

ಪಶ್ಚಿಮ ಬಂಗಾಳದಲ್ಲಿ 2011ರ ವಿಧಾನಸಭಾ ಚುನಾವಣೆ. ಕಮ್ಯುನಿಸ್ಟರ ಭದ್ರಕೋಟೆಯನ್ನು ಕೆಡವಿ ಮಮತಾ ಬ್ಯಾನರ್ಜಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು. ಎಡರಂಗದ 34 ವರ್ಷಗಳ ಆಳ್ವಿಕೆಗೆ ಅಂತ್ಯ ಹಾಡಿದ್ದರು. ಆಗ ಮಮತಾ ಬ್ಯಾನರ್ಜಿ ಧೀರೋದಾತ್ತದಿಂದ ಹೇಳಿದ್ದು- ಹಲವು ವರ್ಷಗಳ ದೌರ್ಜನ್ಯದ ವಿರುದ್ಧ ಜನತೆಯ ವಿಜಯ ಇದು.
ಬಿಜೆಪಿ ಇದೇ ಮಾತನ್ನು ಮಮತಾ ಅವರಿಗೆ ತಿರುಗಿಸಲು ಈಗ ಕಸರತ್ತು ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳ ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜನರ ಮೇಲೆ ದೌರ್ಜನ್ಯ ನಡೆದಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಬಾಂಗ್ಲಾ ನುಸುಳುಕೋರರ ರಕ್ಷಣೆ ಆಗುತ್ತಿದೆ. ಇದು ಮಹಾಜಂಗಲ್‌ರಾಜ್. ಮಮತಾ ದೀದಿಗೆ ತಕ್ಕ ಪಾಠ ಕಲಿಸಿ. ಇದು ಬಿಜೆಪಿಯ ವಾಗ್ದಾಳಿ. ಕಾಲಚಕ್ರ ಉರುಳುತ್ತಿದೆಯೇ?
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್- ಮೇ ಹೊತ್ತಿಗೆ ವಿಧಾನಸಭಾ ಚುನಾವಣೆ. ಒಟ್ಟು 294 ಕ್ಷೇತ್ರಗಳು. ಪಶ್ಚಿಮ ಬಂಗಾಳದ ‘ಅಗ್ನಿಕನ್ಯೆ’ ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ. ಇತ್ತ ಬಿಜೆಪಿಗೆ ಮಮತಾ ಆಡಳಿತದ ವೈಫಲ್ಯವೇ ಅಸ್ತ್ರ. ಬತ್ತಳಿಕೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬ ಬಾಣ.
ಮಮತಾ ದೀದಿ ಸ್ಟ್ರೀಟ್ ಫೈಟರ್. ಕೆಣಕಿದಷ್ಟು ಕೆರಳುತ್ತಾರೆ. ಸಂಕಷ್ಟಕ್ಕೆ ಒಳಗಾದಷ್ಟೂ ಸಿಡಿದೇಳುವ ಗುಣ. ರಾಜಕಾರಣದಲ್ಲಿ ತನ್ನ ನೆಲೆಯ ಉಳಿವಿಗಾಗಿ ಮಾಡು ಇಲ್ಲ ಮಡಿ ಹೋರಾಟ. ಅವರ ಮುಸ್ಲಿಂ ಓಲೈಕೆ ರಾಜಕಾರಣ ಹಿಂದೂ ಮತಗಳ ಧ್ರುವೀಕರಣಕ್ಕೆ ಇಂಬು. ಮಮತಾ ವೋಟು ಬ್ಯಾಂಕ್ ರಾಜಕಾರಣ ಮಾಡಿದಷ್ಟೂ ಬಿಜೆಪಿ ಮತ್ತೊಂದು ದಿಕ್ಕಿನಲ್ಲಿ ತನ್ನ ಹಿಂದುತ್ವದ ರಾಜಕಾರಣವನ್ನು ಗಟ್ಟಿಗೊಳಿಸುತ್ತಿದೆ. ದಶಕಗಳ ಕಾಲ ಕಮ್ಯುನಿಸ್ಟರು ಆಳಿದ ನಾಡಿನಲ್ಲಿ ಈಗ ಕೋಮು ಆಧರಿತ ರಾಜಕಾರಣದ ಸಪ್ಪಳ.
ಬಿಜೆಪಿಯ ಪೂರ್ವಾಶ್ರಮದ ಪಕ್ಷ ಜನಸಂಘ. ಈ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಪಶ್ಚಿಮ ಬಂಗಾಳದವರು. ಜನಸಂಘಕ್ಕೆ ಪಶ್ಚಿಮ ಬಂಗಾಳದಲ್ಲಿ ನೆಲೆ ಇರಲಿಲ್ಲ. ನಂತರ ಬಿಜೆಪಿಯ ಕಮಲ ಅರಳಲು ಆಗಿರಲಿಲ್ಲ. ಮಮತಾ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ ಅತ್ತ ಬಿಜೆಪಿ ಮಮತಾ ಅವರಿಗೆ ಎದುರಾಳಿಯಾಗಿ ನಿಂತಿತ್ತು. ಎಡರಂಗ- ಕಾಂಗ್ರೆಸ್ ಮೈತ್ರಿಕೂಟ ಶೂನ್ಯ ಸಂಪಾದಿಸಿ ನೆಲಕಚ್ಚಿತ್ತು. ತೃತೀಯ ಶಕ್ತಿಗೆ ಆಸ್ಪದವೇ ಇಲ್ಲದಂತ ಪರಿಸ್ಥಿತಿ. ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮೈತ್ರಿಕೂಟವಿಲ್ಲ. ಪರಸ್ಪರ ನೇರ ಎದುರಾಳಿಗಳು.
ರಾಷ್ಟ್ರರಾಜಕಾರಣದಲ್ಲಿ ಇಂಡಿಯಾ ಕೂಟದಲ್ಲಿರುವ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗೆ ಸೀಟು ಬಿಟ್ಟುಕೊಡಲು ಸಿದ್ದವಿಲ್ಲ. ಹಾಗೇ ನೋಡಿದರೆ ಕಾಂಗ್ರೆಸ್ಸಿನ ಒಡಲಿನಿಂದಲೇ ಸಿಡಿದೆದ್ದು 1 ಜನವರಿ 1998 ರಂದು ಉದ್ಭವಿಸಿದ ಪಕ್ಷ ತೃಣಮೂಲ ಕಾಂಗ್ರೆಸ್. ಮಮತಾ ಬ್ಯಾನರ್ಜಿ ಒಂದು ಕಾಲದಲ್ಲಿ ಕಟ್ಟಾ ಕಾಂಗ್ರೆಸ್ಸಿಗರು. ಆ ಪಕ್ಷದಿಂದ ಲೋಕಸಭಾ ಸದಸ್ಯರು, ಕೇಂದ್ರದಲ್ಲಿ ಸಚಿವರೂ ಆಗಿದ್ದವರು.
ಅದು 1990ನೇ ಇಸವಿ. ಮಮತಾ ಬ್ಯಾನರ್ಜಿ ಯುವ ಕಾಂಗ್ರೆಸ್ ನಾಯಕರು. ಕೋಲ್ಕತ್ತಾದಲ್ಲಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ಸಿಗರ ಪ್ರತಿಭಟನೆ. ಕಮ್ಯುನಿಸ್ಟ್ ಕಾರ್ಯಕರ್ತರು ಪ್ರತಿಭಟನೆಯನ್ನು ತಡೆದು ಹಿಂಸಾಚಾರಕ್ಕೆ ಇಳಿದರು. ಮಮತಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ತಲೆಗೆ ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಣಾಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದರು.
ಮಮತಾ ಬಹಳ ದಿನಗಳ ಕಾಲ ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆಗ ಆಡಳಿತದಲ್ಲಿದ್ದ ಸಿಪಿಐ (ಎಂ) ಮಮತಾ ಅವರನ್ನು ಡ್ರಾಮಾ ಕ್ವೀನ್ ಅಂತ ಟೀಕಿಸಿತು. ಆಗ ಮಮತಾ ಹೇಳಿದ್ದು ಏನು ಗೊತ್ತೇ? ಅವರು ನನ್ನ ತಲೆ ಬುರುಡೆ ಒಡೆಯಬಹುದು. ನನ್ನ ಮೂಳೆಗಳನ್ನು ಮುರಿಯಬಹುದು. ಆದರೆ, ನನ್ನ ಹೋರಾಟದ ಕಿಚ್ಚನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೀದಿ ಅವತ್ತೂ ಸ್ಟ್ರೀಟ್ ಫೈಟರ್, ಇವತ್ತೂ ಸ್ಟ್ರೀಟ್ ಫೈಟರ್. ಅಧಿಕಾರ ಅವರ ಹೋರಾಟದ ಗುಣವನ್ನು ಕಿಂಚಿತ್ತೂ ಕಸಿದಿಲ್ಲ.
ಮಮತಾ ಬ್ಯಾನರ್ಜಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದು 1983ರಲ್ಲಿ. ಆಗ ಅವರಿಗೆ 28 ವರುಷ. ಅದು 1984ರ ಲೋಕಸಭಾ ಚುನಾವಣೆ. ಮಮತಾ ಬ್ಯಾನರ್ಜಿ ಜಾಧವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಹಿರಿಯ ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ಅವರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಆದರೆ 1989ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಗೆಲುವು ಕಾಣಲಿಲ್ಲ. ನಂತರ 1991ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪಿ.ವಿ.ನರಸಿಂಹರಾವ್ ಸರಕಾರದಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಖಾತೆ ರಾಜ್ಯ ಸಚಿವರಾದರು. ಕಾಂಗ್ರೆಸ್‌ನಿಂದ ಹೊರ ಬಂದ ನಂತರ ಬಿಜೆಪಿ ಜೊತೆ ಮೈತ್ರಿ ಸಾಧಿಸಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲೂ ಮಂತ್ರಿಯಾಗಿದ್ದವರು.
ಮಮತಾ ಬ್ಯಾನರ್ಜಿ ಎಡರಂಗ ಸರಕಾರದ ವೈಫಲ್ಯಗಳ ವಿರುದ್ಧ ಬೀದಿ ಹೋರಾಟ ನಡೆಸಿದರು. ನಂದಿಗ್ರಾಮ ಮತ್ತು ಸಿಂಗೂರು ಹೋರಾಟ ಅವರ ರಾಜಕೀಯ ಜೀವನದಲ್ಲಿ ಮಹತ್ವದ ತಿರುವು. ಪಶ್ಚಿಮ ಬಂಗಾಳದ ರಾಜಕೀಯ ದಿಕ್ಕು ಬದಲಿಸಿದ ಸಂಗ್ರಾಮ ಇದು. ಆ ರಾಜ್ಯದಲ್ಲಿ 2011ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಏರಿದರು. ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ. ನಂತರ 2016 ಹಾಗೂ 2021ರಲ್ಲೂ ಅವರ ಕೊರಳಿಗೇ ವಿಜಯದ ಮಾಲೆ. ಆದರೆ, 2021ರ ಚುನಾವಣೆಯಲ್ಲಿ ಅವರ ಪಕ್ಷ ವಿಜಯದ ಪತಾಕೆ ಹಾರಿಸಿದರೂ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಸ್ವತಃ ಸೋಲು ಕಂಡರು. ನಂತರ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಂಡಿದ್ದು ಇತಿಹಾಸ.
ಮಮತಾ ಬ್ಯಾನರ್ಜಿ ಅವರಿಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ 1977 ರಿಂದ 2000ರ ವರೆಗೆ ಎಡರಂಗದ ಜ್ಯೋತಿ ಬಸು ಮುಖ್ಯಮಂತ್ರಿ. ನಂತರ 2000 ರಿಂದ 11 ರವರೆಗೆ ಎಡರಂಗದ ಬುದ್ದದೇವ ಭಟ್ಟಾಚಾರ್ಯರ ಆಳ್ವಿಕೆ. ಜ್ಯೋತಿ ಬಸು ಭೂ ಸುಧಾರಣೆಗೆ ಒತ್ತು ಕೊಟ್ಟವರು. ಅದು ಆಪರೇಷನ್ ಬರ್ಗಾ. ಇದು ಉಳುವವನಿಗೆ ಭೂಮಿ ಹಕ್ಕು ಕೊಡುವ ನೀತಿ. ವಾಮಪಂಥೀಯರ ಸರಕಾರದ ಅಧಿಕಾರ ವೀಕೇಂದ್ರೀಕರಣದ ಪಂಚಾಯತ್ ರಾಜ್ ಪದ್ಧತಿ ಜಾರಿ ಮತ್ತೊಂದು ಮೈಲಿಗಲ್ಲು. ಜ್ಯೋತಿ ಬಸು ಅವರು 1977, 1982, 1987, 1991, 1996 ಹೀಗೆ ಸತತ ಐದು ಬಾರಿ ಗೆಲುವು ಹಾಗೂ ಮುಖ್ಯಮಂತ್ರಿ. ಅದು ಕಮ್ಯುನಿಸ್ಟರ ಯುಗ.
ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ನಂತರ ಅವರ ಸ್ಲೋಗನ್ ಮಾ (ತಾಯಿ), ಮಾಟಿ (ತಾಯಿನಾಡು), ಮಾನುಷ್ (ಜನರು). ಬಿಜೆಪಿಯ ಹಿಂದುತ್ವವನ್ನು ಎದುರಿಸಲು ತೃಣಮೂಲ ಕಾಂಗ್ರೆಸ್ಸಿನ ಹೂಡಿದ ಬಾಣ ಇದು. ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರಲು ಮಾ, ಮಾಟಿ, ಮಾನುಷ್ ಅಂದರು. ಆದರೆ, ಅಧಿಕಾರಕ್ಕೆ ಬಂದ ನಂತರ ಮುಲ್ಲಾ, ಮದರಸಾ, ಮಾಫಿಯಾ ಪರ ಕೆಲಸ ಮಾಡುತ್ತಿದ್ದಾರೆ ಎಂಬುದು ಬಿಜೆಪಿ ಆರೋಪ.
ಮಮತಾ ಬ್ಯಾನರ್ಜಿ ಅವರ ಸರಕಾರ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ನಗರ ಪ್ರದೇಶದ ಬಡವರನ್ನು ಕೇಂದ್ರೀಕರಿಸಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೃಷಿಕ್ ಬಂಧು ಕಾರ್ಯಕ್ರಮದಡಿ ರೈತರು ಪ್ರತಿ ವರ್ಷ ಪ್ರತಿ ಎಕರೆಗೆ ಹತ್ತು ಸಾವಿರ ರೂಪಾಯಿ ಪಡೆಯುತ್ತಾರೆ.
ಕನ್ಯಾಶ್ರೀ (ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು), ಸಬೂಜ್ ಸಾಥಿ (ವಿದ್ಯಾರ್ಥಿಗಳಿಗೆ ಸೈಕಲ್), ಲಕ್ಷ್ಮೀರ್ ಭಂಡಾರ್ ( ಸ್ತ್ರೀಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು) ಹೀಗೆ ಮಮತಾ ಅವರ ಕಾರ್ಯಕ್ರಮಗಳು. ಲಕ್ಷ್ಮೀರ್ ಭಂಡಾರ್ ಕಾರ್ಯಕ್ರಮದಲ್ಲಿ ಸುಮಾರು 2.42 ಕೋಟಿ ಮಹಿಳೆಯರಿಗೆ ನೆರವು. ಯುವಸಾಥಿ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ.
ಇನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲೇ ಸದ್ದು. ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗ, ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಕೆಂಡಾಮಂಡಲ. ಸುಪ್ರೀಂಕೋರ್ಟ್ ಮೊರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಎದುರು ತಾವೇ ಅರ್ಜಿದಾರರಾಗಿ ಖುದ್ದು ಹಾಜರು. ವಾದ ಮಂಡನೆ. ಸುಪ್ರೀಂಕೋರ್ಟ್ ಆದೇಶದಂತೆ ಈಗ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ.
ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ನಂತರ ಕರಡು ಮತದಾರರ ಪಟ್ಟಿ ಬಿಡುಗಡೆ ಆಗಿದೆ. ಆ ರಾಜ್ಯದಲ್ಲಿ ಈಗ 7.04 ಕೋಟಿ ಮತದಾರರು. ಮತದಾರರ ಪಟ್ಟಿಯಿಂದ 63.66 ಲಕ್ಷ ಮಂದಿಯ ಹೆಸರನ್ನು ಕೈಬಿಡಲಾಗಿದೆ. ಮತದಾರರ ಪಟ್ಟಿಯಿಂದ ಒಟ್ಟು ಶೇ.8.09 ಮಂದಿ ಹೊರಕ್ಕೆ.
ಮತದಾರರ ಪರಿಷ್ಕೃತ ಪಟ್ಟಿಗೂ ಮಮತಾ ವಿರೋಧ ಮುಂದುವರಿದಿದೆ. ಕೇಂದ್ರ ಚುನಾವಣಾ ಆಯೋಗ ಹಾಗೂ ಬಿಜೆಪಿ ನಡುವಿನ ಹೊಂದಾಣಕೆಯಿಂದ ಹೀಗಾಗಿದೆ ಎಂಬ ಆರೋಪ. ಭವಾನಿಪುರ ಮಮತಾ ಬ್ಯಾನರ್ಜಿ ಅವರ ಸ್ವಕ್ಷೇತ್ರ. ಇಲ್ಲಿಯೂ ಸುಮಾರು 47 ಸಾವಿರ ಮತದಾರರು ಪಟ್ಟಿಯಿಂದ ಹೊರಕ್ಕೆ. ಇದಕ್ಕೆ ಮಮತಾ ಅವರ ಪ್ರತಿಕ್ರಿಯೆ ಏನು ಗೊತ್ತೇ? ಮತದಾರರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮತದಾರ ಇದ್ದರೂ ನಾನು ಗೆಲ್ಲುತ್ತೇನೆ.
ಪಶ್ಚಿಮ ಬಂಗಾಳದಲ್ಲಿ 60.06 ಲಕ್ಷ ಮತದಾರರ ಹೆಸರನ್ನು ಅಡ್‌ಜುಡಿಕೇಶನ್ ಪಟ್ಟಿಯಲ್ಲಿದೆ. ಇವು ಮತ್ತೊಮ್ಮೆ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ತೃಣಮೂಲ ಕಾಂಗ್ರೆಸ್ಸಿನ ಕೆಲವು ಶಾಸಕರು, ಆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅವರ ಹೆಸರುಗಳೇ ಅಡ್‌ಜುಡಿಕೇಷನ್ ಪಟ್ಟಿಯಲ್ಲಿದೆ. ಅಂದರೆ ಕಾನೂನು ಪ್ರಕ್ರಿಯೆ ನಡೆಸಿ ನ್ಯಾಯ ನಿರ್ಣಯ ಮಾಡಬೇಕಿದೆ ಎಂದರ್ಥ.
ದೀದಿ ಮತ್ತಷ್ಟು ಕೆರಳಿದ್ದಾರೆ. ಕೋಲ್ಕತ್ತಾದಲ್ಲಿ ಮಾರ್ಚ್ 6 ರಂದು ಅವರ ಧರಣಿ ಸತ್ಯಾಗ್ರಹ ಆರಂಭ. ನ್ಯಾಯಾಂಗದ ಮಧ್ಯಪ್ರವೇಶದ ನಂತರವೂ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ಮಮತಾ ಆರೋಪಗಳು ನಿಂತಿಲ್ಲ. ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ನಸುಳುಕೋರರ ಬೆಂಬಲಕ್ಕೆ ನಿಂತಿದ್ದಾರೆ . ಬಾಂಗ್ಲಾ ನಸುಳುಕೋರರು ಭಾರತೀಯ ಪ್ರಜೆ ಆಗಬೇಕೆಂಬುದು ಮಮತಾ ಅವರ ಇಚ್ಛೆಯೇ ಎಂಬುದು ಬಿಜೆಪಿ ಪ್ರಶ್ನೆ. ಪಶ್ಚಿಮ ಬಂಗಾಳದ ಚುನಾವಣೆ ಈ ಬಾರಿ ದೇಶ ಅತ್ತ ತಿರುಗಿ ನೋಡುವಂತೆ ಮಾಡಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement