ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂಡಿಯಾ ಬ್ಲಾಕ್‌ನಲ್ಲಿ ಎಬ್ಬಿಸಿದ ತಳಮಳ (ನೇರ ನೋಟ)

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಬ್ಲಾಕ್‌ನಲ್ಲಿರುವ ನಾಲ್ಕು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ಸೋತಿವೆ.
BJP celebration- Mamata Banarjee (file photo)
ಬಿಜೆಪಿ ಸಂಭ್ರಮಾಚರಣೆ- ಮಮತಾ ಬ್ಯಾನರ್ಜಿ- ರಾಹುಲ್ ಗಾಂಧಿonline desk
Updated on

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸೋತ ನಂತರ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಪತ್ರಿಕಾಗೋಷ್ಠಿಯಲ್ಲಿ ಒಂದು ಮಾತು ಹೇಳಿದ್ದಾರೆ. ಅದು- “ನಾನೀಗ ಸ್ವಚ್ಛಂದ ಹಕ್ಕಿ. ನನ್ನ ಗುರಿ ಸ್ಪಷ್ಟ. ಮುಂದಿನ ದಾರಿಯೂ ಗೊತ್ತಿದೆ. ಇಂಡಿಯಾ ಬ್ಲಾಕ್‌ ಮೈತ್ರಿಕೂಟವನ್ನು ಬಲಪಡಿಸುತ್ತೇನೆ. ಮತ್ತೆ ಪುಟಿದೇಳುತ್ತೇನೆ’’.

ಮಮತಾ ಬ್ಯಾನರ್ಜಿ ಅವರಿಗೆ ಸೋತ ನಂತರ ಇಂಡಿಯಾ ಬ್ಲಾಕ್‌ ನೆನಪಾಗಿದೆ. ಅವರು ತಮ್ಮದೇ ರಾಜ್ಯವಾದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ ಅಂಗಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಗೆ ಸಿದ್ದವಿರಲಿಲ್ಲ. ಕಾಂಗ್ರೆಸ್‌ , ಕಮ್ಯುನಿಸ್ಟ್‌ ಪಕ್ಷಗಳು ಏಕಾಂಗಿಯಾಗಿ ಕಣಕ್ಕೆ ಇಳಿದಿತ್ತು. ಬಿಜೆಪಿ ಇಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಏರಿ ದಾಖಲೆ ಬರೆದಿದೆ. ಬಿಜೆಪಿಯ ಬೆಳವಣಿಗೆ ಗೊತ್ತಿದ್ದೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಬೆಳೆಯಲು ಮಮತಾ ಬ್ಯಾನರ್ಜಿ ಅವರೇ ಕಾರಣ ಅಂದಿದ್ದರು.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಅಲ್ಲಿನ ಸ್ಥಳೀಯ ರಾಜಕೀಯ ಪರಿಸ್ಥಿತಿಯನ್ನು ಬದಲಿಸಿರಬಹುದು, ಆದರೆ, ಇದು ರಾಷ್ಟ್ರ ರಾಜಕಾರಣದ ಮೇಲೆಯೂ ಪರಿಣಾಮ ಬೀರಿದೆ. ಮುಂದಿನ ಲೋಕಸಭಾ ಚುನಾವಣೆಗೂ ವೇದಿಕೆ ಸಿದ್ದಪಡಿಸಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್‌ನಲ್ಲಿ ತಳಮಳ ಸೃಷ್ಟಿಸಿದೆ. ಈ ಮೈತ್ರಿಕೂಟದಲ್ಲೇ ಇರುವ ವೈರುಧ್ಯಗಳನ್ನು ಸಾರಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮಾತ್ರ ಈ ಚುನಾವಣೆಯನ್ನು ಮುಂದಿನ ಲೋಕಸಭಾ ಚುನಾವಣೆಯ ಪೂರ್ವಸಿದ್ಧತೆಯಂತೆಯೇ ಭಾವಿಸಿತು. ಜಿದ್ದಿಗೆ ಬಿದ್ದಂತೆ ಎದುರಿಸಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ಅವರು ಚುನಾವಣಾ ಉಸ್ತುವಾರಿ ಹೊತ್ತ ನಂತರ ಬಿಜೆಪಿಯ ಕಾರ್ಯತಂತ್ರವೇ ಬದಲಾಗಿದೆ.

ಬಿಜೆಪಿಗೆ 2029ರ ಲೋಕಸಭಾ ಚುನಾವಣೆಯ ಮೇಲೆ ಈಗಲೇ ಕಣ್ಣು. ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ಜೆಡಿಯು ಹಾಗೂ ತೆಲುಗುದೇಶಂ ಬೆಂಬಲದಿಂದ ಸರಕಾರ ರಚಿಸಿದೆ. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಲೇಬೇಕೆಂದು ಈಗಲೇ ಕಸರತ್ತು ಆರಂಭಿಸಿದೆ. ಈ ಕಸರತ್ತಿನ ಒಂದು ಭಾಗವೇ ಪಶ್ಚಿಮ ಬಂಗಾಳದ ಗೆಲುವು. ಬಿಜೆಪಿ ಮಡಿಲಲ್ಲಿ ಈಗ ಅಂಗ (ಅಸ್ಸಾಂ), ಕಳಿಂಗ (ಒಡಿಸ್ಸಾ), ಬಂಗಾ (ಬಂಗಾಳ) ಕೂಡ ಇದೆ.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಬ್ಲಾಕ್‌ನಲ್ಲಿರುವ ನಾಲ್ಕು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ಸೋತಿವೆ.ಕೇಂದ್ರದ ಎನ್‌ಡಿಎ ಸರಕಾರಕ್ಕೆ ಸಡ್ಡು ಹೊಡೆದಿರುವ ತೃಣಮೂಲ ಕಾಂಗ್ರೆಸ್‌ ಹಾಗೂ ಡಿಎಂಕೆಯಂತಹ ಪ್ರಬಲ ಪ್ರಾದೇಶಿಕ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ ಕೇರಳದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸೋತಿದೆ. ಇಲ್ಲಿ ಎಲ್‌ಡಿಎಫ್‌ ಸೋಲಿಸಿ ಅಧಿಕಾರಕ್ಕೆ ಏರಿರುವುದು ಇಂಡಿಯಾ ಬ್ಲಾಕ್‌ ಪ್ರಮುಖ ಅಂಗಪಕ್ಷವಾದ ಕಾಂಗ್ರೆಸ್‌ .

BJP celebration- Mamata Banarjee (file photo)
ಭರವಸೆ ಹುಸಿಗೊಳಿಸಿದ ಆಮ್‌ ಆದ್ಮಿ (ನೇರ ನೋಟ)

ದೇಶದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿದ್ದ ಏಕೈಕ ರಾಜ್ಯ ಕೇರಳ ಆಗಿತ್ತು. ಈಗ ದೇಶವು ಕಮ್ಯುನಿಸ್ಟ್‌ ಸರಕಾರ ಮುಕ್ತ ಭಾರತವಾಗಿದೆ. ಇದಕ್ಕೆ ಕಾಂಗ್ರೆಸ್ಸಿನ ಕೊಡುಗೆ ದೊಡ್ಡದಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಕೇಂದ್ರ ಸರಕಾರ ಸಮಗ್ರ ತನಿಖೆ ನಡೆಸಿದ್ದರೆ ಪಿಣರಾಯಿ ವಿಜಯನ್‌ ಇಷ್ಟೊತ್ತಿಗಾಗಲೇ ಜೈಲಿನಲ್ಲಿರುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪಿಣರಾಯಿ ಅವರು, ರಾಹುಲ್‌ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ವಿರೋಧಿಸಿದ ನನ್ನನ್ನು ಒಂದೂವರೆ ವರ್ಷ ಜೈಲಿನಲ್ಲಿಟ್ಟಿದ್ದರು. ಇದು ರಾಹುಲ್‌ ಗಾಂಧಿ ಅವರಿಗೆ ನೆನಪಿರಲಿ ಎಂದು ತಿರುಗೇಟು ನೀಡಿದ್ದರು. ರಾಹುಲ್‌ ಗಾಂಧಿ ಕೇರಳದ ಚುನಾವಣಾ ಪ್ರಚಾರದಲ್ಲಿ ಸಿಪಿ ಐ (ಎಂ) ಅನ್ನು ಕಮ್ಯುನಿಸ್ಟ್‌ ಜನತಾಪಾರ್ಟಿ (ಸಿಜೆಪಿ) ಎಂದು ಹೀಗಳೆದಿದ್ದರು.

ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌-ಎಡರಂಗ ದೋಸ್ತಿ. ಕೇರಳದಲ್ಲಿ ಕುಸ್ತಿ. ಇದು ಇಂಡಿಯಾ ಬ್ಲಾಕ್‌ನಲ್ಲಿರುವ ವೈರುಧ್ಯ. ಆದರೆ, ಇದು ಅನಿವಾರ್ಯ. ಕೇರಳದಲ್ಲಿ ಬಿಜೆಪಿಗೆ ನೆಲೆ ಇಲ್ಲ. ತೃತೀಯ ಶಕ್ತಿ ಇಲ್ಲ. ಕಾಂಗ್ರೆಸ್‌ -ಎಡರಂಗವೇ ಪರಸ್ಪರ ಎದುರಾಳಿಗಳು. ಒಂದು ವೇಳೆ ಮೈತ್ರಿಯಾದರೆ ಅನಾಯಾಸವಾಗಿ ಬಿಜೆಪಿಯನ್ನು ಬೆಳೆಸಿದಂತಾಗುವುದು ನಿಜ. ಹೀಗಾಗಿ, ಇಲ್ಲಿ ಕಾಂಗ್ರೆಸ್‌-ಎಡರಂಗ ಮೈತ್ರಿ ಅಪ್ರಸ್ತುತ.

ಕೇರಳದಲ್ಲಿ ಅಧಿಕಾರಕ್ಕೆ ಏರಿದ ಕಾಂಗ್ರೆಸ್‌ ಅಸ್ಸಾಂನಲ್ಲಿ ಗೆಲ್ಲುವುದಿರಲಿ, ಪ್ರತಿಪಕ್ಷ ಸ್ಥಾನಕ್ಕೂ ಅರ್ಹತೆ ಪಡೆದಿಲ್ಲ. ಇಲ್ಲಿ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಹೊತ್ತವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಚುನಾವಣಾ ಉಸ್ತುವಾರಿ ತಂಡದಲ್ಲಿದ್ದು ಪ್ರಚಾರ ಕೈಗೊಂಡಿದ್ದರು. ಪ್ರಿಯಾಂಕಾ ನಾಯಕತ್ವದಲ್ಲಿ ಕಾಂಗ್ರೆಸ್‌ ಎದುರಿಸಿದ ಮೊದಲ ಚುನಾವಣೆ ಇದು. ಈ ಚುನಾವಣೆಯಲ್ಲೇ ಕಾಂಗ್ರೆಸ್‌ ಕುಸಿದಿದೆ.

ಕೇಂದ್ರದಲ್ಲಿ ಎನ್‌ಡಿಎ ಸರಕಾರದ ವಿರುದ್ಧ ಸಂಘರ್ಷ ನಡೆಸಿದ್ದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು ಟಿಎಂಸಿ ಹಾಗೂ ಡಿಎಂಕೆ. ಈ ಪಕ್ಷಗಳ ಸೋಲು ರಾಷ್ಟ್ರ ರಾಜಕಾರಣದಲ್ಲಿ ಪ್ರತಿಪಕ್ಷಗಳ ಬಲವನ್ನು ಸಾಕಷ್ಟು ಕುಗ್ಗಿಸಿದೆ. ಮುಖ್ಯಮಂತ್ರಿಗಳಾಗಿದ್ದ ಮಮತಾ ಬ್ಯಾನರ್ಜಿ ಹಾಗೂ ಎಂ.ಕೆ.ಸ್ಟಾಲಿನ್‌ ಅವರ ಈ ಪಕ್ಷಗಳು ಅಧಿಕಾರ ಕಳೆದುಕೊಳ್ಳುವುದಷ್ಟೇ ಅಲ್ಲ, ಸ್ವತಃ ಈ ಇಬ್ಬರು ನಾಯಕರು ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಈ ಪ್ರಾದೇಶಿಕ ಪಕ್ಷಗಳ ಸೋಲು ದೇಶದ ಪ್ರತಿಪಕ್ಷದ ರಾಜಕಾರಣಕ್ಕೆ ಬಲವಾದ ಹೊಡೆತ. ಇಂಡಿಯಾ ಬ್ಲಾಕ್‌ನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಬಲ. ಈ ಪ್ರಾದೇಶಿಕ ಪಕ್ಷಗಳು ದುರ್ಬಲವಾದಷ್ಟೂ ಇಂಡಿಯಾ ಬ್ಲಾಕ್‌ ಅಷ್ಟರಮಟ್ಟಿಗೆ ಶಕ್ತಿಹೀನ.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ ನಲ್ಲಿರುವ ರಾಷ್ಟ್ರೀಯ ಜನತಾದಳ ಸೋತು ಮೈತ್ರಿಕೂಟಕ್ಕೆ ಹಿನ್ನಡೆ ಆಗಿತ್ತು. ಕಳೆದ ತಿಂಗಳು ಆಮ್‌ ಆದ್ಮಿಯ ಹತ್ತು ರಾಜ್ಯಸಭಾ ಸದಸ್ಯರಲ್ಲಿ ಏಳು ಮಂದಿ ಬಿಜೆಪಿ ಸೇರಿದ್ದರು. ಆಮ್‌ ಆದ್ಮಿ ಪಕ್ಷ ಈ ಹಿಂದೆಯೇ ಇಂಡಿಯಾ ಬ್ಲಾಕ್‌ನಿಂದ ಹೊರಬಿದ್ದಿದೆ. ಈ ವಿದ್ಯಮಾನಗಳು ಕೂಡ ದೇಶದಲ್ಲಿ ಪ್ರತಿಪಕ್ಷಗಳ ರಾಜಕಾರಣಕ್ಕೆ ಹಿನ್ನಡೆ ತಂದಿದೆ.

ತಮಿಳುನಾಡಿನ ವಿದ್ಯಮಾನ ಈಗ ಕುತೂಹಲಕಾರಿ. ಅಲ್ಲಿ ಅತಂತ್ರ ವಿಧಾನಸಭೆ ರಚನೆಯೇ ಈ ವಿದ್ಯಮಾನಗಳಿಗೆ ಮೂಲ ಕಾರಣ. ಏಕೈಕ ದೊಡ್ಡ ಪಕ್ಷವಾಗಿರುವ ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿಧಾನಸಭೆಯಲ್ಲಿ ಬಹುಮತ ಪಡೆಯಲು ಇನ್ನೂ 11 ಸದಸ್ಯರ ಬೆಂಬಲ ಬೇಕು. ಇದುವೇ ಅಲ್ಲಿನ ರಾಜಕೀಯ ಚಿತ್ರಣವನ್ನೇ ಬದಲಿಸಲು ಹೊರಟಿದೆ. ಇಂಡಿಯಾ ಬ್ಲಾಕ್‌ ಮೇಲೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಇಂಡಿಯಾ ಬ್ಲಾಕ್‌ನಲ್ಲಿ ಡಿಎಂಕೆ ಇದೆ. ಈ ಡಿಎಂಕೆ ನೇತೃತ್ವದಲ್ಲಿ ಜಾತ್ಯತೀತ ಪ್ರಗತಿಪರ ರಂಗವು ತಮಿಳುನಾಡಿನಲ್ಲಿ ಚುನಾವಣೆ ಎದುರಿಸಿತ್ತು. ಕಾಂಗ್ರೆಸ್‌ ಈ ಮೈತ್ರಿಕೂಟದಲ್ಲಿದ್ದು ಐದು ಸ್ಥಾನಗಳಲ್ಲಿ ಗೆದ್ದಿದೆ. ಈಗ ಕಾಂಗ್ರೆಸ್‌ ವಿಜಯ್‌ ನೇತೃತ್ವದ ಟಿವಿಕೆಗೆ ಬೆಂಬಲ ಘೋಷಿಸಿದೆ. ಡಿಎಂಕೆಗೆ ಕೈಕೊಟ್ಟು ವಿಜಯ್‌ ಕೈ ಕುಲುಕಿದೆ. ಇದು ಕಾಂಗ್ರೆಸ್ಸಿನ ನಂಬಿಕೆ ದ್ರೋಹ. ಜನಾದೇಶದ ನಿರ್ಲಕ್ಷ್ಯ.

ಕಾಂಗ್ರೆಸ್‌ ಪಕ್ಷವು ಟಿವಿಕೆಗೆ ಬೆಂಬಲಿಸಿದ್ದನ್ನು ಸಮರ್ಥಿಸಿಕೊಂಡಿದೆ. ಒಂದು ವೇಳೆ ತಾನು ಟಿವಿಕೆಗೆ ಬೆಂಬಲಿಸದಿದ್ದರೆ ಎನ್‌ಡಿಎ ನೇತೃತ್ವದ ಕೋಮುವಾದಿ ಶಕ್ತಿಗಳು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆ ಇತ್ತು. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಈ ನಿಲುವು ತಳೆದಿದೆ ಎಂದು ಹೇಳಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com