ಹೈಪರ್‌ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ (ಕುಶಲವೇ ಕ್ಷೇಮವೇ)

ಇಂದು ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ಹೈಪರ್‌ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ (ಕುಶಲವೇ ಕ್ಷೇಮವೇ)
Updated on

ಇತ್ತೀಚೆಗಷ್ಟೇ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು (ಮೇ 17) ಆಚರಿಸಲಾಯಿತು. ಇದು ರಕ್ತದೊತ್ತಡ ಜಾಗೃತಿ ಮಾಸದ ಭಾಗವಾಗಿದೆ. ಈ ವರ್ಷದ ವಿಶ್ವ ಅಧಿಕ ರಕ್ತದೊತ್ತಡ ದಿನದ ಘೋಷವಾಕ್ಯ “ಒಟ್ಟಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣ”.

ವಿಶ್ವ ಅಧಿಕ ರಕ್ತದೊತ್ತಡ ದಿನ

ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸುವ ಉದ್ದೇಶ ಅಧಿಕ ರಕ್ತದೊತ್ತಡದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದು, ಇದರ ತಡೆಗಟ್ಟುವಿಕೆ, ಗುರುತಿಸುವಿಕೆ ಮತ್ತು ನಿಯಂತ್ರಣವನ್ನು ಉತ್ತೇಜಿಸುವುದು ಹಾಗೂ ವ್ಯಕ್ತಿ, ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಪ್ರೇರೇಪಿಸುವುದಾಗಿದೆ.

ಇಂದು ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಇಂದು ಅಧಿಕ ರಕ್ತದೊತ್ತಡಕ್ಕೆ ಹಿಂದಿಗಿಂತ ಅನೇಕ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆಗಳು ಲಭ್ಯವಿದ್ದರೂ ಅನೇಕ ಜನರಿಗೆ ಈ ಸಮಸ್ಯೆಯ ಅರಿವೇ ಇಲ್ಲ. ರಕ್ತದೊತ್ತಡ ಇರುವವರಲ್ಲಿ ಕೇವಲ ನಾಲ್ವರಲ್ಲಿ ಒಬ್ಬರಷ್ಟೇ ತಮ್ಮ ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಟ್ಟಿದ್ದಾರೆ.

ರಕ್ತದೊತ್ತಡ ಸೈಲೆಂಟ್ ಕಿಲ್ಲರ್ ಏಕೆ?

ರಕ್ತದೊತ್ತಡವನ್ನು “ಮೌನ ಹಂತಕ”(ಸೈಲೆಂಟ್ ಕಿಲ್ಲರ್) ಎಂದು ಕರೆಯಲಾಗುತ್ತದೆ, ಏಕೆಂದರೆ ಇದರ ಸಾಮಾನ್ಯವಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ಸಮಸ್ಯೆಗಳು ಹಾಗೂ ದೃಷ್ಟಿದೋಷಗಳಿಗೂ ಎಡೆಮಾಡಿಕೊಡುತ್ತದೆ.

ರಕ್ತದೊತ್ತಡವನ್ನು ಬೇಗ ಪತ್ತೆಹಚ್ಚಿ ನಿಯಮಿತ ಪರೀಕ್ಷೆ ಮತ್ತು ನಿರಂತರ ಚಿಕಿತ್ಸೆಗಳ ಮೂಲಕ ಇದರಿಂದ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದು. ರಕ್ತದೊತ್ತಡ ನಿರ್ವಹಣೆ ಜೀವನಪರ್ಯಂತ ನಡೆಯುವ ಪ್ರಕ್ರಿಯೆ ಎಂಬುದನ್ನು ನಾವು ಮರೆಯಬಾರದು.

ರಕ್ತದೊತ್ತಡ ಪತ್ತೆ ಮತ್ತು ನಿರ್ವಹಣೆ ಹೇಗೆ?

ಇಂದಿನ ಡಿಜಿಟಲ್ ಯುಗದಲ್ಲಿ, ವೈಯಕ್ತಿಕ ಆರೋಗ್ಯ ಮೇಲ್ವಿಚಾರಣಾ ಸಾಧನಗಳು ರಕ್ತದೊತ್ತಡ ನಿರ್ವಹಣೆಯನ್ನು ಸುಲಭಗೊಳಿಸಿವೆ. ಮನೆಯಲ್ಲೇ ನಿಖರವಾಗಿ ರಕ್ತದೊತ್ತಡವನ್ನು ಅಳೆಯುವುದು ಮತ್ತು ಆ ಅಂಕಿಅಂಶಗಳನ್ನು ಮೊಬೈಲ್ ಆ್ಯಪ್‌ಗಳಲ್ಲಿ ದಾಖಲಿಸಿಟ್ಟುಕೊಳ್ಳುವುದು, ವೈದ್ಯರಿಗೆ ರೋಗಿಯ ಆರೋಗ್ಯದ ಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ರಕ್ತದೊತ್ತಡ ನಿರ್ವಹಣೆಯು ಕೇವಲ ವೈಯಕ್ತಿಕ ಜವಾಬ್ದಾರಿ ಮಾತ್ರವಲ್ಲದೆ, ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಪರಸ್ಪರ ರಕ್ತದೊತ್ತಡ ಪರೀಕ್ಷಿಸಿಕೊಳ್ಳಲು ಪ್ರೇರೇಪಿಸುವುದು, ಆರೋಗ್ಯಕರ ಆಹಾರ ಸೇವನೆಯಲ್ಲಿ ಬೆಂಬಲ ನೀಡುವುದು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವುದು ಅತ್ಯಗತ್ಯ. ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಸಾಮುದಾಯಿಕ ಆರೋಗ್ಯ ಶಿಬಿರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಕ್ತದೊತ್ತಡದ ಗಂಭೀರತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಾಮೂಹಿಕ ಜಾಗೃತಿಯೇ ಈ “ಮೌನ ಹಂತಕ”ನನ್ನು ಸೋಲಿಸುವ ಪ್ರಬಲ ಅಸ್ತ್ರವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದೇ ಇದರ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಮೊದಲ ಹೆಜ್ಜೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ರಕ್ತದೊತ್ತಡದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಆರೋಗ್ಯಕರ ಆಹಾರ, ದೈಹಿಕ ಚಟುವಟಿಕೆ, ತಂಬಾಕು ತ್ಯಜಿಸುವುದು, ಮದ್ಯಪಾನ ಕಡಿಮೆ ಮಾಡುವುದು ಮತ್ತು ಸರಿಯಾದ ಔಷಧೋಪಚಾರ ಇದರ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೈಪರ್‌ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ (ಕುಶಲವೇ ಕ್ಷೇಮವೇ)
ಎಬೋಲಾ ವೈರಸ್ ಕಾಯಿಲೆ: ಲಕ್ಷಣಗಳು, ಕಾರಣಗಳು ಮತ್ತು ಹರಡುವಿಕೆ

ಹೈಪರ್‌ಟೆನ್ಷನ್ ಎಂದರೇನು?

ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಷನ್ ಎನ್ನುವುದು ರಕ್ತವು ಧಮನಿಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಒತ್ತಡ ಹಾಕುವ ಸಮಸ್ಯೆಯ ಸ್ಥಿತಿಯಾಗಿದೆ. ಇದು ಇಂದಿನ ಜೀವನಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಯಾಗಿದೆ.

ಅಧಿಕ ರಕ್ತದೊತ್ತಡಕ್ಕೆ ಕಾರಣಗಳು

ಅಧಿಕ ರಕ್ತದೊತ್ತಡ ಬರಲು ಹಲವಾರು ಕಾರಣಗಳಿವೆ. ಅತಿಯಾದ ಉಪ್ಪಿನ ಸೇವನೆ, ಅತಿಯಾಗಿ ಎಣ್ಣೆ ಮತ್ತು ಕೊಬ್ಬುಯುಕ್ತ ಆಹಾರ ಸೇವನೆ, ಬಿರುಸು ನಡಿಗೆ/ವ್ಯಾಯಾಮದ ಕೊರತೆ, ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ, ನಿದ್ರಾಹೀನತೆ, ಅತಿಯಾದ ತೂಕ ಹಾಗೂ ವಂಶಪಾರಂಪರ್ಯತೆ ಪ್ರಮುಖ ಕಾರಣಗಳಾಗಿವೆ. ಇಂದಿನ ವೇಗದ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಮತ್ತು ಕುಳಿತ ಕೆಲಸಗಳು ರಕ್ತದೊತ್ತಡ ಹೆಚ್ಚಲು ಕಾರಣವಾಗುತ್ತಿವೆ ಎಂಬುದು ಕಳಕಳಿಯ ಸಂಗತಿಯಾಗಿದೆ.

ಒಮ್ಮೆ ರಕ್ತದೊತ್ತಡ ಬಂದರೆ ವೈದ್ಯರ ಸಲಹೆಯಂತೆ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಆದರೆ ಔಷಧಿಯ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆ ತರದೇ ಇದ್ದರೆ ರಕ್ತದೊತ್ತಡ ನಿಯಂತ್ರಣದಲ್ಲಿ ಇರಲು ಕಷ್ಟವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿ ಅತ್ಯಂತ ಅಗತ್ಯವಾಗಿದೆ.

ಹೈಪರ್‌ಟೆನ್ಷನ್ ತಡೆಯುವುದು ಹೇಗೆ?

ಈ ರೋಗವನ್ನು ತಡೆಗಟ್ಟುವ ಕ್ರಮಗಳಲ್ಲಿ ಪ್ರತಿದಿನ ವ್ಯಾಯಾಮ ಮಾಡುವುದು, ತಾಜಾ ಹಣ್ಣು-ತರಕಾರಿ-ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದು, ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು, ತೂಕ ನಿಯಂತ್ರಣದಲ್ಲಿ ಇಡುವುದು ಹಾಗೂ ಸಾಕಷ್ಟು ನಿದ್ರೆ ಪಡೆಯುವುದು ಸೇರಿವೆ. ಜೊತೆಗೆ ಧ್ಯಾನ, ಯೋಗ ಮತ್ತು ಮನಶಾಂತಿ ಕಾಪಾಡಿಕೊಳ್ಳುವುದು ಕೂಡ ಸಹಾಯಕವಾಗುತ್ತದೆ.

ಕೊನೆಮಾತು: ಒಟ್ಟಾರೆ ಹೇಳುವುದಾದರೆ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಅತ್ಯಂತ ಮುಖ್ಯ. ಆರಂಭದಲ್ಲೇ ಅಧಿಕ ರಕ್ತದೊತ್ತಡವನು ಪತ್ತೆಹಚ್ಚಿದರೆ ಅದನ್ನು ಸುಲಭವಾಗಿ ಮುಂದೆ ನಿಯಂತ್ರಿಸಬಹುದು. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಮತ್ತು ದೀರ್ಘ ಜೀವನ ನಡೆಸಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com