ಅಹಿಂದ ಸಂಘಟನೆ ಮೇಲೆ ಒಡಕಿನ ಛಾಯೆ (ನೇರ ನೋಟ)

ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ಈ ಹಿಂದೆ ಅಷ್ಟಾಗಿ ಕಾಣಿಸಿಕೊಳ್ಳದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾವೇಶ ಉದ್ಘಾಟಿಸಿದರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಚಿವರು ವೇದಿಕೆ ಮೇಲೆ ಕಾಣಿಸಿಕೊಂಡರು.
HC Mahadevappa, Siddaramaiah and Satish Jarkiholi
ಎಚ್.ಸಿ.ಮಹದೇವಪ್ಪ, ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ
Updated on

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಹಸ್ತಾಂತರ ಹಾಗೂ ನಂತರದ ವಿದ್ಯಮಾನಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಆಪ್ತರಿಂದ ದೂರ ಮಾಡಿರುವುದಷ್ಟೇ ಅಲ್ಲ; ಅಹಿಂದ ಸಂಘಟನೆಯಲ್ಲಿ ಒಡಕನ್ನು ಮೂಡಿಸಿದೆ. ಬೆಂಗಳೂರಿನಲ್ಲಿ ಮೊನ್ನೆ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ ಸಮಾರಂಭದ ಸಂದರ್ಭದಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿತು.

ಅಹಿಂದ ಸಂಘಟನೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ದಶಕಗಳ ಕಾಲ ದುಡಿದ ಸಚಿವ ಸತೀಶ್‌ ಜಾರಕಿಹೊಳಿ, ಮಾಜಿ ಸಚಿವ, ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಈ ಸಮಾವೇಶಕ್ಕೆ ಆಹ್ವಾನವೇ ಇರಲಿಲ್ಲ. ಇತ್ತೀಚಿನವರೆಗೂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಸಚಿವ ಜಮೀರ್ ಅಹಮದ್ ಖಾನ್‌ ಅವರನ್ನೂ ಕರೆದಿರಲಿಲ್ಲ. ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ಈ ಹಿಂದೆ ಅಷ್ಟಾಗಿ ಕಾಣಿಸಿಕೊಳ್ಳದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾವೇಶ ಉದ್ಘಾಟಿಸಿದರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಚಿವರು ವೇದಿಕೆ ಮೇಲೆ ಕಾಣಿಸಿಕೊಂಡರು. ಹೀಗೆ ವೇದಿಕೆ ಮೇಲಿದ್ದ ಬಹುತೇಕ ಸಚಿವರು ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಯಾಗಿ ಅಹಿಂದ ಸಂಘಟನೆಗೆ ಇಳಿದಾಗ ಅವರೊಂದಿಗೆ ಇರಲೇ ಇಲ್ಲ.

ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಹಿಂದುಳಿದ ವರ್ಗದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಆಹ್ವಾನವಿದ್ದರೂ ಭಾಗವಹಿಸಲಿಲ್ಲ. ಪಕ್ಷವೊಂದರ ಅಧ್ಯಕ್ಷರಾಗಿ ಸಮಾವೇಶದಿಂದ ಅವರು ರಾಜಕೀಯವಾಗಿ ಅಂತರ ಕಾಪಾಡಿಕೊಂಡಿರಬಹುದು. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಜಾರಿ ಕುರಿತು ಪರ-ವಿರೋಧದ ಚರ್ಚೆ ತಾರಕ್ಕೇರಿತ್ತು. ಆಗ ಇದೇ ಹರಿಪ್ರಸಾದ್, ಸರಕಾರಕ್ಕೆ ಸಂಕಷ್ಟ ಬಂದರೂ ಪರವಾಗಿಲ್ಲ. ಜಾತಿ ಸಮೀಕ್ಷಾ ವರದಿ ಜಾರಿಗೊಳಿಸಿ ಎಂದಿದ್ದರು.

ಸಿದ್ದರಾಮಯ್ಯ ಹಾಗೂ ಸತೀಶ್‌ ಜಾರಕಿಹೊಳಿ ನಡುವಿನ ಮನಸ್ತಾಪ, ಡಾ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಅಹಿಂದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಡಾ.ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಿದ್ದಾರೆ. ಅಧಿಕಾರ ಹಸ್ತಾಂತರ ವೇಳೆ ಸತೀಶ್‌ ಜಾರಕಿಹೊಳಿ ತಮಗೆ ಕೈಕೊಟ್ಟರು ಎಂಬುದು ಸಿದ್ದರಾಮಯ್ಯ ಅವರಿಗೆ ಬೇಸರ. ಸಚಿವ ಸ್ಥಾನ ಕೈತಪ್ಪಿದ ನಂತರ ಡಾ.ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಪರಸ್ಪರ ಭೇಟಿಯೇ ಆಗಿಲ್ಲ. ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಇಬ್ಬರೂ ಭಾಗವಹಿಸಿದ್ದರೂ ಪರಸ್ಪರ ಮಾತಾಡಿಲ್ಲ. ಈ ಇಬ್ಬರು ನಾಯಕರು ದಶಕಗಳ ಕಾಲ ಒಡನಾಡಿಗಳು. ಆದರೆ, ಇವತ್ತು ಪರಸ್ಪರ ದೂರ ಸರಿದಿದ್ದಾರೆ. ಈ ಎಲ್ಲವೂ ಅಹಿಂದ ಸಂಘಟನೆಗೆ ಹಿನ್ನಡೆಯೇ.

ಬೆಂಗಳೂರಿನಲ್ಲಿ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದ ಬೆನ್ನಲ್ಲೇ ಡಾ.ಮಹದೇವಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಕೂಡ ಗಮನ ಸೆಳೆದಿದೆ. ಹುಬ್ಬಳ್ಳಿಯಲ್ಲಿ 2005 ರಲ್ಲಿ ಜರುಗಿದ ಅಹಿಂದ ಸಮಾವೇಶವನ್ನು ಸುಮಾರು 15 ದಿನಗಳ ಮುಂಚೆ ಅಲ್ಲಿದ್ದು ಇದರ ರೂಪುರೇಷೆಗಳನ್ನು ರೂಪಿಸುವ ಕೆಲಸ ಮಾಡಿದ್ದೇನೆ. ಆ ಸಮಾವೇಶದ ಬೌದ್ಧಿಕ ಮತ್ತು ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದೆ. ಜನ ಸಂಘಟನೆ ವಿಷಯದಲ್ಲಿ ಒಂದಷ್ಟು ಅನುಭವ ಇದೆ ಎಂದು ಹೆಮ್ಮೆಯಿಂದ ಹೇಳುವೆ ಎಂದು ಡಾ.ಮಹದೇವಪ್ಪ ಹೇಳಿರುವುದು ಹಲವು ವ್ಯಾಖ್ಯಾನಗಳಿಗೆ ದಾರಿ ಮಾಡಿದೆ.

ಅತ್ತ ಸತೀಶ್ ಜಾರಕಿಹೊಳಿ ಅವರು ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಹೀಗಾಗಿ, ಹೋಗಿಲ್ಲ. ಕರೆಯದಿದ್ದರೆ ಹೇಗೆ ಹೋಗೋದು? ಆಯೋಜಕರು ಕರೆದಿದ್ದರೆ ಹೋಗುತ್ತಿದ್ದೆ ಅಂದಿದ್ದಾರೆ. ಸತೀಶ್‌ ಜಾರಕಿಹೊಳಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಅಹಿಂದ ಯಾರೊಬ್ಬರ ಆಸ್ತಿಯಲ್ಲ. ಯಾರೂ ಬೇಕಾದರೂ ಕ್ಲೈಮ್‌ ಮಾಡಬಹುದು ಎಂದು ಹೇಳಿರುವುದು ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಅಹಿಂದ ಸಂಘಟನೆಗೆ ಸಡ್ಡು ಹೊಡೆದಿರುವುದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರದ ಸಂಘರ್ಷದ ವೇಳೆ ಇದೇ ಸತೀಶ್‌ ಜಾರಕಿಹೊಳಿ ಅವರನ್ನು ಅಹಿಂದ ಹೋರಾಟದಲ್ಲಿ ತಮ್ಮ ತಂದೆಯ ನಂತರದ ಉತ್ತರಾಧಿಕಾರಿ ಎಂದಿದ್ದರು. ಆದರೆ, ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ತಿರುಗುಮುರುಗು.

HC Mahadevappa, Siddaramaiah and Satish Jarkiholi
ದೋಸ್ತಿಗಳ ಪಾದಯಾತ್ರೆ ಪಾಲಿಟಿಕ್ಸ್‌ (ನೇರ ನೋಟ)

ಸಿದ್ದರಾಮಯ್ಯ ಅವರು ರಾಜಕೀಯವಾಗಿ ಸಂಕಷ್ಟದಲ್ಲಿದ್ದಾಗ ಅವರ ಬೆನ್ನಿಗೆ ನಿಂತಿದ್ದು ಅಹಿಂದ ವರ್ಗಗಳು. ಜನತಾ ಪರಿವಾರದಲ್ಲಿದ್ದಾಗ ಅವರು ಅಷ್ಟಾಗಿ ಅಹಿಂದ ಚಳವಳಿ ಬಗ್ಗೆ ಮಾತಾಡಿದವರಲ್ಲ. ಆದರೆ, ಸಾಮಾಜಿಕ ನ್ಯಾಯದ ಪರ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಧ್ವನಿ ಎತ್ತುತ್ತಾ ಬಂದವರು. ಯಾವಾಗ ಎರಡು ಪಕ್ಷಗಳು (ಕಾಂಗ್ರೆಸ್‌-ಜಾತ್ಯತೀತ ಜನತಾದಳ) ಸೇರಿ 2004ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರಕಾರ ರಚಿಸಿತೋ ಆಗಿನಿಂದಲೇ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ನಲ್ಲಿ ಉಸಿರು ಕಟ್ಟುವ ವಾತಾವರಣ ಶುರುವಾಯಿತು. ತಮಗೆ ಸಿಗಬೇಕಿದ್ದ ಮುಖ್ಯಮಂತ್ರಿ ಗಾದಿಯನ್ನು ದೇವೇಗೌಡರು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟರು ಎಂಬುದು ಸಿದ್ದರಾಮಯ್ಯ ಅವರ ತಕರಾರಾಗಿತ್ತು. ಆಗಿನಿಂದಲೇ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಹೆಚ್ಚು ಗಮನ ಹರಿಸಿದರು. ಅಹಿಂದ ಅಸ್ತ್ರ ಝಳಪಿಸುತ್ತಾ ಬಂದರು. ಅದು ಅವರನ್ನು ಮುಖ್ಯಮಂತ್ರಿ ಗಾದಿವರೆಗೂ ತಂದು ನಿಲ್ಲಿಸಿದ್ದು ಈಗ ಇತಿಹಾಸ.

ಸಿದ್ದರಾಮಯ್ಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಮೊದಲ ಅಹಿಂದ ಸಮಾವೇಶ ಹಾಗೂ ನಂತರದ ಹಾಸನದ ಸಮಾವೇಶಗಳಲ್ಲಿ ಅಹಿಂದರನ್ನು ಕೆಣಕುವುದು ಜೇನು ಹುಟ್ಟಿಗೆ ಕೈಹಾಕಿದಂತೆ ಎಂಬ ಘೋಷಣೆಗಳು ಮೊಳಗಿದ್ದವು. ಅಹಿಂದ ಸಂಘಟನೆ ಆಗ ಶಕ್ತಿಯುತವಾಗಿ ಬೆಳೆಯಿತು. ಆದರೆ, ಅದು ಒಂದು ಚಳವಳಿಯಾಗಿ ಯಾವತ್ತೂ ರೂಪುಗೊಳ್ಳಲಿಲ್ಲ ಎಂಬುದೂ ಅಷ್ಟೇ ವಾಸ್ತವ. ಅಹಿಂದ ಹೆಸರಲ್ಲಿ ನಾಯಕರು ಬೆಳೆದರು. ಸಿದ್ದರಾಮಯ್ಯ ಅಹಿಂದ ನಾಯಕತ್ವವನ್ನು ವಹಿಸುವ ಮುನ್ನವೂ ಅಹಿಂದ ಸಂಘಟನೆ ಅಸ್ತಿತ್ವದಲ್ಲಿತ್ತು. ಆದರೆ, ಸಿದ್ದರಾಮಯ್ಯ ಅವರ ನಾಯಕತ್ವ ಕೊಟ್ಟ ಮೇಲೆ ಅಹಿಂದ ಶಕ್ತಿಯುತವಾಯಿತು. ಅವತ್ತು ಅಹಿಂದ ಸಂಘಟನೆಯ ಆಶಯಗಳಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಕಾಣುವುದು ಒಂದಾಗಿತ್ತು.

ಸಿದ್ದರಾಮಯ್ಯ ಅವರು 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ನಂತರ ಅಹಿಂದ ಸಂಘಟನೆಯ ಪ್ರಮುಖ ಆಶೋತ್ತರವೊಂದು ಈಡೇರಿತ್ತು. ಅಲ್ಲಿಗೆ ಸಂಘಟನೆಯ ಭಾವನಾತ್ಮಕ ಬೇಡಿಕೆಯೊಂದು ಈಡೇರಿದ್ದರಿಂದ ಅನೇಕರಿಗೆ ಗುರಿ ತಲುಪಿದ ಸಮಾಧಾನ ಸಿಕ್ಕಿತ್ತು. ಸಂಘಟನೆ ಅಷ್ಟರಮಟ್ಟಿಗೆ ದುರ್ಬಲವೂ ಆಯಿತು. ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅಹಿಂದ ಸಂಘಟನೆಯನ್ನು ಶಕ್ತಿಯುತವಾಗಿ ಬೆಳೆಸಲು ಗಮನ ಹರಿಸಲಿಲ್ಲ ಎಂಬುದು ಅವರ ಬಗ್ಗೆ ಕೆಲವರ ತಕರಾರು. ಆದರೆ, ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಅಹಿಂದ ವರ್ಗಗಳಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟವರು. ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅವಧಿಯಲ್ಲಿ ತಮ್ಮ ಸರಕಾರ ಅಹಿಂದ ಸರಕಾರ ಎಂದು ಘಂಟಾಘೋಷವಾಗಿ ಸಾರಿದವರು. ಆಗ ಕಾಂಗ್ರೆಸ್‌ನಲ್ಲೇ ಇದಕ್ಕೆ ಅಪಸ್ವರವೂ ಎದ್ದಿತ್ತು. ಆದರೂ, ಸಿದ್ದರಾಮಯ್ಯ ತಮ್ಮ ಮಾತಿನಿಂದ ಹಿಂದೆ ಸರಿದಿರಲಿಲ್ಲ. ಅಂತಹ ಒಂದು ಸಂದರ್ಭದಲ್ಲೇ ಆಗ ಕಾಂಗ್ರೆಸ್‌ನಲ್ಲಿದ್ದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ‘ಅಹಂ ಬ್ರಹ್ಮಾಸ್ಮಿ’ ಎಂದು ವ್ಯಂಗ್ಯವಾಡಿದ್ದರು.

HC Mahadevappa, Siddaramaiah and Satish Jarkiholi
ಸಿದ್ದರಾಮಯ್ಯರ ಮುಂದಿನ ಹಾದಿ ಏನು…. (ನೇರ ನೋಟ)

ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಜಾರಿಗೆ ಅವಕಾಶ ದೊರೆತಿತ್ತು. ಆದರೆ, ಅವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್‌ನಲ್ಲೇ ಒಂದು ವರ್ಗದಿಂದ ಪ್ರಬಲ ವಿರೋಧವೂ ವ್ಯಕ್ತವಾಯಿತು. ಸಚಿವ ಸಂಪುಟದಲ್ಲೂ ಭಿನ್ನಾಭಿಪ್ರಾಯ ತಲೆದೋರಿತು. ಆಗ ಹೈಕಮಾಂಡ್‌ ಮಧ್ಯೆಪ್ರವೇಶಿಸಿತು. ವರದಿ ಜಾರಿಯನ್ನು ತಡೆಯಿತು. ಕಾಂತರಾಜ ಆಯೋಗದ ವರದಿಯ ದತ್ತಾಂಶಗಳು ಹತ್ತು ವರ್ಷ ಹಳೆಯವು. ಹೀಗಾಗಿ, ಮತ್ತೊಂದು ಸಮೀಕ್ಷೆ ಎಂದರು ಸಿದ್ದರಾಮಯ್ಯ. ತಳಸಮುದಾಯದವರು, ಹಿಂದುಳಿದ ವರ್ಗದವರು ಬೇಸತ್ತರು. ಇದು ಸಿದ್ದರಾಮಯ್ಯ ಅವರ ವರ್ಚಸ್ಸಿಗೂ ಧಕ್ಕೆ ತಂದಿತು.

ಸಿದ್ದರಾಮಯ್ಯ ಅವರು ಈಗ ಜಾತಿ ಗಣತಿ ವರದಿ ಜಾರಿಗೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಶಿವಕುಮಾರ್ ಸರಕಾರದ ನೂರು ದಿನಗಳ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಕಾರ್ಮಿಕರು, ಬಡವರು, ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು. ಇದನ್ನು ಶಿವಕುಮಾರ್ ಸರಕಾರ ಮಾಡುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಮಧುಸೂದನ ನಾಯಕ್ ನೇತೃತ್ವದ ಜಾತಿ ಗಣತಿ ವರದಿ ಈಗ ಸಿದ್ದರಾಮಯ್ಯ ಅವರ ಕೈಯಲ್ಲಿರುವ ಅಸ್ತ್ರ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com