

ಸುಮಾರು ಹತ್ತು ವರ್ಷಗಳ ಹಿಂದೆ ಹಿಂದಿಯಲ್ಲಿ ಒಂದು ಸಿನಿಮಾ ತೆರೆ ಕಂಡಿತ್ತು. ಹೆಸರು ‘ಉಡ್ತಾ ಪಂಜಾಬ್’ (ತೇಲುತ್ತಿರುವ ಪಂಜಾಬ್). ಪಂಬಾಬಿನಲ್ಲಿ ಡ್ರಗ್ಸ್ ಹಾವಳಿಯನ್ನು ಮುಖ್ಯ ವಸ್ತುವನ್ನಾಗಿಸಿಕೊಂಡಿದ್ದ ಚಿತ್ರ ಇದು. ಇಡೀ ದೇಶದಲ್ಲಿ ಮಾದಕವಸ್ತುಗಳ ಸಾಗಣೆ, ಸಂಗ್ರಹಣೆ, ವ್ಯಸನಕ್ಕೆ ಅತಿ ಹೆಚ್ಚು ಬಲಿಯಾಗಿರುವುದು ಪಂಜಾಬ್. ಅದಕ್ಕೇ ಯಾವುದಾದರೂ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಬಗ್ಗೆ ಚರ್ಚೆಯಾದರೆ ‘ಉಡ್ತಾ ಪಂಜಾಬ್’ ಆಗಲು ಬಿಡೋದಿಲ್ಲ ಅಂತ ಅಲ್ಲಿನ ಅಧಿಕಾರಸ್ಥರು ನುಡಿಯುತ್ತಾರೆ. ಪಂಜಾಬ್ ಈ ವಿಚಾರದಲ್ಲಿ ಅಷ್ಟು ಕುಖ್ಯಾತಿ. ಪಂಜಾಬ್‌ನಲ್ಲಿ ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ. ಮತ್ತೆ ಡ್ರಗ್ಸ್ ಹಾವಳಿಯದ್ದೇ ಪ್ರಮುಖ ಚರ್ಚೆ.
ಪಂಜಾಬ್ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆ. ನಂತರದ ಕಾರುಬಾರು ಪ್ರಾದೇಶಿಕ ಪಕ್ಷ ಶಿರೋಮಣಿ ಅಕಾಲಿದಳದ್ದು. ಶಿರೋಮಣಿ ಅಕಾಲಿದಳ 2007 ರಿಂದ 17ರ ವರೆಗ ಎರಡು ಬಾರಿ ಪಂಜಾಬನ್ನು ಆಳಿದೆ. ಮತ್ತೆ ಆ ರಾಜ್ಯ 2017ರಲ್ಲಿ ಕೈವಶವಾದರೂ ಬಣ ರಾಜಕಾರಣದಲ್ಲಿ ನಲುಗಿ ಕೈಬಿಟ್ಟಿತು. ಅಲ್ಲಿ 2022 ರಿಂದ ಆಮ್‌ಆದ್ಮಿ ಪಕ್ಷದ ಪಾರುಪತ್ಯ. 53 ವರ್ಷದ ಭಗವಂತ ಮಾನ್ ಮುಖ್ಯಮಂತ್ರಿ. ಆಮ್ ಆದ್ಮಿ ಅಧಿಕಾರಕ್ಕೇರುವ ಮುನ್ನ ಅಕಾಲಿದಳ ಹಾಗೂ ಕಾಂಗ್ರೆಸ್ ಮಧ್ಯೆ ಪಂಜಾಬ್ ಆಳ್ವಿಕೆ ಗಿರಕಿ ಹೊಡೆಯುತ್ತಿತ್ತು. ಅಕಾಲಿದಳದೊಂದಿಗೆ ಬಿಜೆಪಿಗೆ ಸಖ್ಯವಿತ್ತು. ಈಗಿಲ್ಲ.
ಪಂಜಾಬ್‌ನಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 117. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92, ಕಾಂಗ್ರೆಸ್ 18, ಶಿರೋಮಣಿ ಅಕಾಲಿದಳ 3, ಬಿಜೆಪಿ 2, ಬಿಎಸ್‌ಪಿ 1, ಪಕ್ಷೇತರ 1 ಸ್ಥಾನ ಪಡೆಯಿತು. ಈ ಬಾರಿ ಆಮ್ ಆದ್ಮಿ, ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ಬಿಜೆಪಿ ಮಧ್ಯೆ ಬಹುಕೋನ ಸ್ಪರ್ಧೆ ಇದೆ. ಬಿಜೆಪಿ ಇದೇ ಮೊದಲ ಬಾರಿಗೆ ಎಲ್ಲ 117 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಪಂಜಾಬ್ ರೈತರು ಮುಗಿಬಿದ್ದಾಗ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 2020ರಲ್ಲೇ ಬಿಜೆಪಿ ಜೊತೆಗಿನ ತನ್ನ 25 ವರ್ಷಗಳ ಸ್ನೇಹಕ್ಕೆ ಗುಡ್ ಬೈ ಹೇಳಿತು. ಮತ್ತೆ ಮೈತ್ರಿ ಸಾಧಿಸುವ ಸೂಚನೆ ಕಂಡು ಬರುತ್ತಿಲ್ಲ.
ಮುಂದಿನ ಅಸೆಂಬ್ಲಿ ಚುನಾವಣೆ ಆಪ್‌ಗೆ ತನ್ನ ಐದು ವರ್ಷಗಳ ಆಳ್ವಿಕೆಗೆ ಜನಮನ್ನಣೆ ಇದೆಯೇ ಎಂಬ ಸತ್ವಪರೀಕ್ಷೆ. ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನದಿಂದ ಆಡಳಿತ ಪಕ್ಷಕ್ಕೆ ಜಿಗಿಯುವ ಕಸರತ್ತು. ಅಕಾಲಿದಳಕ್ಕೆ 2022ರಲ್ಲಿ ನೆಲಕಚ್ಚಿದ ನಂತರ ಮರುಹುಟ್ಟು ಪಡೆದುಕೊಳ್ಳುವ ತವಕ. ಬಿಜೆಪಿಗೆ ನೆಲೆ ಕಂಡುಕೊಳ್ಳುವ ಪರದಾಟ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯದು ಇಲ್ಲಿ ಶೂನ್ಯ ಸಂಪಾದನೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ ಹಾಗೂ ಅಕಾಲಿದಳಕ್ಕೆ ಪರ್ಯಾಯವಾಗಿ ಆಪ್ ಈಗಾಗಲೇ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಆಪ್ ಮೂಲ ಸೌಕರ್ಯಗಳ ಅಭಿವೃದ್ಧಿ, ನೀರಾವರಿ ಕ್ಷೇತ್ರದ ಸಾಧನೆ, ಆಡಳಿತ ಸುಧಾರಣೆಯ ಟ್ರಂಪ್ ಕಾರ್ಡ್ ಬಳಸುತ್ತಿದೆ. ಪ್ರತಿಪಕ್ಷಗಳು ಡ್ರಗ್ಸ್ ಹಾವಳಿ, ನಿರುದ್ಯೋಗ, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಸ್ತಾಪಿಸುತ್ತಿದೆ. ಚುನಾವಣಾ ಕಾವು ನಿಧಾನಕ್ಕೆ ಏರುತ್ತಿದೆ.
ಆಪ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಹಾಲಿ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನೇ ಬಿಂಬಿಸಿದೆ. ಶಿರೋಮಣಿ ಅಕಾಲಿದಳದ ಮುಖ್ಯಮಂತ್ರಿ ಹುರಿಯಾಳು ಆ ಪಕ್ಷದ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಬಾದಲ್ ಅವರದು. ಗೆದ್ದ ನಂತರ ಭಗವಂತ ಮಾನ್ ಹಾಗೂ ಅವರ ಅಧಿಕಾರಿಗಳ ಭ್ರಷ್ಟಾಚಾರಗಳಿಗೆ ಹೊಣೆ ಮಾಡುತ್ತೇವೆ. ಭಗವಂತ ಮಾನ್ ಯಾವ ಕಾರಣಕ್ಕೂ ಪಂಜಾಬಿನಿಂದ ಪರಾರಿಯಾಗುವುದಕ್ಕೆ ಬಿಡೋದಿಲ್ಲ ಎಂದು ಬಾದಲ್ ಗುಡುಗಿರುವುದು ಚುನಾವಣೆಯ ಸಂಘರ್ಷದ ತೀವ್ರತೆಯನ್ನು ಬಿಂಬಿಸಿದೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಡೆದ ಮನೆ. ಶಿರೋಮಣಿ ಅಕಾಲಿದಳ ಒಡೆದು ಹೋಳಾಗಿವೆ. ಆಮ್ ಆದ್ಮಿಯ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಆಗ ಆಪ್‌ನಲ್ಲಿದ್ದ ರಾಘವ ಛಡ್ಡಾ ಹಾಗೂ ಸಂದೀಪ್ ಪಾಠಕ್ ಕಾರ್ಯತಂತ್ರ ರೂಪಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದವರು. ನಂತರ ಈ ಇಬ್ಬರನ್ನೂ ಆಪ್ ರಾಜ್ಯಸಭಾ ಸದಸ್ಯರನ್ನಾಗಿಸಿತ್ತು. ಈ ಇಬ್ಬರೂ ಈಗ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಲೋಕಸಭೆಯಲ್ಲಿ ಆಪ್‌ನ ಮೂವರು ಸದಸ್ಯರಿದ್ದಾರೆ. ಈ ಮೂವರು ಪಂಜಾಬಿನವರು ಎಂಬುದು ಗಮನಾರ್ಹ.
ಇನ್ನು ಕಾಂಗ್ರೆಸ್ ಒಳಬೇಗುದಿಯಿಂದ ನಲುಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಮ್ರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಜುಲೈ 1 ರಂದು ಹೈಕಮಾಂಡ್ ಮುಂದುವರಿಸಿ ಆದೇಶ ಹೊರಡಿಸಿದಾಗ ಒಳಜಗಳ ಸ್ಫೋಟಿಸಿತು. ಆಗ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ವಾರಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸಿದ್ದನ್ನು ಬಲವಾಗಿ ಆಕ್ಷೇಪಿಸಿದರು. ಕಾಂಗ್ರೆಸ್‌ನಲ್ಲಿ ಅನೇಕರು ದಲಿತ ಸಮುದಾಯದ ಚನ್ನಿ ಬೆಂಬಲಕ್ಕೆ ನಿಂತು ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಪಟ್ಟು ಹಿಡಿದರು. ವಾರಿಂಗ್ ಕರೆದ ಸಭೆಗೆ ಚನ್ನಿ ಭಾಗವಹಿಸಲಿಲ್ಲ. ಕಾಂಗ್ರೆಸ್ ನಡೆಸಿದ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಚನ್ನಿ ಜಲಂದರ್‌ನ ಲೋಕಸಭಾ ಸದಸ್ಯರೂ ಹೌದು.
ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸುವಂತೆ ಬೆಂಬಲಿಗರು ಒತ್ತಡ ಹೇರಿದಾ ಪರಿಸ್ಥಿತಿ ಕೈಮೀರಿತು. ಹೈಕಮಾಂಡ್ ಮಧ್ಯೆಪ್ರವೇಶಿಸಿದರೂ ಭಿನ್ನಾಭಿಪ್ರಾಯ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಎಷ್ಟರಮಟ್ಟಿಗೆ ಅಂದರೆ ಕಾಂಗ್ರೆಸ್ ‘ಹರ್ ಬೂತ್ ಕಾಂಗ್ರೆಸ್ ಮಜಬೂತ್’ ಪ್ರಚಾರವನ್ನು ಜುಲೈ 31 ರಿಂದ ಆಗಸ್ಟ್ 8 ರವರೆಗೆ ನಡೆಸಿದಾಗ ಚನ್ನಿ ಬೆಂಬಲಿಗರು ‘ಚನ್ನಿ ಲಾವೋ, ಪಂಜಾಬ್ ಬಚಾವೋ’ ಘೋಷಣೆಗಳನ್ನು ಕೂಗಿದ್ದರು. ಅನೇಕ ಸಭೆಗಳಲ್ಲಿ ಚನ್ನಿ ಮತ್ತು ವಾರಿಂಗ್ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಗಳು ನಡೆದಿದ್ದವು. ವಾರಿಂಗ್ ನೇತೃತ್ವದಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ ಅಂತ ಚನ್ನಿ ಬೆಂಬಲಿಗರು ಬಹಿರಂಗವಾಗಿಯೇ ಹೇಳತೊಡಗಿದರು. ಹೈಕಮಾಂಡ್ ಚಿಂತೆಗೀಡಾಯಿತು.
ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿ ಸಚಿನ್ ಪೈಲಟ್ ಅವರನ್ನು ಸೆಪ್ಟೆಂಬರ್‌ನಲ್ಲಿ ನೇಮಿಸಿದ ನಂತರ ಅವರು ಕೊಟ್ಟ ವರದಿ ಆಧರಿಸಿ ವಾರಿಂಗ್ ಅವರಿಂದ ರಾಜೀನಾಮೆ ಪಡೆಯಿತು. ಅಲ್ಲಿಗೆ ಪರಿಸ್ಥಿತಿ ತಹಬಂದಿಗೆ ಬಂತು. ಲೂದಿಯಾನದ ಲೋಕಸಭಾ ಸದಸ್ಯರಾಗಿರುವ ವಾರಿಂಗ್ ಏಪ್ರಿಲ್ 2022 ರಿಂದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈಗ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಪರ್ಗತ್ ಸಿಂಗ್ ಅವರನ್ನು ನೇಮಿಸಲಾಗಿದೆ. 61 ವರ್ಷದ ಪರ್ಗತ್ ಸಿಂಗ್ ಒಲಿಂಪಿಕ್ ಹಾಕಿ ತಂಡದ ಮಾಜಿ ನಾಯಕರು.
ಕಾಂಗ್ರೆಸ್ 2022ರ ಅಸೆಂಬ್ಲಿ ಚುನಾವಣೆಗೆ ಮುನ್ನವೂ ಬಣ ರಾಜಕಾರಣದಿಂದ ತತ್ತರಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿದ್ದು ಅವರ ಮಧ್ಯೆ ಸಂಘರ್ಷ ನಡೆದು 2022ರ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಮುನ್ನ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಪದಚ್ಯುತಗೊಳಿಸಿತು. ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತು. ಚನ್ನಿ ಅವರು 2022ರ ಅಸೆಂಬ್ಲಿ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡರು. 2017ರಲ್ಲಿ 77 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ 2022ರಲ್ಲಿ 18 ಸ್ಥಾನಕ್ಕೆ ಕುಸಿಯಿತು. ಸ್ವಯಂಕೃತ ಅಪರಾಧಗಳಿಂದ ನೆಲಕಚ್ಚಿತ್ತು.
ಅಮರೀಂದರ್ ಸಿಂಗ್ ಸುಮಾರು ಹತ್ತು ವರ್ಷಗಳ ಕಾಲ ಪಂಜಾಬಿನ ಮುಖ್ಯಮಂತ್ರಿಯಾಗಿದ್ದವರು. ಹನ್ನೆರಡು ವರ್ಷಗಳ ಕಾಲ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ವವರು. ಕಾಂಗ್ರೆಸ್‌ನಿಂದ ಹೊರಬಿದ್ದ ನಂತರ 2021ರಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು. ಆ ಪಕ್ಷವನ್ನು ಸೆಪ್ಟೆಂಬರ್ 2022ರಲ್ಲಿ ಬಿಜೆಪಿಯಲ್ಲಿ ವಿಲೀನಗೊಳಿಸಿದರು. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು. ಈಗ ಅವರಿಗೆ ಅಲ್ಲಿಯೂ ಬೇಸರ.
ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿ ಇದೇ ವರ್ಷ ಮೇನಲ್ಲಿ ಕೇವಲ್ ಸಿಂಗ್ ಧಿಲ್ಲೋನ್ ನೇಮಕಗೊಂಡ ನಂತರ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಧಿಲ್ಲೋನ್ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದೇ 2022ರಲ್ಲಿ. ಪಂಜಾಬ್‌ನಲ್ಲಿ ಜಾಟ್-ಸಿಖ್ ಪ್ರಾಬಲ್ಯದ ರಾಜಕಾರಣ. ಧಿಲ್ಲೋನ್ ಜಾಟ್ ಸಿಖ್ ಸಮುದಾಯದವರು. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 69 ಕ್ಷೇತ್ರಗಳು ಮಾಳ್ವ ಪ್ರಾಂತ್ಯದಲ್ಲಿದೆ. ಈ ಪ್ರಾಂತ್ಯಕ್ಕೆ ಸೇರಿದವರು ಧಿಲ್ಲೋನ್. ಇವರು ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದವರು. ಜಾಟ್-ಸಿಖ್ ಹಾಗೂ ಮಾಳ್ವ ಪ್ರಾಂತ್ಯದ ಲೆಕ್ಕಾಚಾರ ಧಿಲ್ಲೋನ್ ನೇಮಕದ ಹಿಂದಿದೆ. ಆದರೆ, ಈ ಲೆಕ್ಕಾಚಾರವನ್ನು ಅಮರೀಂದರ್ ಸಿಂಗ್ ಒಪ್ಪುವುದಿಲ್ಲ.
ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿ ಕೇವಲ್ ಸಿಂಗ್ ಧಿಲ್ಲೋನ್ ನೇಮಕವನ್ನು ಅಮರೀಂದರ್ ಸಿಂಗ್ ಆಕ್ಷೇಪಿಸಿದ್ದಾರೆ. ತಮ್ಮ 60 ವರ್ಷಗಳ ಪಂಜಾಬ್ ರಾಜಕಾರಣದ ಅನುಭವದಲ್ಲಿ ಪಕ್ಷಕ್ಕೆ ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ, ಪಕ್ಷ ಅದನ್ನು ಸ್ವೀಕರಿಸಿಲ್ಲ ಎಂದು ಬೇಸತ್ತಿದ್ದಾರೆ. ಕೇವಲ್‌ಸಿಂಗ್ ಧಿಲ್ಲೋನ್ ಲೋಕಸಭಾ ಚುನಾವಣೆಯಲ್ಲಿ ಸೋತವರು. ಧಿಲ್ಲೋನ್ ಜಾಟ್- ಸಿಖ್ ಸಮುದಾಯದವರಾದರೆ ಏನಂತೆ? ನಾನೂ ಜಾಟ್ ಸಿಖ್. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಬೇಡವೇ? ಜಾತಿ ರಾಜಕಾರಣಕ್ಕೆ ಅಂತ್ಯ ಹಾಡಬೇಡವೇ ಎಂಬುದು ಅಮರೀಂದರ್ ಸಿಂಗ್ ಅವರ ಪ್ರಶ್ನೆ. ಅಮರೀಂದರ್ ಸಿಂಗ್ ರಾಜಕಾರಣಕ್ಕೂ ಮುನ್ನ ಸೇನೆಯಲ್ಲಿದ್ದವರು. ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಪಾಲ್ಗೊಂಡವರು. ಬಿಜೆಪಿ ನಾಯಕ ಸುನೀಲ್ ಜಾಖಡ್ ಅವರು ಕ್ಯಾ.ಅಮರೀಂದರ್ ಸಿಂಗ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಬಿಜೆಪಿಯ ಈ ಬೆಳವಣಿಗೆ ಕ್ಯಾ. ಅಮರೀಂದರ್ ಸಿಂಗ್ ಕಾಂಗ್ರೆಸ್ಸಿಗೆ ವಾಪಸ್ ಆಗಲಿದ್ದಾರೆಯೇ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ರಾಹುಲ್ ಗಾಂಧಿ ಹಾಗೂ ಸಚಿನ್ ಪೈಲಟ್ ಅವರು ಅಮರೀಂದರ್ ಸಿಂಗ್ ಅವರ ಕುರಿತು ಸದಾಭಿಪ್ರಾಯ ವ್ಯಕ್ತಪಡಿಸಿರುವುದು ಇದಕ್ಕೆ ಇಂಬು ನೀಡಿದೆ. ಆಪರೇಷನ್ ಬ್ಲೂ ಸ್ಟಾರ್ ನಂತರ ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆದು ಅಕಾಲಿದಳ ಸೇರಿದ್ದವರು. ನಂತರ ಕಾಂಗ್ರೆಸ್‌ಗೆ ವಾಪಸಾಗಿದ್ದರು. 84 ವರ್ಷದ ಅಮರೀಂದರ್ ಸಿಂಗ್ ಬಿಜೆಪಿ ತೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ಪಂಜಾಬ್ ನಲ್ಲಿ ಚುನಾವಣೆ ಕಾವು ಪಡೆಯುತ್ತಿದೆ. ಆಮ್ ಆದ್ಮಿಗೆ ಪರ್ಯಾಯ ಯಾರು? ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿಗೆ ಇದೇ ಬಹುದೊಡ್ಡ ಸವಾಲು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com