಫಲವಾಗಿದ್ದವು. ಅವರಿಗೆ ಕಿಡ್ನಿ ಕಸಿ ಮಾಡಿಸಬೇಕಿತ್ತು. ಇದಕ್ಕಾಗಿ ನಾವು 3.5 ಲಕ್ಷ ರೂಪಾಯಿ ಸಾಲ ಮಾಡಿದ್ದೆವು. ಸಾಲಗಾರರು ಪ್ರತಿದಿನ ಮನೆಗೆ ಬಂದು ಹಣ ಕೇಳುತ್ತಿದ್ದರು. ನನಗೆ ಮದುವೆಯ ಕನಸೂ ಇರಲಿಲ್ಲ. ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು" ಎಂದು ಯುವತಿ ಕಣ್ಣೀರಿಟ್ಟಿದ್ದಾಳೆ.

ಈ ಕೆಲಸಕ್ಕಾಗಿ ತನಗೆ 50 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದರು. ಹಣದ ಅವಶ್ಯಕತೆಯಿಂದ ಒಪ್ಪಿಕೊಂಡಿದ್ದೆ. ಆದರೆ, ಅಂಡಾಣು ಮಾರಾಟ ಮಾಡುವುದು ಕಾನೂನುಬಾಹಿರ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಆಕೆ ಹೇಳಿದ್ದಾಳೆ.

ಎರಡು ವರ್ಷಗಳಿಂದ ನಡೆಯುತ್ತಿದ್ದ ದಂಧೆ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಜಾಲವು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಂಕೆಯಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯುವತಿಯರನ್ನು ಗುರುತಿಸಿ, ಹಣದ ಆಮಿಷವೊಡ್ಡಿ ಹೈದರಾಬಾದ್‌ಗೆ ಕರೆತರಲಾಗುತ್ತಿತ್ತು. ಸಾಲದ ಹೊರೆ, ಬಡತನ ಮತ್ತು ಕುಟುಂಬದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಯರನ್ನು ಅವರ ಸಂಬಂಧಿಕರು ಮತ್ತು ಪರಿಚಯಸ್ಥರ ಮೂಲಕ ಸಂಪರ್ಕಿಸಲಾಗುತ್ತಿತ್ತು.

ಬಳಿಕ ಏಜೆಂಟ್‌ಗಳ ಮೂಲಕ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮಾಡಿ, ಹಾಸ್ಟೆಲ್‌ಗಳು ಹಾಗೂ ವಸತಿ ಗೃಹಗಳಲ್ಲಿ ಇರಿಸಲಾಗುತ್ತಿತ್ತು. ಅಲ್ಲಿಂದ ಅವರನ್ನು ಫಲವತ್ತತೆ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ದು ಅಂಡಾಶಯದಲ್ಲಿ ಅಂಡಾಣುಗಳ ಉತ್ಪಾದನೆ ಹೆಚ್ಚಿಸಲು ಹಾರ್ಮೋನ್ ಚುಚ್ಚುಮದ್ದು ನೀಡಲಾಗುತ್ತಿತ್ತು. ನಂತರ ಅಂಡಾಣುಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಹ್ಯೂಮೊಗ್ ಎಚ್‌ಪಿ 150 ಐಯು (Humog HP 150 IU) ಚುಚ್ಚುಮದ್ದಿನ ಐದು ಬಾಟಲಿಗಳು, ಸಿರಿಂಜ್, ಎರಡು ಸೂಜಿಗಳು ಹಾಗೂ ಹಾರ್ಮೋನ್ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಂಧೆಯಲ್ಲಿ 23 ಐವಿಎಫ್ ಕೇಂದ್ರಗಳ ಸಂಪರ್ಕವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Egg Donation Racket
ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!

ಕೆಲಸ ಕೊಡಿಸುವ ನೆಪದಲ್ಲಿ ವಂಚನೆ

ರಕ್ಷಿಸಲ್ಪಟ್ಟ ಮಹಿಳೆಯರು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದವರು. ಕೆಲವರಿಗೆ ಮಾತ್ರ ಹೈದರಾಬಾದ್‌ಗೆ ಕರೆತರುತ್ತಿರುವ ಉದ್ದೇಶದ ಬಗ್ಗೆ ತಿಳಿಸಲಾಗಿತ್ತು. ಇನ್ನು ಕೆಲವರಿಗೆ ಬೇರೆ ಕೆಲಸದ ಆಮಿಷವೊಡ್ಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಮೂಲದ 26 ವರ್ಷದ ಯುವತಿಗೆ ತಿಂಗಳಿಗೆ 40 ಸಾವಿರ ರೂಪಾಯಿ ಸಂಬಳದ ಕ್ಯಾಟರಿಂಗ್ ಕೆಲಸ ನೀಡುವುದಾಗಿ ಹೇಳಲಾಗಿತ್ತು. ಆದರೆ, ಹೈದರಾಬಾದ್‌ಗೆ ಬಂದ ನಂತರ ಅಂಡಾಣುಗಳನ್ನು ಮಾರಾಟ ಮಾಡಬೇಕೆಂಬ ವಿಷಯ ತಿಳಿದುಬಂದಿತ್ತು. ಈ ಪ್ರಕ್ರಿಯೆ ನೋವುರಹಿತವಾಗಿರುತ್ತದೆ ಎಂದು ಆಕೆಗೆ ಭರವಸೆ ನೀಡಲಾಗಿತ್ತು.

ಇನ್ನೊಬ್ಬ 25 ವರ್ಷದ ಮಹಿಳೆಯ ಪತಿ ಎರಡು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದ. 75 ವರ್ಷದ ಅಜ್ಜಿಯ ಆರೈಕೆಯ ಜವಾಬ್ದಾರಿಯೂ ಆಕೆಯ ಮೇಲಿತ್ತು. ಹೀಗಾಗಿ ಒಂದು ತಿಂಗಳ ಕೆಲಸಕ್ಕೆ 30 ಸಾವಿರ ರೂಪಾಯಿ ನೀಡುವುದಾಗಿ ಹೇಳಿದಾಗ ಒಪ್ಪಿಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ.

ಕೋಲ್ಕತ್ತಾದ 30 ವರ್ಷದ ಮಹಿಳೆಯೊಬ್ಬರಿಗೆ ಮಕ್ಕಳಿಲ್ಲದವರಿಗೆ ನೆರವಾಗುವ ಕೆಲಸ ಎಂದು ಹೇಳಲಾಗಿತ್ತು. ತನಗೆ 12 ವರ್ಷದ ಮಗಳಿದ್ದಾಳೆ. ಮಕ್ಕಳಿಲ್ಲದವರಿಗೆ ಸಹಾಯ ಮಾಡುವುದರ ಜೊತೆಗೆ ಹಣವೂ ಸಿಗುತ್ತದೆ ಎಂದು ಭಾವಿಸಿ ಒಪ್ಪಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ.

ಉತ್ತರ ಪ್ರದೇಶದ 33 ವರ್ಷದ ಮಹಿಳೆಯ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬದುಕುವುದೇ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಏಜೆಂಟ್ ಒಂದು ತಿಂಗಳ ಕೆಲಸಕ್ಕೆ 30 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದರಿಂದ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X