

ಕ್ಯಾಲಿಫೋರ್ನಿಯಾದ ಸ್ಯಾನ್ ಜೋಕ್ವಿನ್ ಕಣಿವೆಯ ಬಳಿಯ ರಿವರ್‌ಡೇಲ್ ಸಮೀಪದಲ್ಲಿ ಜೋ ಕೊಯೆಲ್ಹೊ ಅವರ ಕುಟುಂಬ ಹಲವಾರು ತಲೆಮಾರುಗಳಿಂದ ಕೃಷಿ ನಡೆಸುತ್ತಾ ಬಂದಿದೆ. ಗೇಮ್ ಆಫ್ ಥ್ರೋನ್ಸ್ ಎಂಬ ಜನಪ್ರಿಯ ಸರಣಿಯ ರಾಜರ ಹೆಸರಿನ ರೀತಿಯಲ್ಲಿ, ತನ್ನ ಕುಟುಂಬದಲ್ಲಿ ಜೋ ಎನ್ನುವ ಹೆಸರಿನ ಐದನೇ ವ್ಯಕ್ತಿ ತಾನು ಎಂದು ಜೋ ಕೊಯೆಲ್ಹೊ ತಮಾಷೆ ಮಾಡುತ್ತಾರೆ.
ಹಲವಾರು ವರ್ಷಗಳ ಕಾಲ, ಅವರ ಕುಟುಂಬ ಒಂದು ಡೈರಿ ಫಾರ್ಮ್ ನಡೆಸುತ್ತಾ ಬಂದಿತ್ತು. ಆದರೆ, 2021ರಲ್ಲಿ ಅವರು ತಮ್ಮ ಹಸುಗಳನ್ನು ಮಾರಾಟ ಮಾಡಿ, ಹೈನುಗಾರಿಕೆಯ ಬದಲು ಪಿಸ್ತಾಶಿಯೊ (ಪಿಸ್ತಾ) ಮರಗಳ ಕೃಷಿ ಆರಂಭಿಸಿದರು. ಪಿಸ್ತಾ ಬೆಳೆಗೆ ಈ ಕಣಿವೆಯ ಬಿಸಿಯಾದ, ಒಣ ವಾತಾವರಣ ಅತ್ಯಂತ ಸೂಕ್ತವಾಗಿದೆ. ಆದ್ದರಿಂದ ಉದ್ದಿಮೆಯಲ್ಲಿ ಕುಟುಂಬ ಕೈಗೊಂಡ ಬದಲಾವಣೆ ಅವರಿಗೆ ಉತ್ತಮ ಲಾಭವನ್ನೇ ತಂದುಕೊಟ್ಟಿತು.
ಮೇ ತಿಂಗಳಲ್ಲಿ, ಪ್ರತಿ ಪೌಂಡ್ (0.45 ಕೆಜಿ) ಪಿಸ್ತಾಶಿಯೊ ಅಮೆರಿಕದಲ್ಲಿ 5.30 ಡಾಲರ್‌ಗೆ (ಅಂದಾಜು 509 ರೂಪಾಯಿ) ಮಾರಾಟವಾಗುತ್ತಿತ್ತು ಎಂದು ಮಾರುಕಟ್ಟೆ ಮಾಹಿತಿ ಕಂಪನಿ ಎಕ್ಸ್‌ಪಾನಾ ತಿಳಿಸಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಪಿಸ್ತಾ ಹೊಂದಿದ್ದ ಅತ್ಯಧಿಕ ಮಾರಾಟ ದರವಾಗಿದೆ. ಇದಕ್ಕೆ ಮುಖ್ಯ ಕಾರಣವೇನು? ಅದು ಇರಾನಿನಲ್ಲಿ ನಡೆಯುತ್ತಿದ್ದ ಯುದ್ಧ!
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಮುಂದುವರಿಯುತ್ತಿರುವಂತೆ, ಈ ಯುದ್ಧ ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡಿದೆ ಎಂದು ಶ್ವೇತ ಭವನ ಹೇಳಿಕೆ ನೀಡಿದೆ. ಆದರೆ, ಇರಾನಿನ ಪರಮಾಣು ಯೋಜನೆಗಳನ್ನು ನಿಲ್ಲಿಸುವುದು, ಅಥವಾ ಬೆಲೆಗಳನ್ನು ಇಳಿಸುವಂತಹ ಉದ್ದೇಶಗಳು ಈಡೇರಿವೆಯೇ ಎಂದರೆ, ಶ್ವೇತ ಭವನದ ಹೇಳಿಕೆ ನಿಜವಾಗಿಲ್ಲ. ಇಷ್ಟಾದರೂ, ಅಮೆರಿಕದ ಒಂದು ಗುಂಪಿನ ಜನರಿಗೆ ಮಾತ್ರ ನಿಜಕ್ಕೂ ಲಾಭವಾಗಿದೆ. ಅವರು ಯಾರೆಂದರೆ, ಕ್ಯಾಲಿಫೋರ್ನಿಯಾದ ಅಂದಾಜು 950 ಪಿಸ್ತಾ ಬೆಳೆಗಾರರು!
ಇಲ್ಲೊಂದು ಆಸಕ್ತಿಕರ ಇತಿಹಾಸವಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಇರಾನಿನಲ್ಲಿ ಪಿಸ್ತಾ ಮರಗಳು ಬೆಳೆಯುತ್ತಿದ್ದವು. ಒಂದು ಕಾಲದಲ್ಲಿ ಇರಾನ್ ಜಗತ್ತಿನ ಅತಿದೊಡ್ಡ ಪಿಸ್ತಾ ಪೂರೈಕೆದಾರನಾಗಿತ್ತು. ಆದರೆ, 1979ರ ಇರಾನಿನ ಒತ್ತೆಯಾಳು ಬಿಕ್ಕಟ್ಟು ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ 25 ಮಿಲಿಯನ್ ಪೌಂಡ್‌ಗಳಷ್ಟು (ಅಂದಾಜು 11.3 ಮಿಲಿಯನ್ ಕೆಜಿ) ಇರಾನಿಯನ್ ಪಿಸ್ತಾ ಆಮದನ್ನು ನಿಷೇಧಿಸಿದರು.
ಬಳಿಕ, 1980ರ ದಶಕದಲ್ಲಿ, ಅಮೆರಿಕನ್ ರೈತರು ಇರಾನ್ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸುವ ಸಲುವಾಗಿ ತೀರಾ ಕಡಿಮೆ ಬೆಲೆಗೆ ಪಿಸ್ತಾಶಿಯೊ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು. ಆದ್ದರಿಂದ, ಅಮೆರಿಕ ಇರಾನಿಯನ್ ಪಿಸ್ತಾ ಮೇಲೆ 241% ಟ್ಯಾರಿಫ್ (ಆಮದು ಸುಂಕ) ವಿಧಿಸಿತು. ಅತಿಯಾದ ಆಮದು ಸುಂಕ ವಿದೇಶೀ ಉತ್ಪನ್ನಗಳನ್ನು ಎಷ್ಟು ದುಬಾರಿಯಾಗಿಸುತ್ತದೆ ಎಂದರೆ, ಗ್ರಾಹಕರು ತಮ್ಮ ದೇಶದ ಉತ್ಪನ್ನಗಳನ್ನು ಆಯ್ಕೆ ಮಾಡುವಂತಾಗುತ್ತದೆ. ಈ ಕ್ರಮ ಕ್ಯಾಲಿಫೋರ್ನಿಯಾದ ರೈತರನ್ನು ರಕ್ಷಿಸಿತು. ಕ್ಯಾಲಿಫೋರ್ನಿಯಾದ ಪಿಸ್ತಾ ಉದ್ಯಮ ಬೆಳವಣಿಗೆ ಕಂಡು, 2025ರ ವೇಳೆಗೆ ಜಗತ್ತಿನ ಒಟ್ಟು ಪಿಸ್ತಾದ 60% ಉತ್ಪಾದನೆ ನಡೆಸಿತು.
ಇತ್ತೀಚೆಗೆ, ಒಂದು ಅನಿರೀಕ್ಷಿತ ಕಾರಣದಿಂದ ಲಾಭಾಂಶ ಮತ್ತೊಮ್ಮೆ ಹೆಚ್ಚಾಗತೊಡಗಿತು. ಪಿಸ್ತಾಶಿಯೊ ಕ್ರೀಮ್ ಹೊಂದಿರುವ ದುಬೈ ಚಾಕೋಲೇಟ್ ಇದ್ದಕ್ಕಿದ್ದಂತೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯಿತು. ಇದಕ್ಕೆ ಬೇಡಿಕೆ ಹೆಚ್ಚಾದಂತೆ, ಬೆಲೆಗಳು 25%ಕ್ಕೂ ಹೆಚ್ಚಾಗಿ, ಡಿಸೆಂಬರ್ 2023ರಲ್ಲಿದ್ದ 3.28 ಡಾಲರ್‌ನಿಂದ (ಅಂದಾಜು 315 ರೂಪಾಯಿ) ಒಂದು ವರ್ಷದ ಬಳಿಕ 4.14 ಡಾಲರ್ (397 ರೂಪಾಯಿ) ತಲುಪಿತು.
ಬಳಿಕ ಇರಾನ್ ಯುದ್ಧ ಆರಂಭಗೊಂಡಾಗ ಪೂರೈಕೆ ಇನ್ನಷ್ಟು ವ್ಯತ್ಯಯ ಕಂಡಿತು. ಸಿಪ್ಪೆ ಸಹಿತವಾದ ಪಿಸ್ತಾಶಿಯೊ ರಫ್ತು 30 ದಿನಗಳ ಅವಧಿಯಲ್ಲಿ, ಅಂದರೆ ಮೇ 21ರ ವೇಳೆಗೆ 31% ಕುಸಿತ ಕಂಡಿತು. ಇರಾನಿನ ಪೂರೈಕೆ ಕಡಿಮೆಯಾದಂತೆ ಕ್ಯಾಲಿಫೋರ್ನಿಯಾದ ಕೃಷಿಕರು ಖುಷಿಯಿಂದ ಪೂರೈಕೆ ಆರಂಭಿಸಿದರು.
ಭಾರತವೂ ಇಲ್ಲೇ ಚಿತ್ರಣವನ್ನು ಪ್ರವೇಶಿಸಿತು. ನಾವು ಭಾರತೀಯರು ಪಿಸ್ತಾ ಪ್ರಿಯರೇ. ನಾವು ನಮ್ಮ ಬರ್ಫಿಗಳು, ಖೀರು, ಬಿರಿಯಾನಿಗಳು, ಮತ್ತು ಹಬ್ಬದ ಸಿಹಿತಿನಿಸುಗಳಲ್ಲಿ ಪಿಸ್ತಾ ಬೆರೆಸುತ್ತೇವೆ. ಯಾವಾಗ ಜಾಗತಿಕ ಪಿಸ್ತಾ ದರಗಳು ಹೆಚ್ಚಾಗುತ್ತವೋ, ಆಗ ನಮ್ಮ ಸಿಹಿತಿಂಡಿಯ ಅಂಗಡಿಗಳು ಮತ್ತು ಕುರುಕಲು ತಿಂಡಿಯ ಬ್ರ್ಯಾಂಡ್‌ಗಳಿಗೂ ಇದರ ಬಿಸಿ ಮುಟ್ಟುತ್ತದೆ. ದೂರದ ಇರಾನಿನಲ್ಲಿ ನಡೆಯುವ ಯುದ್ಧದ ಪರಿಣಾಮವಾಗಿ ನಮ್ಮ ದೀಪಾವಳಿ ಮಿಠಾಯಿಗಳ ಪಿಸ್ತಾ ಬೆಲೆಯೂ ಹೆಚ್ಚಾಗುತ್ತದೆ. ದೂರದ ಯುದ್ಧಗಳ ಬಿಸಿ ನಿಧಾನವಾಗಿ ಹೇಗೆ ನಮ್ಮ ಅಡುಗೆಮನೆಯನ್ನೂ ಪ್ರವೇಶಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಆದರೂ ನಾನು ಈ ಯುದ್ಧದ ಕುರಿತು ಸಂತಸ ಹೊಂದಿಲ್ಲ ಎಂದು ಕೊಯೆಲ್ಹೊ ಹೇಳಿದ್ದಾರೆ. ಹೌದು, ಯುದ್ಧದ ಕುರಿತು ಯಾರೂ ಸಂಭ್ರಮಿಸಬಾರದು. ಆದರೆ, ಈ ಯುದ್ಧದಿಂದಾಗಿ ಜಾಗತಿಕ ಪಿಸ್ತಾ ಪೂರೈಕೆ ತಗ್ಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಇದು ಕೊಯೆಲ್ಹೊ ಅವರಂತಹ ರೈತರಿಗೆ ಸುವರ್ಣಾವಕಾಶ ಕಲ್ಪಿಸಿದೆ.
ಈಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯೆಂದರೆ: ಈ ಒಳ್ಳೆ ಸಮಯ ಎಷ್ಟು ಕಾಲ ಮುಂದುವರಿಯಲಿದೆ? ಒಂದು ವೇಳೆ ಶಾಂತಿ ಸ್ಥಿರವಾಗಿದ್ದರೆ, ಇರಾನಿನ ರಫ್ತು ಮತ್ತೆ ಹಳೆಯ ಮಟ್ಟಕ್ಕೆ ತಲುಪಬಹುದು. ವರದಿಗಳ ಪ್ರಕಾರ, ಇರಾನಿನ ಬಹುತೇಕ ಹಣ್ಣು ಮತ್ತು ಬೀಜಗಳು ಬೆಳೆಯುವ ಪ್ರದೇಶಗಳಿಗೆ ಅಂತಹ ಹೇಳಿಕೊಳ್ಳುವ ಹಾನಿ ಉಂಟಾಗಿಲ್ಲ. ಆದ್ದರಿಂದ, ಮಾರುಕಟ್ಟೆ ಶಾಶ್ವತವಾಗಿ ಬದಲಾಗದಿದ್ದರೆ, ಈ ಹೆಚ್ಚುವರಿ ಲಾಭ ಬಹುಶಃ ಮುಂದುವರಿಯುವುದಿಲ್ಲ. ಒಂದು ಬಾರಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೆ, ಹಳೆಯ ಕಷ್ಟಗಳೂ ಮರಳಲಿವೆ.
ಅಮೆರಿಕದಲ್ಲಿ ಇನ್ನೂ ಒಂದು ಆತಂಕವೂ ಉಂಟಾಗಿದೆ. ಉಷ್ಣ ಅಲೆಯ ಪರಿಣಾಮವಾಗಿ ಬಹಳಷ್ಟು ಕ್ಯಾಲಿಫೋರ್ನಿಯಾ ತೋಟಗಳಿಗೆ ಹಾನಿ ಉಂಟುಮಾಡಿವೆ. ಕೊಯೆಲ್ಹೊ ಅವರೂ ತನ್ನ ಪಿಸ್ತಾ ಗಿಡದ ಸಣ್ಣ ಗೆಲ್ಲನ್ನು ತೋರಿಸಿ, ಈ ಗಿಡಗಳು ವಿಪರೀತ ಉಷ್ಣದ ಪರಿಣಾಮವಾಗಿ ಹೇಗೆ ಸುಟ್ಟಂತಾಗಿವೆ ಎಂದು ಗಮನಿಸಬಹುದು ಎಂದಿದ್ದಾರೆ.
ಪಿಸ್ತಾಶಿಯೊ ಗಿಡಗಳು ಒಂದು ವರ್ಷ ಉತ್ತಮ ಇಳುವರಿ ನೀಡಿದರೆ, ಮುಂದಿನ ವರ್ಷ ಕಡಿಮೆ ಇಳುವರಿ ನೀಡುತ್ತವೆ. ಈ ನೈಸರ್ಗಿಕ ಸರಣಿಯನ್ನು 'ಆಲ್ಟರ್ನೇಟ್ ಬೇರಿಂಗ್' ಎಂದು ಕರೆಯಲಾಗುತ್ತದೆ. ಇದನ್ನು ರೈತರು ಬದಲಾಯಿಸಲು ಸಾಧ್ಯವಿಲ್ಲ. ಈ ವರ್ಷ ಮೊದಲೇ ಕಡಿಮೆ ಇಳುವರಿ ನಿರೀಕ್ಷಿಸಲಾಗಿತ್ತು. ಹೀಗಿರುವಾಗಲೇ ಉಷ್ಣ ಅಲೆ ಕಾಣಿಸಿಕೊಂಡಿತು. ಇಂಟರ್ನ್ಯಾಷನಲ್ ನಟ್ ಆ್ಯಂಡ್ ಡ್ರೈಡ್ ಫ್ರುಟ್ ಕೌನ್ಸಿಲ್ ಪ್ರಕಾರ, 2026ರಲ್ಲಿ ಅಮೆರಿಕದ ಪಿಸ್ತಾಶಿಯೊ ಉತ್ಪಾದನೆ ಅರ್ಧದಷ್ಟು ಕುಸಿತ ಕಾಣಲಿದೆ. ದೀರ್ಘಾವಧಿಯಲ್ಲಿ, ಅಂತರ್ಜಲ ಹೊರತೆಗೆಯುವುದರ ಮೇಲಿನ ನಿರ್ಬಂಧಗಳು ಉತ್ಪಾದನೆಯನ್ನು ಇನ್ನಷ್ಟು ಕಡಿತಗೊಳಿಸಬಹುದು.
ಇದರ ಪರಿಣಾಮವಾಗಿ ಬೆಲೆಗಳು ಹೆಚ್ಚಾಗಬಹುದು. ಆದರೆ, ಹೆಚ್ಚಿನ ದರ ಲಾಭ ತರುತ್ತದೆ ಎನ್ನಲಾಗದು. ಏಕೆಂದರೆ, ರೈತರ ಬಳಿ ಮಾರಾಟ ಮಾಡಲು ಕಡಿಮೆ ಪಿಸ್ತಾ ಲಭಿಸುತ್ತದೆ. ಕೆಲವು ರೈತರಂತೂ ಕೃಷಿಯನ್ನು ಹಾಗೇ ಕೈಬಿಟ್ಟಿದ್ದಾರೆ.
ಪಿಸ್ತಾದ ಚಿತ್ರಣ ಈಗ ಮಿಶ್ರ ಚಿತ್ರಣವಾಗಿದೆ. ಯುದ್ಧದ ಪರಿಣಾಮವಾಗಿ ಅಮೆರಿಕದ ಪಿಸ್ತಾಶಿಯೊ ಬೆಳೆಗಾರರಿಗೆ ಸದ್ಯದ ಮಟ್ಟಿಗೆ ನೆರವು ನೀಡಿದೆ. ಆದರೆ, ಕೃಷಿಯಲ್ಲೂ ಉತ್ತಮ ಇಳುವರಿ ಮತ್ತು ಉತ್ತಮ ಬೆಳೆಯ ಅವಧಿ ಇರುವಂತೆ, ಈ ಪರಿಸ್ಥಿತಿಯೂ ಶೀಘ್ರವಾಗಿಯೇ ಬದಲಾಗಬಹುದು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com