ವಿಕ್ಟೋರಿಯಾ ಆಸ್ಪತ್ರೆ: ಕಳಚುತ್ತಿರುವುದು ಬರಿಯ ಹೆಸರೋ ಅಥವಾ ಇತಿಹಾಸವೋ!?

ನಾಡಿಗೆ ಇಂತಹ ಕೊಡುಗೆ ನೀಡಿದ ರಿಜೆಂಟ್ ಕೆಂಪನಂಜಮ್ಮಣ್ಣಿಯವರ ಆಶಯದಂತೆ ಹೆಸರಿಸಿದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಒಂದು ಪ್ರ'ಸಿದ್ದ' ಸರ್ಕಾರವು ದಿಡೀರ್ ಎಂದು ಬದಲಿಸುವುದು ಇತಿಹಾಸ ವಿರೋಧಿ ನಡೆಯಾಗುತ್ತದೆ.
Victoria hospital- Siddaramaiah
ವಿಕ್ಟೋರಿಯಾ ಆಸ್ಪತ್ರೆ-ಸಿಎಂ ಸಿದ್ದರಾಮಯ್ಯonline desk
Updated on

- ಡಾ. ಮನೋಹರ್ ಎಂ.ಪಿ

(ಆಧಾರ: ಡಾ. ಗಜಾನನ ಶರ್ಮ ರವರ "ರಾಜಮಾತೆ ಕೆಂಪನಂಜಮ್ಮಣ್ಣಿ", ವಾಣಿವಿಲಾಸ ಸನ್ನಿಧಾನ, ಮಾದರಿ ಮೈಸೂರಿನ ತಾಯಿಬೇರು ಪುಸ್ತಕ)

ಕರ್ನಾಟಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮೊನ್ನೆ 2026-27 ರ ಆರ್ಥಿಕ ಸಾಲಿನ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು 'ಶಾಂತವೇರಿ ಗೋಪಾಲಗೌಡ ಆಸ್ಪತ್ರೆ' ಎಂದು ಮರುನಾಮಕರಣ ಮಾಡಲಾಗುವುದೆಂದು ಘೋಷಿಸಿದರು.

ಕರ್ನಾಟಕದ ಮೇರು ಸಮಾಜವಾದಿ ನೇತಾರ

ಶ್ರೀ ಶಾಂತವೇರಿ ಗೋಪಾಲಗೌಡರು (1923-1972) ದೇವರಾಜ ಅರಸು, ಬಂಗಾರಪ್ಪರಂತ ಇತರ ನೇತಾರರಿಗೆ ಮಾರ್ಗದರ್ಶಕರಾಗಿ ಕರ್ನಾಟಕದಲ್ಲಿ ಸಮಾಜವಾದ ಹುಟ್ಟಿಬೆಳೆಯಲು ಕಾರಣಕರ್ತರು. ಕಾಗೋಡು ಚಳುವಳಿಯ ಮೂಲಕ ದೀನದಲಿತರು ಭೂ ಒಡೆಯರಾಗಲು ಇವರ ಕೊಡುಗೆ ಅಪಾರ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಲು ಒಬ್ಬ ಕಾರಣಕರ್ತರೂ ಕೂಡ. ಗೋಪಾಲಗೌಡರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶಾಂತವೇರಿ ಗ್ರಾಮದಲ್ಲಿ, ಬಡತನದ ಕಾರಣ ಪ್ರೌಢಶಾಲಾ ಶಿಕ್ಷಣಕ್ಕೆ ಸೀಮಿತರಾಗಿ ಉನ್ನತಶಿಕ್ಷಣ ವಂಚಿತರಾದರು. ಚಿಕ್ಕ ವಯಸ್ಸಿನಲ್ಲೇ ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರ ಪ್ರಭಾವಕ್ಕೆ ಒಳಗಾಗಿ ರಾಜ್ಯದಲ್ಲಿ ಸಮಾಜವಾದದ ಆದ್ಯಪ್ರವರ್ತಕರಾದರು. ಸಾಗರ ಮತ್ತು ತೀರ್ಥಹಳ್ಳಿಯಿಂದ ಮೂರು ಬಾರಿ ವಿಧಾನ ಸಭೆಯ ಸದಸ್ಯರಾಗಿ ರಾಜ್ಯದ ಮತ್ತು ದೀನದಲಿತರ ಏಳಿಗೆಗಾಗಿ ಅಹರ್ನಿಶಿ ದುಡಿದವರು.

ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯನವರು ತಮ್ಮ ಗುರುಸಮಾನರಾದ ಗೋಪಾಲಗೌಡರ ಹೆಸರನ್ನು ಚಿರಸ್ಥಾಯಿಗೊಳಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಶ್ರೀಯುತರ ಹೆಸರನ್ನು ಇಡಹೊರಟಿರುವುದು ಸಾರ್ವಜನಿಕವಾಗಿ ಒಂದು

ಅನಿರೀಕ್ಷಿತ ಬೆಳವಣಿಗೆ. ಇಂತಹ ನಿರ್ಧಾರ ಎಷ್ಟು ಸಂಮಜಸ, ಎಷ್ಟು ಔಚಿತ್ಯಪೂರ್ಣ ಮತ್ತು ಇತಿಹಾಸಕ್ಕೆ ಚ್ಯುತಿಯೇ ಎಂಬುದು ನಾಡಿನ ಜನರಲ್ಲಿ ಈಗ ಚರ್ಚೆಗೆ ಒಳಪಡುತ್ತಿರುವ ವಿಷಯ. ಈ ಹಿನ್ನಲೆಯಲ್ಲಿ ಒಂದೂಕಾಲು ಶತಮಾನದ ಹಿಂದೆ ಮೈಸೂರು ಸಂಸ್ಥಾನದಿಂದ ಬೆಂಗಳೂರು ನಗರದಲ್ಲಿ ಸಾರ್ವಜನಿಕರಿಗಾಗಿ ಸ್ಥಾಪಿಸಲ್ಪಟ್ಟ ಈ ಮಹಾನ್ ಸಂಸ್ಥೆಯ ಚಾರಿತ್ರಿಕ ಘಟನಾವಳಿಗಳನ್ನು ಇಣುಕುನೋಡಲು ಇದು ಸೂಕ್ತ ಸಮಯ.

ಈ ಆಸ್ಪತ್ರೆಯ ಸ್ಥಾಪನೆಗೆ ಮೈಸೂರು ಅರಮನೆ ಅಗ್ನಿಗೆ ಆಹುತಿಯಾದುದೇ ಕಾರಣ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ!?

ದಿನಾಂಕ 28 ಫೆಬ್ರವರಿ 1897, ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರರ ಹಿರಿಯ ಸಹೋದರಿ ಜಯಲಕ್ಷ್ಮಮ್ಮಣ್ಣಿ ಮತ್ತು ಸೋದರಮಾವ ಕಾಂತರಾಜ ಅರಸುರವರ ವಿವಾಹ ಸಂಪನ್ನವಾಗಿ ಅತಿಥಿ ಅಭ್ಯಾಗತರು ಭೋಜನಕ್ಕೆ ತೆರಳುವ ವೇಳೆ ವಿವಾಹ ಮಂಟಪದ ತೆರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ದಿನಗಳ ಕಾಲ ಅಗ್ನಿತಾಂಡವವಾಡಿ ಅರಮನೆಯ ಐದನೆಯ ಒಂದು ಭಾಗ (30 ಸಾವಿರ ಚದರ ಅಡಿ) ಪೂರ್ಣ ನಾಶವಾಗಿ ಎಂಟು ಜನರ ಪ್ರಾಣಹರಣವಾಗುತ್ತದೆ. ಸತ್ತವರಲ್ಲಿ ರಾಜಮಾತೆ ಕೆಂಪನಂಜಮ್ಮಣ್ಣಿಯವರ ಪರಿಚಾರಿಕೆ ಹೊನ್ನವ್ವೆ ಒಬ್ಬರು. ಆಕೆ ಚಾಮರಾಜ ಒಡೆಯರರು ಆಕಸ್ಮಿಕವಾಗಿ ಕಲ್ಕತ್ತೆಯಲ್ಲಿ ಮರಣಹೊಂದಿದ ತರುವಾಯು ಮಹಾರಾಣಿ ಕೆಂಪನಂಜಮ್ಮಣ್ಣಿಯವರಿಗೆ ಒತ್ತಾಸೆಯಾಗಿ ನಿಂತು ಹಗಲಿರುಳು ಕೃಷ್ಣರಾಜರೂ ಸೇರಿದಂತೆ ಐದು ಮಕ್ಕಳ ಅವ್ವೆಯಾಗಿ ಪಾಲನೆ ಪೋಷಣೆ ಮಾಡಿದವಳು. ಅಗ್ನಿ ಅವಘಡದಲ್ಲಿ ವಧುವರರನ್ನು ಪಾರು ಮಾಡಿ, ಅರಮನೆಯ ವಜ್ರಾಭರಣ ಮತ್ತು ಚಾಮುಂಡೇಶ್ವರಿಯ ಪಚ್ಚೆವಿಗ್ರವಿದ್ದ ಕಬ್ಬಿಣದ ಸಂದೂಕವನ್ನು ಪ್ರಾಣದ ಹಂಗು ತೊರೆದು ರಕ್ಷಿಸುತ್ತಾ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡು ಎರಡು ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರು ಚೆಲ್ಲಿದ ಬಡ ಹಿರಿಯ ಆತ್ಮ.

ಆಗ ಸೀನಿಯರ್ ಸರ್ಜನರಾಗಿದ್ದ ಕರ್ನಲ್ ಟಿ.ಜಿ. ಮೆಗ್ಗಾನ್ ರವರು "ಸಂಸ್ಥಾನದಲ್ಲಿ ಇನ್ನಷ್ಟು ವೈದ್ಯಕೀಯ ಸೌಲಭ್ಯಗಳಿದ್ದರೆ ಹೊನ್ನವ್ವೆ ಮತ್ತಿತರ ಪೈಕಿ ಕೆಲವರನ್ನು ಉಳಿಸಿಕೊಳ್ಳಬಹುದಿತ್ತು" ಎಂಬ ಅನಿಸಿಕೆಯನ್ನು ರಾಜಮಾತೆಯವರ ಮುಂದೆ ತೋಡಿಕೊಂಡಿದ್ದರು. ಆಗ ಸಕಲ ಸೌಲಭ್ಯಗಳುಳ್ಳ ಒಂದು ಬೃಹತ್ ಆಸ್ಪತ್ರೆಯನ್ನು ಸ್ಥಾಪಿಸುವ ಕನಸು ಸಂಸ್ಥಾನದ ರಿಜೆಂಟರೂ ಆಗಿದ್ದ ರಾಜಮಾತೆ ಕೆಂಪನಂಜಮ್ಮಣ್ಣಿಯವರ ಮನಸ್ಸಿನಲ್ಲಿ ಮೂಡಿತು. ಈ ಕನಸು ಮುಂದಿನ ಮೂರು ವರ್ಷಗಳಲ್ಲೇ ನನಸಾದದ್ದು ಆಸಕ್ತವೂ ಮತ್ತು ಮಹಾರಾಣಿಯವರ ಸಮಯಪ್ರಜ್ಞೆ ಮತ್ತು ಪ್ರಜಾಹಿತಾಸಕ್ತಿಗೆ ಕೈಗನ್ನಡಿಯೂ ಆಗಿದ್ದು ಹೇಗೆಂಬುದನ್ನು ಅರಿಯೋಣ.

ಆಸ್ಪತ್ರೆಯ ಶಿಲಾನ್ಯಾಸ ಫಲಕ
ಆಸ್ಪತ್ರೆಯ ಶಿಲಾನ್ಯಾಸ ಫಲಕ

ಸೂರ್ಯ ಮುಳಗದ ಸಾಮ್ರಾಜ್ಯದ 'ಚಕ್ರವರ್ತಿನಿ ವಿಕ್ಟೋರಿಯಾ' ಇಂಗ್ಲೆಂಡ್ ದೇಶದ ಪಟ್ಟವನ್ನು ಅಲಂಕರಿಸಿದ (1897 ರ ಜೂನ್ 20) ವಜ್ರಮಹೋತ್ಸವವನ್ನು ಬ್ರಿಟೀಷ್ ಅಳ್ವಿಕೆಯ ಎಲ್ಲಾ ವಸಾಹತು ರಾಷ್ಟ್ರಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ಸೂಚಿಸುವ ಆಜ್ಞಾಪತ್ರವನ್ನು ಬ್ರಿಟಿಷ್ ರೆಸಿಡೆಂಟರು ಮೈಸೂರು ಸಂಸ್ಥಾನದ ರಿಜೆಂಟರಾಗಿದ್ದ ರಾಜಮಾತೆ ಕೆಂಪನಂಜಮ್ಮಣಿಯವರಿಗೆ ರವಾನಿಸಿದ್ದರು. ಜೂನ್ 22, 1897 ರಂದು ಬೆಂಗಳೂರು ಅರಮನೆಯಲ್ಲಿ ಸಂಭ್ರಮಾಚರಣೆಗಳು ಬೆಂಗಳೂರು ನಗರ, ಸಂಸ್ಥಾನದ ಇತರ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳು ನಡೆದವು. ದೇಶದ ಕೆಲವು ಸಂಸ್ಥಾನಗಳು ಸಾಮ್ರಾಜ್ಯಶಾಹಿ ಪ್ರಭುತ್ವವನ್ನು ಮೆಚ್ಚಿಸಲು ಕೆಲವು ವಿಶೇಷ ಕೊಡುಗೆಗಳನ್ನು ಘೋಷಿಸಿದ್ದವು. ಮೈಸೂರು ಸಂಸ್ಥಾನವೂ ಹಾಗೊಂದು ಸ್ಮರಣೀಯ ಕೊಡುಗೆಯನ್ನು ಘೋಷಿಸಬೇಕೆನ್ನುವುದು ಬ್ರಿಟಿಷ್ ರೆಸಿಡೆಂಟರ ಸಲಹೆಯಾಗಿತ್ತು. ಆದರೇ ಅರಮನೆ ಅಗ್ನಿದುರಂತ ಸಂಕಟ ಮತ್ತು ಅದರ ಮರುನಿರ್ಮಾಣದ ಸವಾಲಿನ ಹಿನ್ನಲೆಯಲ್ಲಿ ಸಂಸ್ಥಾನವು ಬೃಹತ್ ಕೊಡುಗೆಯೊಂದನ್ನು ಘೋಷಿಸುವ ಆರ್ಥಿಕ ಪರಿಸ್ಥಿತಿಯಲ್ಲಿ ಇರಲಿಲ್ಲ. ರಾಜಮಾತೆಯವರು ಈ ಸಂದರ್ಭವನ್ನು ಪ್ರಜಾಹಿತಾಸಕ್ತಿಗೂ ಮತ್ತು ಸಾರ್ವಭೌಮತ್ವಕ್ಕೂ ಪೂರಕವಾದ ಒಂದು ಸಮಯೋಚಿತ ನಿರ್ಧಾರದ ಮೂಲಕ 'ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ' ಮುತ್ಸದ್ದಿತನ ಮೆರೆದರು. ಸುಮಾರು 7 ಲಕ್ಷ ರುಪಾಯಿಗಳ ವೆಚ್ಚದಲ್ಲಿ 'ಚಕ್ರವರ್ತಿನಿ ವಿಕ್ಟೋರಿಯಾ' ಹೆಸರಿನಲ್ಲಿ ಸಮಾಜದ ಎಲ್ಲ ಜನರಿಗೂ ಉಚಿತ ಚಿಕಿತ್ಸೆ ಒದಗಿಸುವ ಸಾರ್ವಜನಿಕ ಆಸ್ಪತ್ರೆಯೊಂದನ್ನು ಮೈಸೂರು ಸಂಸ್ಥಾನ ಸ್ಥಾಪಿಸುವುದೆಂದು ಉದ್ಘೋಷಿಸಿ, ವಜ್ರಮಹೋತ್ಸವ ಸಂಭ್ರಮಾಚರಣೆಯ ದಿನ 22 ಜೂನ್ 1897 ರಂದು ರೆಸಿಡೆಂಟರ ಸಮಕ್ಷಮ ಅಡಿಗಲ್ಲನಿಟ್ಟರು. ಈ ಜಾಣ ನಡೆ ಬ್ರಿಟಿಷರ ಮೆಚ್ಚುಗೆಗೆ ಪಾತ್ರವಾದುದಲ್ಲದೆ, ರಾಜಮಾತೆಯ ನೆಚ್ಚಿನ ಪರಿಚಾರಿಕೆ ಹೊನ್ನವ್ವೆಯ ಆತ್ಮಕ್ಕೂ ಶಾಂತಿ ತರುವಂತಹದ್ದಾಯಿತು. ಮೂರು ವರ್ಷಗಳಲ್ಲಿ ಉತ್ಕೃಷ್ಟ ಸೌಲಭ್ಯಗಳನ್ನು ಹೊಂದಿದ ಈ ಬೃಹತ್ ಆಸ್ಪತ್ರೆಯ ನಿರ್ಮಾಣ ಕಾರ್ಯ ಮುಗಿದು, 1900 ರ ಡಿಸೆಂಬರ್ 3 ರಂದು ಭಾರತದ ವೈಸ್ರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಕರ್ಜನ್ ರವರು ಉದ್ಘಾಟಿಸಿದರು. ಅದೇ ಸಂದರ್ಭದಲ್ಲಿ ಅವರು ಮೈಸೂರಿಗೆ ಭೇಟಿ ನೀಡಿ 10ನೇ ಚಾಮರಾಜೇಂದ್ರ ಒಡೆಯರರ ಪ್ರತಿಮೆಯನ್ನು ಅಣಾವರಗೊಳಿದ್ದನ್ನು ಮತ್ತು ರಾಜ್ಯದ ಜನತೆಯ ಕೃತಜ್ಞತೆಯ ಕುರುಹಾಗಿ ಸುತ್ತಲಿನ ಉದ್ಯಾನವನಕ್ಕೆ ಕರ್ಜನ್ ರ ಹೆಸರಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ

ಇದಲ್ಲದೇ ರಾಜಮಾತೆ ಕೆಂಪನಂಜಮ್ಮಣ್ಣಿಯವರು ತಮ್ಮ ಪತಿಯ ಮರಣಾನಂತರ ಪುತ್ರ ನಾಲ್ವಡಿ ಕೃಷ್ಣರಾಜೇಂದ್ರರರು ರಾಜ್ಯದ ಪಟ್ಟವನ್ನು ಅಲಂಕರಿಸಲು ಅರ್ಹರಾಗುವವರೆಗೆ ಎಂಟು ವರ್ಷಗಳ ಮೈಸೂರು ಸಂಸ್ಥಾನದ ರಿಜೆಂಟರಾಗಿ ಶಿವನ ಸಮುದ್ರದಲ್ಲಿ (ಶೇಷಾದ್ರಿ ಅಯ್ಯರ್ ನಾಮಾಂಕಿತ) ಜಲವಿದ್ಯುತ್ ಸ್ಥಾವರ, ಬರದನಾಡು ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆಯಲ್ಲಿ ಕೃಷಿ ನೀರಾವರಿ ಅಣೆಕಟ್ಟು (ವಾಣಿವಿಲಾಸ ಸಾಗರ ನಾಮಾಂಕಿತ), ಬೆಂಗಳೂರಿನಲ್ಲಿ ಮಲ್ಲೇಶ್ವರ, ಬಸವನಗುಡಿ ಬಡಾವಣೆಗಳ ಸ್ಥಾಪನೆ, ಮೈಸೂರು ಬೆಂಗಳೂರು ನಗರದ ಮನೆಗಳಿಗೆ ಕೊಳಾಯಿ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಯೋಜನೆ, ಮಾರಣಾಂತಿಕ ಪ್ಲೇಗ್ ಮತ್ತು ಕಾಲರಾ ರೋಗ ನಿವಾರಣಾ ಲಸಿಕೆ ತಯಾರಿಕೆ, ತಿರುವಾಂಕೂರಿನ ದಲಿತ ವೈದ್ಯ ಪದ್ಮನಾಭ ಪಲ್ಲುರಂತಹ ಹಲವು ಪ್ರತಿಭಾನ್ವಿತರಿಗೆ ಪ್ರೋತ್ಸಾಹ ಮತ್ತು ಆಶ್ರಯ ನೀಡಿಕೆ, ಬೆಂಗಳೂರಿನಲ್ಲಿ ಜಮ್ಶೆಡ್ಜಿ ಟಾಟಾರವರ ಆಶಯದ ವಿಜ್ಞಾನ ಸಂಶೋಧನಾ ಸಂಸ್ಥೆಗೆ (IISc. ನಾಮಾಂಕಿತ) ಸ್ಥಳ ಮತ್ತು ಆರ್ಥಿಕ ನೆರವು ನೀಡಿಕೆ ಇಂತಹ ಅದೆಷ್ಟೋ ಅಮೂಲ್ಯ ಕೈಂಕರ್ಯಗಳನ್ನೂ, ಮತ್ತು ಇವೆಲ್ಲವನ್ನೂ ಮೀರಿಸುವ ಬಹುಮೂಲ್ಯ ಅನರ್ಘ್ಯರತ್ನ ಕೃಷ್ಣರಾಜೇಂದ್ರರನ್ನು ಅರ್ಹ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ನಾಡಿಗೆ ಸಮರ್ಪಿಸಿದವರು ಕಳಲೆ ವಂಶಸ್ಥೆ ರಾಜಮಾತೆ ಕೆಂಪನಂಜಮ್ಮಣ್ಣಿಯವರು.

ನಾಡಿಗೆ ಇಂತಹ ಕೊಡುಗೆ ನೀಡಿದ ರಿಜೆಂಟ್ ಕೆಂಪನಂಜಮ್ಮಣ್ಣಿಯವರ ಆಶಯದಂತೆ ಹೆಸರಿಸಿದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಸರ್ಕಾರವು ದಿಡೀರ್ ಎಂದು ಬದಲಿಸುವುದು ಇತಿಹಾಸ ವಿರೋಧಿ ಮತ್ತು ಜನ ಅಪ್ರಿಯ ನಡೆಯಾಗುತ್ತದೆ.

ಒಬ್ಬ ಮಹಿಳೆಯಾಗಿ ನಾಡಿನ ಉನ್ನತಿಗೆ ಅಹರ್ನಿಶಿ ಶ್ರಮಿಸಿದ ರಾಜಮಾತೆ ಕೆಂಪನಜಮ್ಮಣ್ಣಿಯವರ ಸರ್ವೋದಯ ಆಶಯಗಳಿಗೆ 2026ರ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಚ್ಯುತಿ ತರುವುದು ಸರ್ಕಾರಕ್ಕೆ ಶೋಭೆಯಾಗದು. ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಒಂದು ಹೊಸ ಆಸ್ಪತ್ರೆಯನ್ನೋ, ಶೈಕ್ಷಣಿಕ ಸಂಸ್ಥೆಯನ್ನೋ ಸ್ಥಾಪಿಸಬಹುದು ಅಥವಾ ಇತರ ರೀತಿಯಲ್ಲಿ ಅವರ ಹೆಸರನ್ನು ಚಿರಸ್ಮರಣೀಯವಾಗಿಸಲು ಕ್ರಮವಹಿಸುವುದು ಸಮಾಜ ಒಪ್ಪುವಂತಹದ್ದು. ಈ ಬಗೆಗೆ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮುಕ್ತವಾಗಿ ಯೋಚಿಸುವುದೊಳಿತು.

ಉದ್ಘಾಟನಾ ಫಲಕದ ಚಿತ್ರ
ಉದ್ಘಾಟನಾ ಫಲಕದ ಚಿತ್ರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com