2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು, ಕೊಡಲಿಯಿಂದ ಕೊಚ್ಚಿ ಹತ್ಯೆ!

ಮೃತನನ್ನು ವಿಜಯ್ ಬಾಜಿಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹನೀಶ್ ಎಂದು ಗುರುತಿಸಲಾಗಿದ್ದು, ಈತನ ತಂದೆ ಕೈಲಾಶ್ ಅವರನ್ನು 2019ರಲ್ಲಿ ವಿಜಯ್ ಕೊಲೆ ಮಾಡಿದ್ದ ಎಂಬ ಆರೋಪವಿದೆ.
Fathers murder in 2019- revenge in 2026
ತಂದೆ ಕೊಲೆಗೆ ಸೇಡು ತೀರಿಸಿಕೊಂಡ ಮಗ
Updated on: 

ಜೈಪುರ: ಏಳು ವರ್ಷಗಳ ಹಿಂದೆ ತನ್ನ ತಂದೆಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಮಗನೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

2019ರಲ್ಲಿ ತಂದೆಯ ಕೊಲೆಯಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮಗ ತನ್ನ ಮೂವರು ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರದ ಜಗದಂಬಾ ನಗರ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಮೃತನನ್ನು ವಿಜಯ್ ಬಾಜಿಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹನೀಶ್ ಎಂದು ಗುರುತಿಸಲಾಗಿದ್ದು, ಈತನ ತಂದೆ ಕೈಲಾಶ್ ಅವರನ್ನು 2019ರಲ್ಲಿ ವಿಜಯ್ ಕೊಲೆ ಮಾಡಿದ್ದ ಎಂಬ ಆರೋಪವಿದೆ.

Fathers murder in 2019- revenge in 2026
ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!

2019ರ ಕೊಲೆಗೆ 2026ರಲ್ಲಿ ಸೇಡು

ಪೊಲೀಸರ ಪ್ರಕಾರ, ಕೈಲಾಶ್ ಮತ್ತು ವಿಜಯ್ ಕುಟುಂಬಗಳು ಹಿಂದೆ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದವು. ಅವರ ಮನೆಗಳ ನಡುವೆ ಸುಮಾರು 500 ಮೀಟರ್ ಅಂತರವಿತ್ತು. ಆದರೆ, ಎರಡು ಕುಟುಂಬಗಳ ನಡುವೆ ವೈಯಕ್ತಿಕ ದ್ವೇಷ ಬೆಳೆದಿತ್ತು.

2019ರಲ್ಲಿ ಮದ್ಯದಂಗಡಿಯೊಂದರ ಬಳಿ ಕೈಲಾಶ್ ಅವರನ್ನು ವಿಜಯ್ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವಿಜಯ್ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎನ್ನಲಾಗಿದೆ.

ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಕೈಲಾಶ್ ಪುತ್ರ ಹನೀಶ್ ಹಲವು ಬಾರಿ ವಿಜಯ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಈ ಘಟನೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದರು.

ಕಾರಿನಿಂದ ಡಿಕ್ಕಿ ಹೊಡೆದು ಕೊಡಲಿಯಿಂದ ದಾಳಿ

ಬುಧವಾರ ಮತ್ತೆ ಹನೀಶ್ ಮತ್ತು ವಿಜಯ್ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ತನ್ನ ಮೂವರು ಸಹಚರರಾದ ಯುವರಾಜ್ ಚೌಧರಿ, ದಿನೇಶ್ ಮತ್ತು ಕಮಲೇಶ್ ಜೊತೆ ಸೇರಿ ವಿಜಯ್ ಹತ್ಯೆಗೆ ಹನೀಶ್ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆಯಿಂದಲೇ ಆರೋಪಿಗಳು ಕ್ಯಾಂಪರ್ ವಾಹನದಲ್ಲಿ ವಿಜಯ್‌ನನ್ನು ಹಿಂಬಾಲಿಸುತ್ತಿದ್ದರು. ಸಂಜೆ 7.15ರ ಸುಮಾರಿಗೆ ವಿಜಯ್ ತನ್ನ ಕಾರಿನಲ್ಲಿ ಕಲ್ವಾರ್‌ನಲ್ಲಿರುವ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ತಮ್ಮ ವಾಹನದಿಂದ ಆತನ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯಿಂದ ಕಾರು ನಿಂತ ತಕ್ಷಣ ವಿಜಯ್ ಹೊರಬಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಕೊಡಲಿ ಹಿಡಿದು ಬೆನ್ನಟ್ಟಿದ ಹನೀಶ್ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಲ್ಲೆ ವೇಳೆ ಕೊಡಲಿ ಆತನ ತಲೆಬುರುಡೆಯಲ್ಲೇ ಸಿಲುಕಿಕೊಂಡಿತ್ತು. ಬಳಿಕ ನಾಲ್ವರೂ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Fathers murder in 2019- revenge in 2026
ಸಿಹಿ ರಸಗುಲ್ಲಾ ಎಂದು ನಂಬಿ ಬಾಯಿಗಿಟ್ಟ ಯುವಕ; ಕ್ಷಣಾರ್ಧದಲ್ಲೇ ಸ್ಫೋಟಗೊಂಡ ಹಂದಿ ಕೊಲ್ಲುವ ಬಾಂಬ್, 35 ವರ್ಷದ ವ್ಯಕ್ತಿ ಬಲಿ!

ಸಿಸಿಟಿವಿ ದೃಶ್ಯಗಳಿಂದ ಆರೋಪಿಗಳ ಪತ್ತೆ

ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರು ಚಿತ್ರೀಕರಿಸಿದ್ದ ವಿಡಿಯೊಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

ಇವುಗಳ ಆಧಾರದ ಮೇಲೆ ಕೃತ್ಯಕ್ಕೆ ಬಳಸಿದ್ದ ಕ್ಯಾಂಪರ್ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದರು. ಬುಧವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು, ಪೊಲೀಸರು ವಾಹನವನ್ನು ತಡೆದು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕ್ಯಾಂಪರ್ ವಾಹನವನ್ನು ಕೂಡ ಜಪ್ತಿ ಮಾಡಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಕೊಲೆಯಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾವೇ ಪೊಲೀಸ್ ಠಾಣೆಗೆ ಶರಣಾಗಲು ತೆರಳುತ್ತಿದ್ದಾಗ ಪೊಲೀಸರು ತಮ್ಮನ್ನು ತಡೆದು ವಶಕ್ಕೆ ಪಡೆದರು ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ.

ಬಂಧಿತರ ಪೈಕಿ ಮೂವರಿಗೆ ಈ ಹಿಂದೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಪ್ರಶಾಂತ್ ಕಿರಣ್ ಅವರ ನೇತೃತ್ವದಲ್ಲಿ ಎಸಿಪಿ ಶಿವಕುಮಾರ್ ಭಾರ್ದ್ವಾಜ್ ಮತ್ತು ಕರಧಾನಿ ಠಾಣೆಯ ಇನ್‌ಸ್ಪೆಕ್ಟರ್ ಸವಾಯಿ ಸಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X