

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದರೂ ಹೆಚ್ಚುಕಾಲ ಉಳಿಯಲಿಲ್ಲ. ಒಂದೋ ಆ ಪಕ್ಷಗಳೇ ಮೇಲೇಳಲಿಲ್ಲ. ಇಲ್ಲವೇ ಬೇರೆ ಪಕ್ಷದೊಂದಿಗೆ ವಿಲೀನವಾದವು. ಆದರೆ, ಜಾತ್ಯತೀತ ಜನತಾದಳ ಈ ಮಾತಿಗೆ ಅತೀತ. ಅಸ್ತಿತ್ವಕ್ಕೆ ಬಂದು ಇಪ್ಪತ್ತಾರು ವರ್ಷಗಳು. ಬೆಳ್ಳಿ ಹಬ್ಬದ ಆಚರಣೆ. ಏಳುಬೀಳುಗಳ ಪಯಣ. ರಾಜಕೀಯವಾಗಿ ಕಾಲಕಾಲಕ್ಕೆ ತನ್ನ ಬದಲಾದ ನಿಲುವುಗಳಿಂದಾಗಿ ವಿಶ್ವಾಸಕ್ಕೆ ಕುಂದು. ಪಕ್ಷ ದುರ್ಬಲ.
ಜಾತ್ಯತೀತ ಜನತಾದಳ ಅಸ್ತಿತ್ವಕ್ಕೆ ಬಂದಿದ್ದೇ ಒಂದು ರಾಜಕೀಯ ಸಂಘರ್ಷದ ಸನ್ನಿವೇಶದಲ್ಲಿ. ಜನತಾ ಪರಿವಾರದ ದಾಯಾದಿ ಕಲಹದಲ್ಲಿ. ಅದು 1999ರ ವಿಧಾನಸಭಾ ಚುನಾವಣೆ ಹೊತ್ತು. ಆಗ ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲರು ಜನತಾದಳದಲ್ಲಿದ್ದರು. ಜನತಾದಳದ ಸರಕಾರವೂ ಇತ್ತು. ರಾಮಕೃಷ್ಣ ಹೆಗಡೆ ಜನತಾದಳದಿಂದ ಉಚ್ಛಾಟನೆಯಾಗಿ ಲೋಕಶಕ್ತಿ ಕಟ್ಟಿ ನಂತರ ಜೆಡಿಯುನಲ್ಲಿದ್ದರು.
ಪಟೇಲ್ ಹಾಗೂ ಜಾರ್ಜ್ ಫರ್ನಾಂಡೀಸ್ ಸಮಾಜವಾದಿ ಗೆಳೆಯರು. ಜಾರ್ಜ್ ಅಷ್ಟೊತ್ತಿಗಾಗಲೇ ಬಿಜೆಪಿ ಸಖ್ಯದಲ್ಲಿದ್ದರು. ಹೆಗಡೆ ಅವರೂ ಬಿಜೆಪಿ ದೋಸ್ತಿ ಮಾಡಿದ್ದರು. ಇಂತಹ ಸಮಯದಲ್ಲೇ ಆಗ ಮುಖ್ಯಮಂತ್ರಿಯಾಗಿದ್ದ ಪಟೇಲರು ಬಿಜೆಪಿ ಜೊತೆ ಕೈಜೋಡಿಸಿ 1999ರ ಚುನಾವಣೆ ಎದುರಿಸಿದರು. ಆಗ ಇದನ್ನು ವಿರೋಧಿಸಿ ಪ್ರತ್ಯೇಕಗೊಂಡವರು ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು. ಇವರಿಬ್ಬರ ನಾಯಕತ್ವದಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷವೇ ಜಾತ್ಯತೀತ ಜನತಾದಳ. ಆಗ ಕೋಮುವಾದಿ ಬಿಜೆಪಿ ಸಖ್ಯ ಸಾಧ್ಯವೇ ಇಲ್ಲ ಎಂದವರು ದೇವೇಗೌಡ ಹಾಗೂ ಸಿದ್ದರಾಮಯ್ಯ. ಇವತ್ತು ಅದೇ ದೇವೇಗೌಡರು ಬಿಜೆಪಿ ದೋಸ್ತಿಯಲ್ಲಿದ್ದಾರೆ.
ಆಗ ನಡೆದ 1999ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಸ್ಥಾನಗಳು ಕೇವಲ 10. ಪಡೆದ ಶೇಕಡಾವಾರು ಮತಗಳು 10.42. ಇದಕ್ಕೂ ಮುನ್ನ ಜನತಾದಳ 1994ರಲ್ಲಿ ಗೆದ್ದಾಗ ಗಳಿಸಿದ ಸ್ಥಾನಗಳು 115. ಆಗ ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಹೀಗೆ ಎಲ್ಲ ನಾಯಕರು ಒಗ್ಗೂಡಿದ್ದರು.
ಜನತಾಪಕ್ಷ, ಜನತಾದಳ ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷ. ಕೇಂದ್ರದಲ್ಲಿ ಆಡಳಿತ ನಡೆಸಿದ ಅನುಭವ. ಅನೇಕ ರಾಜ್ಯಗಳಲ್ಲೂ ಸರಕಾರಗಳನ್ನು ರಚಿಸಿ ಜನರ ಬಳಿಗೆ ಆಡಳಿತ ಒಯ್ದ ಕೀರ್ತಿ. ಆದರೆ ದಾಯಾದಿ ಕಲಹ. ಕೇಂದ್ರದಲ್ಲೂ ಅಧಿಕಾರ ನಷ್ಟ. ರಾಷ್ಟ್ರೀಯ ಪಕ್ಷದ ಮಾನ್ಯತೆಯೂ ಇಲ್ಲ. ಪಕ್ಷ ಒಡೆದು ಹೋಳಾಗಿ ಬೇರೆ ಬೇರೆ ಹೆಸರುಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ಉದಯ.
ಉತ್ತರ ಪ್ರದೇಶದ ಸಮಾಜವಾದಿ ಪಕ್ಷ, ಬಿಹಾರದ ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ, ಒರಿಸ್ಸಾದ ಬಿಜು ಜನತಾದಳ, ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಇವುಗಳ ಮೂಲ ಬೇರು ಜನತಾಪಕ್ಷ, ಜನತಾದಳವೇ. ಈ ಎಲ್ಲ ಪಕ್ಷಗಳ ಸ್ಥಾಪಕರು ಒಂದು ಕಾಲದಲ್ಲಿ ಜನತಾಪಕ್ಷ, ಜನತಾದಳದಲ್ಲಿದ್ದವರೇ. ಈ ಪ್ರಾದೇಶಿಕ ಪಕ್ಷಗಳಿಗೆ ಆಯಾ ರಾಜ್ಯಗಳಲ್ಲಿ ಸರಕಾರ ರಚಿಸಿ ಆಡಳಿತ ನಡೆಸಿದ ಅನುಭವವೂ ಇವೆ.
ಕರ್ನಾಟಕದಲ್ಲಿ ಜೆಡಿಎಸ್ ಹೆಜ್ಜೆ ಗುರುತುಗಳ ಮೇಲೆ ಕ್ಷ ಕಿರಣ ಬೀರಿದರೆ ಆ ಪಕ್ಷಕ್ಕೆ 26 ವರ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇರುವ ನೆಲೆಯನ್ನು ಉಳಿಸಿಕೊಳ್ಳುವುದರಲ್ಲಿಯೂ ಸೋತಿದೆ. ಇದಕ್ಕೆ ಕಾರಣ ಹಲವು. ಮುಖ್ಯವಾಗಿ ಕಾಲಕಾಲಕ್ಕೆ ಅದು ತೆಗೆದುಕೊಂಡ ತಪ್ಪು ನಿರ್ಧಾರಗಳು. ಜೊತೆಯಲ್ಲಿ ದೇವೇಗೌಡರ ಕುಟುಂಬ ರಾಜಕಾರಣ. ಈ ಫ್ಯಾಮಿಲಿ ಪಾಲಿಟಿಕ್ಸ್ ಜೆಡಿಎಸ್‌ನ ಶಕ್ತಿಯೂ ಹೌದು. ದೌರ್ಬಲ್ಯವೂ ಹೌದು.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವತ್ತೂ ಬಹುಮತ 113 ಸ್ಥಾನಗಳನ್ನು ಪಡೆದು ಅಧಿಕಾರ ನಡೆಸಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಗರಿಷ್ಠ ಸಾಧನೆ 110 ಸೀಟುಗಳು. ಜೆಡಿಎಸ್ 58 ಸ್ಥಾನಗಳು. ಜೆಡಿಎಸ್ ಕಡಿಮೆ ಸೀಟು ಪಡೆದರೂ ಆ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದವರು. ಅವರು 2006ರಲ್ಲಿ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ. ಕಾಂಗ್ರೆಸ್ ಸಖ್ಯದೊಂದಿಗೆ 2018ರಲ್ಲಿ ಸರಕಾರ ರಚನೆ.
ಇದಕ್ಕೂ ಮುನ್ನ ಕಾಂಗ್ರೆಸ್ಸಿನ ಧರ್ಮಸಿಂಗ್ ನೇತೃತ್ವದಲ್ಲಿ 2004ರಲ್ಲಿ ಸರಕಾರ ರಚನೆಯಾದಾಗ ಜೆಡಿಎಸ್‌ನ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ. ಅದು ಕರ್ನಾಟಕ ರಾಜಕಾರಣದ ಮೊಟ್ಟಮೊದಲ ಸಮ್ಮಿಶ್ರ ಸರಕಾರ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ವರಿಷ್ಠರ ಬಳಿ ಆಗ ಕೇಳಲೇ ಇಲ್ಲ ಎಂಬುದು ಸಿದ್ದರಾಮಯ್ಯ ಅವರದು ಈಗಲೂ ಆರೋಪ. ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೇ ದೇವೇಗೌಡರು ಎಂಬುದು ಸಿದ್ದರಾಮಯ್ಯ ದೂರು. ಅಲ್ಲಿಂದಲೇ ದೇವೇಗೌಡರೊಂದಿಗೆ ಸಂಘರ್ಷ ಆರಂಭ. ಸಿದ್ದರಾಮಯ್ಯ ಅವರಿಂದ ಅಹಿಂದ ರಣಕಹಣೆ. ಡಿಸಿಎಂ ಸ್ಥಾನ ಪದಚ್ಯುತ. ಪಕ್ಷದಿಂದ ಉಚ್ಛಾಟನೆ. ಮುಂದಿನದು ಇತಿಹಾಸ.
ವಿಧಾನಸಭೆಗೆ 2004ರಲ್ಲಿ ನಡೆದ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದರು. ಆ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಬಿಜೆಪಿ 79 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ 58 ಸ್ಥಾನ ಪಡೆದ ಜೆಡಿಎಸ್ 65 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಜೊತೆ ಕೈಜೋಡಿಸಿತು. ಮತದಾರರ ತೀರ್ಪು ಕಾಂಗ್ರೆಸ್ಸಿಗೆ ವಿರುದ್ಧವಾಗಿತ್ತು. ಆದರೆ, ಜೆಡಿಎಸ್ ಕಾಂಗ್ರೆಸ್ ಕೈ ಕುಲುಕಿತ್ತು. ಅದು ಜೆಡಿಎಸ್‌ನ ತಪ್ಪು ಹೆಜ್ಜೆ ಆಗಿತ್ತು.
ಜೆಡಿಎಸ್‌ನ ಕುಮಾರಸ್ವಾಮಿ ನೇತೃತ್ವದಲ್ಲಿ ಆ ಪಕ್ಷದ ಬಹುತೇಕ ಶಾಸಕರು 2006ರಲ್ಲಿ ಧರ್ಮಸಿಂಗ್ ಸರಕಾರವನ್ನು ಉರುಳಿಸಿ ಬಿಜೆಪಿ ಜೊತೆ ದೋಸ್ತಿ ಮಾಡಿದರು. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ. ಇಪ್ಪತ್ತು-ಇಪ್ಪತ್ತು ತಿಂಗಳ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆಯ ಒಪ್ಪಂದ ಅದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿತ್ತು.
ಕುಮಾರಸ್ವಾಮಿ ತಮ್ಮ ಆಡಳಿತದಿಂದ ಜನಪ್ರಿಯರಾಗಿದ್ದರು. ಗ್ರಾಮವಾಸ್ತವ್ಯದಿಂದ ಜನರಿಗೆ ಹತ್ತಿರವಾಗಿದ್ದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಕೆಲವು ಯೋಜನೆಗಳು, ಕಾರ್ಯಕ್ರಮಗಳು ಸರಕಾರಕ್ಕೆ ಇಮೇಜು ತಂದುಕೊಟ್ಟಿದ್ದವು.
ಆದರೆ, ಇಪ್ಪತ್ತು ತಿಂಗಳ ನಂತರ ಕುಮಾರಸ್ವಾಮಿ ಬಿಜೆಪಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಸರಕಾರ ಉರುಳಿತು. ವಿಧಾನಸಭೆಗೆ ಅವಧಿಗೂ ಒಂದು ವರ್ಷ ಮುನ್ನವೇ 2008ರಲ್ಲಿ ಚುನಾವಣೆ ಎದುರಾಯಿತು. ಬಿಜೆಪಿ 110 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷ. ಆರು ಮಂದಿ ಪಕ್ಷೇತರ ಶಾಸಕರ ಬೆಂಬಲದಿಂದ ಯಡಿಯೂರಪ್ಪ ಸರಕಾರ ರಚನೆ. ಜೆಡಿಎಸ್‌ಗೆ ದೊರೆತಿದ್ದು 28 ಸೀಟುಗಳು. ಕುಮಾರಸ್ವಾಮಿ ಅವರಿಗೆ ವಚನಭ್ರಷ್ಟರೆಂಬ ಹಣೆಪಟ್ಟಿ. ಇವತ್ತಿಗೂ ಅವರಿಗೆ ಈ ಕಳಂಕದಿಂದ ಪೂರ್ಣವಾಗಿ ಹೊರಬರಲು ಸಾಧ್ಯವಾಗಿಲ್ಲ.
ಜೆಡಿಎಸ್ ಮತ್ತೊಮ್ಮೆ ತಪ್ಪು ಹೆಜ್ಜೆ ಇಟ್ಟಿದ್ದು 2018ರಲ್ಲಿ. ಆ ಚುನಾವಣೆಯಲ್ಲಿ ಯಾರಿಗೂ ಬಹುಮತವಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಕುಮಾರಸ್ವಾಮಿ 14 ತಿಂಗಳು ಮುಖ್ಯಮಂತ್ರಿಯಾದಾಗ ನಿತ್ಯವೂ ಅವರಿಗೆ ಒಂದು ರೀತಿ ಕಿರುಕುಳವೇ. ಸರಕಾರದಿಂದ ಹೊರಗಿದ್ದವರು ಕುಮಾರಸ್ವಾಮಿ ಆಡಳಿತ ನಡೆಸಲು ಬಿಡಲಿಲ್ಲ. ಕುಮಾರಸ್ವಾಮಿ ಸಮಾರಂಭಗಳಲ್ಲಿ ಕಣ್ಣೀರು ಹಾಕಿದರು.
ಇಲ್ಲಿ ಜೆಡಿಎಸ್ ಲೋಪವೂ ಇತ್ತು. ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ವಿರುದ್ಧ ತೀರ್ಪು ನೀಡಿದ್ದರು. ಆದರೆ, 38 ಸ್ಥಾನಗಳನ್ನು ಗೆದ್ದ ಜೆಡಿಎಸ್ ಪಕ್ಷವು ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸಿತ್ತು. ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತು. ಬಿಜೆಪಿ ಮೇಲುಗೈ ಸಾಧಿಸಿತು. ಇಲ್ಲಿಯೂ ಜೆಡಿಎಸ್ ಎಡವಿತ್ತು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ವಿಧಾನಸಭಾ ಸದಸ್ಯರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕುಮಾರಸ್ವಾಮಿ ಸರಕಾರ ಬಹುಮತ ಕಳೆದುಕೊಂಡಿತು. ಅದು ಆಪರೇಷನ್ ಕಮಲ. ಬಿಜೆಪಿ ಬಹಮತದೊಂದಿಗೆ ಅಧಿಕಾರಕ್ಕೆ ಏರಿತು. ರಾಜೀನಾಮೆ ನೀಡಿದ ಶಾಸಕರು ಬಿಜೆಪಿಯಿಂದ ಸ್ಪರ್ಧಿಸಿ ಉಪ ಚುನಾವಣೆ ಎದುರಿಸಿದರು. ಅನೇಕರು ಗೆದ್ದರು. ಕೆಲವರು ಸೋತರು. ಇದು ಕರ್ನಾಟಕದ ಮತ್ತೊಂದು ರಾಜಕೀಯ ಚರಿತ್ರೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಖ್ಯ ಸಹಜ ಮೈತ್ರಿ ಅಲ್ಲ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಸಹಜ ಹೊಂದಾಣಿಕೆ ಆಗಿದೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಳಮಟ್ಟದಲ್ಲಿ ಸಹಜವಾಗಿ ಹೊಂದಾಣಿಕೆ ಆಗುತ್ತಾರೆ. ಇಬ್ಬರದೂ ಮೂಲಭೂತವಾಗಿ ಲಾಗಾಯ್ತಿನಿಂದಲೂ ಕಾಂಗ್ರೆಸ್ ವಿರೋಧಿ ಮನೋಭಾವವೇ.
ಇನ್ನೊಂದು ಅಂಶವೆಂದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲ. ಇಲ್ಲಿ ಜೆಡಿಎಸ್ ಶಕ್ತಿ ಇದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲಯುತ. ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ಕೆಲವು ಕ್ಷೇತ್ರಗಳನ್ನು ಬಿಟ್ಟರೆ ಬೇರೆಡೆ ನೆಲೆ ಇಲ್ಲ. ಹೀಗಾಗಿ ಉಭಯ ಪಕ್ಷಗಳ ಮಧ್ಯೆ ಮೈತ್ರಿ ಸುಗಮ.
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿ ದಿನಕಳೆದಂತೆ ಗಟ್ಟಿಯಾಗುತ್ತಿದೆ. ಎನ್‌ಡಿಎ ಸರಕಾರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ವಾಪಸಾಗುವುದು ಖಚಿತ. ಆದರೆ, ಯಾವಾಗ ಎಂಬುದೇ ಪ್ರಶ್ನೆ.
ರಾಜ್ಯ ಬಿಜೆಪಿ ನಾಯಕರಲ್ಲಿ ಪಕ್ಷ ಸಂಘಟನೆಯಲ್ಲಿ ಸಂಘಟಿತ ಪ್ರಯತ್ನಗಳು ಕಂಡು ಬರುತ್ತಿಲ್ಲ. ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ಪಡೆದು ಜೊತೆಯಲ್ಲಿ ಕರೆದೊಯ್ಯುವ ನಾಯಕತ್ವವೂ ಕಾಣುತ್ತಿಲ್ಲ. ಇತ್ತ ದೆಹಲಿಯಲ್ಲಿ ಕುಮಾರಸ್ವಾಮಿ ಬಿಜೆಪಿ ವರಿಷ್ಠರಿಗೆ ಹತ್ತಿರವಾಗಿದ್ದಾರೆ. ಸಚಿವರಾಗಿ ತಮ್ಮ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂತಹ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕುಮಾರಸ್ವಾಮಿ ಅವರ ಹೇಳಿಕೆಗಳು ಗಮನ ಸೆಳೆಯುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಅವರು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement