

ಅವತ್ತು ಅಯೋಧ್ಯೆ ಟು ಲಕ್ನೋ... ಇವತ್ತು ಮಥುರಾ ಟು ಲಕ್ನೋ...
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಇನ್ನು ಮೂರ್ನಾಲ್ಕು ತಿಂಗಳಿರುವಾಗ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಸಾಧನೆಗೆ ಹೊಸ ದಾಳಗಳನ್ನು ಉರುಳಿಸುತ್ತಿದೆ. ಧಾರ್ಮಿಕ ಭಾವನೆಗಳ ಬೆನ್ನೇರಿ ಅಧಿಕಾರ ಹಿಡಿಯುವ ತನ್ನ ಅಸ್ತ್ರವನ್ನು ಮತ್ತೆ ಪ್ರಯೋಗಿಸುತ್ತಿದೆ. ಈ ಬಾರಿ ಚುನಾವಣಾ ಸಮರಕ್ಕೆ ಮಥುರಾದ ಶ್ರೀ ಕೃಷ್ಮ ಜನ್ಮಭೂಮಿಯಲ್ಲಿ ಶ್ರೀ ಕೃಷ್ಣ ದೇವಸ್ಥಾನ ನಿರ್ಮಿಸುವ ವಿವಾದವನ್ನು ಚುನಾವಣಾ ಸಮರ ಕಣಕ್ಕೆ ಎಳೆದು ತಂದಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಸ್ಲೋಗನ್ ‘ರಾಧೆ ರಾಧೆ ಕಮಲ್ ಕಿಲಾದೆ’.
ಉತ್ತರಪ್ರದೇಶ ಗೆದ್ದವರು ದೇಶ ಆಳುತ್ತಾರೆ ಎಂಬ ಮಾತಿದೆ. ಏಕೆಂದರೆ ಉತ್ತರಪ್ರದೇಶ ಅತಿ ದೊಡ್ಡ ರಾಜ್ಯ. ಅಲ್ಲಿ 80 ಲೋಕಸಭಾ ಕ್ಷೇತ್ರಗಳಿವೆ. ಎಲ್ಲೆಡೆಯಂತೆ ಅಲ್ಲಿಯೂ ಜಾತಿ ಆಧರಿತ ರಾಜಕೀಯ ಲೆಕ್ಕಾಚಾರಗಳೇ. ಹಿಂದುತ್ವದ ರಾಜಕಾರಣದ ಪ್ರಯೋಗ ಶಾಲೆಯಲ್ಲಿ ಬಿಜೆಪಿಗೂ ಯಶಸ್ಸು.
ಉತ್ತರಪ್ರದೇಶ ಚುನಾವಣೆ ಈ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕಳೆದ ಎರಡು ಚುನಾವಣೆಗಿಂತ ಸವಾಲು. ಕಳೆದ ಹತ್ತು ವರ್ಷಗಳ ಅವರ ಆಡಳಿತವನ್ನು ಮತದಾರ ನಿಕಷಕ್ಕೆ ಒಡ್ಡುವ ಕಾಲ. ಸಹಜವಾಗಿ ಸರಕಾರದ ವಿರುದ್ಧ ನಕಾರಾತ್ಮಕ ಅಂಶಗಳೂ ಸಾಕಷ್ಟಿವೆ. ಅಭಿವೃದ್ಧಿ ಕಾರ್ಯಗಳೂ ಬೆನ್ನಿಗಿವೆ. ಬಿಜೆಪಿಯಲ್ಲಿ ಯೋಗಿ ಆದಿತ್ಯನಾಥರೇ ಒಂದು ಬ್ರ್ಯಾಂಡ್. ಮಾಸ್ ಲೀಡರ್. ತಮ್ಮ ಉಕ್ಕಿನ ಕ್ರಮಗಳಿಗೆ ಹೆಸರುವಾಸಿ. ಅವರ ಆಡಳಿತದಲ್ಲಿ ಹತ್ತು ಹಲವು ಮೂಲ ಸೌಕರ್ಯಗಳ ಅಭಿವೃದ್ಧಿ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಕಠಿಣ ಕ್ರಮಗಳು. ಅದೇ ರೀತಿ ವಿವಾದಗಳೂ ಕೂಡ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ದೇಶಾದ್ಯಂತ ಅವರಷ್ಟು ಗಮನ ಸೆಳೆದ ಮತ್ತೊಬ್ಬ ಮುಖ್ಯಮಂತ್ರಿ ಈ ಕಾಲಘಟ್ಟದಲ್ಲಿಲ್ಲ.
ಉತ್ತರಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಾರ್ಟಿ ಪ್ರತಿಪಕ್ಷ. ಈ ಪ್ರಾದೇಶಿಕ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಸಂಸದರು. ಮಾಜಿ ಮುಖ್ಯಮಂತ್ರಿ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಸೋತಿದೆ. ಈ ಬಾರಿಯೂ ಇದೇ ಪರಿಸ್ಥಿತಿ ಬಂದರೆ ಅಖಿಲೇಶ್ ಯಾದವ್ ತಮ್ಮ ಪಕ್ಷದ ಮೇಲೆ ಸಾಧಿಸಿರುವ ಹಿಡಿತ ಸಡಿಲವಾಗಬಹುದು. ನೆಹರೂ- ಗಾಂಧಿ ಮನೆತನದ ರಾಜಕಾರಣಕ್ಕೆ ನೀರೆರೆದ ಇಲ್ಲಿಯೇ ಕಾಂಗ್ರೆಸ್ ಈಗ ದುರ್ಬಲ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಆರು ಕ್ಷೇತ್ರಗಳನ್ನು ಗೆದ್ದ ನಂತರ ಕಾಂಗ್ರೆಸ್ಸಿನ ಆತ್ಮವಿಶ್ವಾಸ ಚಿಗುರಿದೆ.
ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ 2022ರ ಚುನಾವಣೆಯಲ್ಲಿ ಬಿಜೆಪಿ 376 ರಲ್ಲಿ ಕಣಕ್ಕಿಳಿದು 255 (ಶೇ.41.99) ಸ್ಥಾನಗಳನ್ನು ಪಡೆದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿತು. ಸಮಾಜವಾದಿ ಪಕ್ಷ 347 ಕ್ಷೇತ್ರಗಳಲ್ಲಿ ಕಣಕ್ಕಿಳಿದು 111 (ಶೇ.32.60) ಕ್ಷೇತ್ರಗಳನ್ನು ಗೆದ್ದು ಪ್ರತಿಪಕ್ಷವಾಯಿತು. ಆಗ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದು 399 ಕ್ಷೇತ್ರಗಳಲ್ಲಿ. ಗೆದ್ದಿದ್ದು ಕೇವಲ ಎರಡು ಸೀಟುಗಳನ್ನು. ಗಳಿಸಿದ ಶೇಕಡಾವಾರು ಮತಗಳು 2.33. ಕಾಂಗ್ರೆಸ್ಸಿನ ಶೇ.97ರಷ್ಟು ಹುರಿಯಾಳುಗಳು ಠೇವಣಿ ಕಳೆದುಕೊಂಡಿದ್ದರು. ಬಹುಜನ ಸಮಾಜಪಕ್ಷ ಗೆದ್ದಿದ್ದು ಕೇವಲ ಒಂದು ಸ್ಥಾನ ಮಾತ್ರ (ಶೇ.12.88). ಬಿಜೆಪಿ 2017ರಲ್ಲಿ 312 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳ ಮಧ್ಯೆ ಮತಗಳ ಅಂತರ 2017ರಲ್ಲಿ 1.55 ಕೋಟಿ ಇತ್ತು. ಇದು 2022ಕ್ಕೆ 85 ಲಕ್ಷಕ್ಕೆ ಕುಸಿಯಿತು.
ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಯಶಸ್ವಿಯಾಯಿತು. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಒಗ್ಗೂಡಿದರೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಸಂದೇಶ ಆ ಚುನಾವಣೆ ಸಾರಿತು. ಆ ಚುನಾವಣೆಯಲ್ಲಿ ಬಿಜೆಪಿ 33, ಸಮಾಜವಾದಿ ಪಕ್ಷ 37 ಲೋಕಸಭಾ ಸ್ಥಾನಗಳನ್ನು ಪಡೆಯಿತು. ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದು ಚೇತರಿಸಿಕೊಂಡಿತ್ತು. ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ 64 ಸೀಟುಗಳನ್ನು ಗೆದ್ದಿತ್ತು. ಉತ್ತರಪ್ರದೇಶದಲ್ಲಾದ ಹಿನ್ನಡೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಾರ್ಟಿಗೆ ಕಿರಿಯ ಪಾಲುದಾರ. ಕಾಂಗ್ರೆಸ್ ಈ ಬಾರಿ 181 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಕೇಳಿದೆ. ಇದಕ್ಕೆ ಅಖಿಲೇಶ್ ಸಿದ್ದರಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಗಳಿಸಿರುವ ಮತಗಳ ಆಧಾರದ ಮೇಲೆ ಕಾಂಗ್ರೆಸ್ ಹೆಚ್ಚಿನ ಸೀಟುಗಳಿಗಾಗಿ ಚೌಕಾಶಿ ನಡೆಸಿದೆ. ಆದರೆ, ತನ್ನ ಚೇತರಿಕೆಗೆ ಸಮಾಜವಾದಿ ಪಕ್ಷ ಬೆನ್ನೆಲುಬಾಗಿತ್ತು ಎಂಬುದನ್ನು ಅದು ಮರೆತಿದೆ. ಕಾಂಗ್ರೆಸ್ ಕೇಳುತ್ತಿರುವ 22 ಕ್ಷೇತ್ರಗಳಲ್ಲಿ ಈಗ ಸಮಾಜವಾದಿ ಪಕ್ಷದ ಶಾಸಕರಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹಾಗೂ ತರ್ಕದ ಆಧಾರದ ಮೇಲೆ ಕಾಂಗ್ರೆಸ್ ಸೀಟುಗಳನ್ನು ಕೇಳಲಿ ಎಂಬುದು ಸಮಾಜವಾದಿ ಪಕ್ಷದ ನಾಯಕರ ಸಲಹೆ. ಕಾಂಗ್ರೆಸ್ ಬೇಡಿಕೆಗೆ ಅರ್ಥವಿದೆಯೇ?
ಉತ್ತರಪ್ರದೇಶದಲ್ಲಿ ಯಾವಾಗ ಚುನಾವಣೆಗಳು ಬರುತ್ತದೆಯೋ ಆಗ ಬಿಜೆಪಿ ನಾಯಕರು ಹೇಳುವ ಮಾತು ಒಂದೇ. ಅದು - 80 ವರ್ಸಸ್ 20. ಅಂದರೆ, ಬಿಜೆಪಿ ಬೆನ್ನಿಗೆ ಬಹುಸಂಖ್ಯಾತ ಶೇ.80ರಷ್ಟು ಹಿಂದೂಗಳಿದ್ದಾರೆ. ಎದುರಾಳಿ ಪಾಳಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಬೆಂಬಲಿತ ಪಕ್ಷಗಳಿವೆ. ಅದರಲ್ಲೂ ಸಮಾಜವಾದಿ ಪಕ್ಷ ಪ್ರಮುಖವಾಗಿದೆ ಎಂದೇ ಬಿಜೆಪಿ ನಾಯಕರ ಈ ಮಾತಿನ ಅರ್ಥ. ಉತ್ತರಪ್ರದೇಶದಲ್ಲಿ 2014 ರಿಂದ ಹೀಗೆ ರಾಜಕೀಯ ವಿಭಜನೆ ನಡೆದಿದೆ. ಆದರೆ, ಇದು 2024ರ ಲೋಕಸಭಾ ಚುನಾವಣೆಯಲ್ಲಿ ಕಂಡು ಬರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದವರ ಸಾಕಷ್ಟು ಮತಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಈ ವಿಧಾನಸಭಾ ಚುನಾವಣೆಯಲ್ಲಿ ಆ ಮತಗಳನ್ನು ಮತ್ತೆ ಕ್ರೂಡೀಕರಿಸುವ ಸವಾಲು ಬಿಜೆಪಿಗೆ ಇದೆ.
ಸಮಾಜವಾದಿ ಪಕ್ಷಕ್ಕೆ ಲಾಗಾಯ್ತಿನಿಂದಲೂ ಮುಸ್ಲಿಮರು-ಯಾದವರು ಸಾಂಪ್ರದಾಯಿಕ ಮತದಾರರು. ಆ ಪಕ್ಷ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈಗ ಪಿಚಡಾ, ದಲಿತರು, ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ವಿಸ್ತಾರ ತಳಹದಿ ರೂಪಿಸಲು ಅಖಿಲೇಶ್ ಯಾದವ್ ತಂತ್ರ ಹೆಣೆದಿದ್ದಾರೆ. ಉತ್ತರಪ್ರದೇಶದಲ್ಲಿ ಮೇಲ್ಜಾತಿಯಲ್ಲಿ ಯೋಗಿ ಆದಿತ್ಯನಾಥ ಅವರ ಆಡಳಿತದ ಬಗ್ಗೆ ಅಸಮಾಧಾನಗಳಿವೆ. ಇದನ್ನು ಅರಿತಿರುವ ಅಖಿಲೇಶ ಯಾದವ್ ಅವರು ಪಿಡಿ ಅಂದರೆ ಪಂಡಿತ್ ಕೂಡ ಎಂದು ಸೇರಿಸಿಕೊಂಡು ಬ್ರಾಹ್ಮಣರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಖಿಲೇಶರ ಈ ಪ್ರಯೋಗ ಯಶಸ್ವಿಯಾಗಿದೆ.
ಉತ್ತರಪ್ರದೇಶದಲ್ಲಿ ದಲಿತರ ರಾಜಕಾರಣ ಈಗ ಕವಲು ದಾರಿಯಲ್ಲಿದೆ. ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬರುತ್ತಿದ್ದ ಬಹುಜನ ಸಮಾಜಪಕ್ಷ ತನ್ನ ನೆಲೆಯನ್ನು ಕಳೆದುಕೊಂಡಿದೆ. ಬಿಎಸ್ಪಿ ನಾಯಕಿ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಪ್ರಕರಣಗಳು ಕೊರಳಿಗೆ ಸುತ್ತಿಕೊಂಡವು. ಕಳೆದ ಮೂರು ಚುನಾವಣೆಗಳಿಂದ ಅವರ ಪಕ್ಷ ಅವನತಿಯ ಹಾದಿ ಹಿಡಿದಿದೆ. ದಲಿತರ ಮತಗಳನ್ನು ಸೆಳೆಯಲು ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಈಗ ಪೈಪೋಟಿಗೆ ಇಳಿದಿವೆ. ಉತ್ತರಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ದಲಿತರು ಶೇ.21ರಷ್ಟು ಇದ್ದಾರೆಂಬ ಅಂದಾಜಿದೆ.
ಅಯೋಧ್ಯೆಯ ಶ್ರೀರಾಮಮಂದಿರದ ಹುಂಡಿ ಕಳುವು ಪ್ರಕರಣದಲ್ಲಿ ಪ್ರತಿಪಕ್ಷಗಳು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಬಿಜೆಪಿ ಮಥುರಾ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣದ ವಿವಾದವನ್ನು ಕೈಗೆತ್ತಿಕೊಂಡಿದೆ. ಬಿಜೆಪಿ ಹೃದಯಕ್ಕೆ ಈ ವಿವಾದ ಬಲುಹತ್ತಿರ. ಉತ್ತರಪ್ರದೇಶದಲ್ಲಿ ಹಿಂದುಳಿದ ಯಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾದವ ಸಮಾಜವು ಸಮಾಜವಾದಿ ಪಕ್ಷದ ಜೊತೆ ಗುರುತಿಸಿಕೊಂಡಿದೆ. ಈ ವಿವಾದವನ್ನು ಕೆದಕಿ ಯಾದವರ ಮತಗಳನ್ನು ಸೆಳೆಯುವ ಕಸರತ್ತು ಬಿಜೆಪಿಯದು.
ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರು, ಅಯೋಧ್ಯೆ ನಮ್ಮದಾಗಿದೆ. ಈಗ ಮಥುರಾದ ಸರದಿ. ಮಥುರಾದ ಶ್ರೀಕೃಷ್ಣ ಜನ್ಮಸ್ಥಳದಲ್ಲಿ ಶ್ರೀ ಕೃಷ್ಣ ದೇವಸ್ಥಾನವನ್ನು ನ್ಯಾಯಾಲಯದ ಮೂಲಕ ಅಥವಾ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ನಿರ್ಮಿಸುತ್ತೇವೆ ಎನ್ನುತ್ತಾರೆ. ಶ್ರೀಕೃಷ್ಣ ದೇವಸ್ಥಾನ ನಿರ್ಮಾಣಕ್ಕೆ ಮಥುರಾಗೆ ಆಗಮಿಸಿ ಕರಸೇವೆಯಲ್ಲಿ ಪಾಲ್ಗೊಳ್ಳುವಂತೆ ಯಾದವ ಸಮಾಜದ ಅಖಿಲೇಶ ಯಾದವ್ ಅವರಿಗೆ ಮೌರ್ಯ ಬಹಿರಂಗ ಆಹ್ವಾನ ನೀಡಿದ್ದಾರೆ.
ಇತ್ತ ಅಖಿಲೇಶ ಯಾದವ್ ಚುನಾವಣೆ ಸಮೀಪಿಸುತ್ತಿರುವಾಗ ‘ಮೃದು ಹಿಂದುತ್ವ’ದ ಕಡೆ ಹೊರಳಿರುವ ಸೂಚನೆಗಳು ದೊರೆತಿವೆ. ಅಖಿಲೇಶ ಯಾದವ್ ಕುಟುಂಬ ಸಮೇತ ಡಿಸೆಂಬರ್ 12 ರಂದು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ ನಂತರ ಇದು ಅಖಿಲೇಶ್ ಅವರ ಮೊದಲ ಭೇಟಿ ಆಗಲಿದೆ. ಬಿಜೆಪಿ ಇದನ್ನು ಟೀಕಿಸಿದೆ. ಸಮಾಜವಾದಿ ಪಕ್ಷದ ಸರಕಾರ ಈ ಹಿಂದೆ ಕರಸೇವಕರ ಮೇಲೆ ಗುಂಡು ಹಾರಿಸಿದ್ದನ್ನು ರಾಮಭಕ್ತರು ಕ್ಷಮಿಸುವುದಿಲ್ಲ ಎಂದಿದ್ದಾರೆ. ಅಯೋಧ್ಯೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಯೋಗಿ ಆದಿತ್ಯನಾಥರ ಬಹಿರಂಗ ಸವಾಲನ್ನು ಅಖಿಲೇಶ್ ಸ್ವೀಕರಿಸಿಲ್ಲ. ತಾವು ಈ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದಿಲ್ಲ. ರಾಜ್ಯಾದ್ಯಂತ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
ಹಿಂದುತ್ವದ ರಾಜಕಾರಣದ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ 1.27 ಕೋಟಿ ಹಿಂದೂಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಆತಂಕ ತಂದಿದೆ. ಮತದಾರರ ಹೆಸರನ್ನು ಪಟ್ಟಿಗೆ ಸೇರಿಸಲು ಬಿಜೆಪಿ ಈಗ ಮತದಾರರ ಜೋಡೋ ಅಭಿಯಾನವನ್ನು ಆರಂಭಿಸಲು ಮುಂದಾಗಿದೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ, ರಾಜಕೀಯ ಚಟುವಟಿಕೆಗಳು ಕಾವು ಪಡೆಯುತ್ತಿವೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com