

ಅವತ್ತು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಒಗ್ಗಟ್ಟು ಪ್ರದರ್ಶಿಸಿತ್ತು. ಕಾಂಗ್ರೆಸ್‌ನಲ್ಲಿ ಹೊಸ ಚೈತನ್ಯ ಮೂಡಿಸಿತ್ತು. ಕಾರ್ಯಕರ್ತರಲ್ಲಿ ನವೋಲ್ಲಾಸ ತಂದಿತ್ತು. ಅದಕ್ಕಿಂತಲೂ ಮುಖ್ಯವಾಗಿ ಜನಾಭಿಪ್ರಾಯ ಕಾಂಗ್ರೆಸ್ ಪರ ರೂಪಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಿತು. ಆದರೆ, ಇವತ್ತು ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸಿರುವ ಲಿಂಗಸುಗೂರಿನಿಂದ ಬಳ್ಳಾರಿವರೆಗಿನ ಪಾದಯಾತ್ರೆ ಬಿಜೆಪಿಗೆ ಶಕ್ತಿ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಜೆಪಿ -ಜೆಡಿಎಸ್ ದೋಸ್ತಿ ನಾಯಕರ ನಡುವಿನ ಬಿರುಕನ್ನು ಮತ್ತಷ್ಟು ಆಳವಾಗಿಸಿದೆ. ಬಿಜೆಪಿಯೊಳಗೆ ವಿಜಯೇಂದ್ರ ವಿರುದ್ಧದ ಅಸಮಾಧಾನವನ್ನು ಹೆಚ್ಚಿಸಿದೆ.
ಕಾಂಗ್ರೆಸ್-ಜೆಡಿಎಸ್ 2018 ರಲ್ಲಿ ಮೈತ್ರಿಯಾಗಿ ಸರಕಾರ ರಚಿಸಿದಾಗ ಉಭಯ ಪಕ್ಷಗಳ ರಾಜ್ಯ ಮಟ್ಟದ ನಾಯಕರು ಒಂದಾಗಿರಲಿಲ್ಲ, ತಳಮಟ್ಟದಲ್ಲಿ ಕಾರ್ಯಕರ್ತರ ಮಧ್ಯೆ ಸಂಘರ್ಷವೂ ನಿಲ್ಲಲಿಲ್ಲ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಹಾಗಲ್ಲ. ಈ ಎರಡೂ ಪಕ್ಷಗಳ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆಯ ಸಮಸ್ಯೆ ಇಲ್ಲ. ಈ ಉಭಯ ಪಕ್ಷಗಳು 2006 ಹಾಗೂ 2024ರಲ್ಲಿ ದೋಸ್ತಿಯಾದಾಗ ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಕಂಡು ಬಂದಿದೆ. ಆದರೆ, ಸಮಸ್ಯೆ ಇರುವುದೇ ರಾಜ್ಯ ಮಟ್ಟದ ನಾಯಕರಲ್ಲಿ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಮೇಲಾಟ. ಮುಖ್ಯಮಂತ್ರಿ ಗಾದಿಗಾಗಿ ನಾಯಕರ ನಡುವಿನ ಪೈಪೋಟಿ. ಪ್ರತಿಷ್ಠೆ. ಪರಸ್ಪರ ದೊಡ್ಡಣ್ಣನ ವರ್ತನೆ. ಬಿಜೆಪಿ-ಜೆಡಿಎಸ್ ದೋಸ್ತಿಯಾಗಿ ಎರಡು ವರ್ಷಗಳಾಗಿದ್ದರೂ ಉಭಯ ಪಕ್ಷಗಳ ನಾಯಕರ ಮಧ್ಯೆ ಸಮನ್ವಯ ಇನ್ನೂ ಪರಿಪೂರ್ಣವಾಗಿ ಸಾಧ್ಯವಾಗಿಲ್ಲ. ಈಗ ನಡೆದಿರುವ ಲಿಂಗಸುಗೂರಿನಿಂದ ಬಳ್ಳಾರಿವರೆಗಿನ ಪಾದಯಾತ್ರೆ ಇದಕ್ಕೊಂದು ಉದಾಹರಣೆ.
ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಹಗರಣದ ಆರೋಪಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ವಿಧಾನಮಂಡಲದಲ್ಲಿ ಕಲಾಪ ನಡೆಸಲು ಬಿಡಲಿಲ್ಲ. ಅಧಿವೇಶನ ಮುಗಿದ ನಂತರ ನಾಗೇಂದ್ರ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದಾರೆ. ಒಂದೇ ಆರೋಪಕ್ಕೆ ಎರಡು ಬಾರಿ ರಾಜೀನಾಮೆ ನೀಡಿರುವ ಅಪರೂಪದ ವಿದ್ಯಮಾನ ಇದು. ಬಿಜೆಪಿ ಪಾದಯಾತ್ರೆ ಘೋಷಿಸಿದಾಗ ನಾಗೇಂದ್ರ ರಾಜೀನಾಮೆ ನೀಡಿರಲಿಲ್ಲ. ಪಾದಯಾತ್ರೆ ಆರಂಭಿಸುವ ಹೊತ್ತಿಗೆ ನಾಗೇಂದ್ರ ಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹೀಗಿರುವಾಗ ಈಗೇಕೆ ಪಾದಯಾತ್ರೆ? ಉದ್ದೇಶವೇ ಇಲ್ಲದ ಪಾದಯಾತ್ರೆಯನ್ನು ಏಕೆ ನಡೆಸಬೇಕು ಎಂಬುದು ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ. ಬಿಜೆಪಿಯಲ್ಲಿಯೂ ವಿಜಯೇಂದ್ರ ವಿರೋಧಿಗಳ ಪ್ರಶ್ನೆಯೂ ಇದೇ ಆಗಿದೆ. ಆದರೆ, ಬಹಿರಂಗವಾಗಿ ಹೇಳಲು ಅವರು ತಯಾರಿಲ್ಲ. ಆದರೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಪಾದಯಾತ್ರೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಪಕ್ಷದಲ್ಲಿ ನಾಯಕರ ನಡುವಿನ ಶೀತಲ ಸಮರಕ್ಕೆ ಸಾಕ್ಷಿ.
ನಾಗೇಂದ್ರ ರಾಜೀನಾಮೆಯೊಂದೇ ನಮ್ಮ ಬೇಡಿಕೆಯಾಗಿರಲಿಲ್ಲ. ರಾಜ್ಯ ಸರಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಬರ ನಿರ್ವಹಣೆಯಲ್ಲಿನ ಲೋಪ, ಕೆಪಿಎಸ್‌ಸಿ ಹಗರಣ ಪ್ರತಿಭಟಿಸಿ ಪಾದಯಾತ್ರೆ ನಡೆದಿದೆ. ರಾಜ್ಯ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಎಂಬುದು ವಿಜಯೇಂದ್ರ ಬಣದ ಪ್ರತಿಪಾದನೆ. ಪಾದಯಾತ್ರೆ ಉತ್ಸಾಹದಿಂದ ಮುನ್ನಡೆದಿದೆ. ಆದರೆ, ಉದ್ಘಾಟನೆಯ ದಿನ ಭಾಗವಹಿಸಿದ್ದ ಅನೇಕ ಹಿರಿಯ ನಾಯಕರು ನಂತರ ಪಾದಯಾತ್ರೆ ಕಡೆ ಸುಳಿದಿಲ್ಲ. ಮಾಜಿ ಸಚಿವ, ಬಳ್ಳಾರಿ ಭಾಗದ ಬಿ.ಶ್ರೀರಾಮುಲು ಅವರು ವಿಜಯೇಂದ್ರ ಅವರೊಂದಿಗೆ ಹೆಜ್ಜೆ ಹಾಕಿರುವುದು ಬಿಟ್ಟರೆ ಉಳಿದ ಹಿರಿಯ ನಾಯಕರ ಗೈರು ಹಾಜರಿ ಎದ್ದು ಕಂಡಿದೆ. ಈ ಪಾದಯಾತ್ರೆ ಮೂಲಕ ಪಕ್ಷದಲ್ಲಿ ವಿಜಯೇಂದ್ರ ನಾಯಕತ್ವ ಗಟ್ಟಿಯಾಗಬಹುದು ಎಂಬ ಆತಂಕ ಪಕ್ಷದಲ್ಲೇ ಕಲವು ನಾಯಕರಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಈಗ ಒಡಕಲು ಬಿಂಬ.
ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಪಕ್ಷದಲ್ಲಿ ಮೊದಲಿನಿಂದಲೂ ನಡೆಯುತ್ತಿದೆ. ವಿಜಯೇಂದ್ರ ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ನಡೆಸಿರುವ ಪಾದಯಾತ್ರೆ ಇದು ಎಂಬುದು ವಿಜಯೇಂದ್ರ ವಿರೋಧಿಗಳ ತಕರಾರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರ ಕಾರ್ಯಶೈಲಿ ಅನೇಕ ಹಿರಿಯ ನಾಯಕರಿಗೆ ಬೇಸರ ತಂದಿದೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ವಿಜಯೇಂದ್ರ ಪ್ರಾರಂಭದಿಂದಲೂ ಮಾಡಲಿಲ್ಲ. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಕೆಲವು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನದ ನಂತರದ ಬೆಳವಣಿಗೆಯನ್ನೇ ನೋಡಿ. ವಿಜಯೇಂದ್ರ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿಯೇ ಅಣೆ, ಪ್ರಮಾಣ ನಡೆಯಲಿ ಅಂದರು. ಬಿಜೆಪಿಯಲ್ಲೇ ಇದು ವ್ಯಾಪಕ ವಿರೋಧಕ್ಕೆ ಕಾರಣವಾಯಿತು. ಬಿಜೆಪಿಯ ಬಣ ರಾಜಕಾರಣದ ಸಂಘರ್ಷದ ತೀವ್ರತೆಯನ್ನು ಇದು ಬಿಂಬಿಸಿತು. ನಂತರ ಆಣೆಪ್ರಮಾಣವನ್ನು ಕೈಬಿಡಲಾಯಿತು.
ವಿಜಯೇಂದ್ರ ಅವರ ಪಾದಯಾತ್ರೆಯಿಂದ ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಅವರು ಸೆಪ್ಟೆಂಬರ್ 2 ರಂದು ವಿದೇಶಕ್ಕೆ ತೆರಳಿದ್ದು ವಾಪಸಾಗುವುದು 12 ರಂದು. ಬಿಜೆಪಿ ನಾಯಕರು ತಮ್ಮ ಜೊತೆ ಈ ಪಾದಯಾತ್ರೆ ಕುರಿತು ಚರ್ಚಿಸಿಲ್ಲ. ಜೆಡಿಎಸ್‌ನ ಸ್ಥಳೀಯ ಕಾರ್ಯಕರ್ತರು, ನಾಯಕರು ಪಾಲ್ಗೊಳ್ಳುವರು ಎಂಬುದು ಕುಮಾರಸ್ವಾಮಿ ಹೇಳಿಕೆ. ಅಲ್ಲಿಗೆ ರಾಜ್ಯ ಸರಕಾರದ ವಿರುದ್ಧದ ಹೋರಾಟದಲ್ಲಿ ದೋಸ್ತಿ ಪಕ್ಷಗಳಲ್ಲಿ ಸಮನ್ವಯ ಇಲ್ಲದಿರುವುದು ಸ್ಪಷ್ಟ.
ಪಾದಯಾತ್ರೆಗಳ ಬಗ್ಗೆ ದೋಸ್ತಿಗಳಲ್ಲೇ ಭಿನ್ನ ರಾಗ ಇರುವುದು ಹೊಸದಲ್ಲ. ಈ ಹಿಂದೆ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ-ಜೆಡಿಎಸ್ ನಡುವೆ ಪಾದಯಾತ್ರೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಮೊದಲು ಘೋಷಿಸಿತು. ನಂತರ ಜೆಡಿಎಸ್ ಭೈರಮಂಗಲದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸುವುದಾಗಿ ದಿನಾಂಕವನ್ನೂ ಪ್ರಕಟಿಸಿ ದೋಸ್ತಿಗೆ ಸಡ್ಡು ಹೊಡೆಯಿತು. ಎನ್‌ಡಿಎ ಮೈತ್ರಿಕೂಟದ ಈ ಉಭಯ ಪಕ್ಷಗಳು ಚರ್ಚಿಸದೇ ಪ್ರತ್ಯೇಕವಾಗಿ ನಿರ್ಧಾರ ಪ್ರಕಟಿಸಿ ಗೊಂದಲ ಸೃಷ್ಟಿಸಿತು. ಕೊನೆಗೆ ಜೆಡಿಎಸ್ ನಡೆಸಿದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡರು. ಆದರೆ, ವಿಜಯೇಂದ್ರ ಈ ಪಾದಯಾತ್ರೆಯಿಂದ ದೂರ ಉಳಿದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರು ಭಾಗವಹಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲೇ ಕೇಳಿ ಬಂದಿತ್ತು.
ಇದಕ್ಕೂ ಮುನ್ನ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣ ಸಂಬಂಧ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಿತು. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಆಗ ಈ ಪಾದಯಾತ್ರೆ ಕುರಿತು ಭಿನ್ನಾಭಿಪ್ರಾಯ ಮೂಡಿತ್ತು. ನಂತರ ಸಮನ್ವಯದ ಪಾದಯಾತ್ರೆ ನಡೆದಿದ್ದು ಈಗ ಇತಿಹಾಸ.
ಬಿಜೆಪಿ ಹಿರಿಯ ನಾಯಕರಲ್ಲಿ ಮತ್ತೊಂದು ವಾದ ಇದೆ. ಜೆಡಿಎಸ್ ದೋಸ್ತಿ ಚುನಾವಣೆಗೆ ಸೀಮಿತವಾದದ್ದು. ಅದು ಸ್ಥಾನ ಹೊಂದಾಣಿಕೆಯ ಮೈತ್ರಿ. ಕಾಂಗ್ರೆಸ್ ವಿರೋಧಿ ಮತಗಳು ಹಂಚಿ ಹೋಗದಂತೆ ತಡೆಯಲು ಆಗಿರುವ ಸಖ್ಯ. ಪಕ್ಷದ ಸಂಘಟನೆ, ಹೋರಾಟದ ವಿಚಾರವೇ ಬೇರೆ. ಪ್ರತಿದಿನದ ರಾಜಕೀಯ ಚಟುವಟಿಕೆಯಲ್ಲಿ ಮೈತ್ರಿ ಕಷ್ಟ. ಸಂಘಟನೆ, ಹೋರಾಟದಲ್ಲೂ ಹೊಂದಾಣಿಕೆಯಾದರೆ ಪಕ್ಷ ಬೆಳೆಯುವುದಾದರೂ ಹೇಗೆ ಎಂಬುದು ಬಿಜೆಪಿಯ ಸಂಸದರೊಬ್ಬರ ಪ್ರಶ್ನೆ. ಜೆಡಿಎಸ್‌ನವರು ಅವರ ಪಕ್ಷದ ಸಂಘಟನೆಗಾಗಿ ಪ್ರತ್ಯೇಕವಾಗಿ ಹೋರಾಟ ನಡೆಸಿದರೆ ಬಿಜೆಪಿಯವರು ಇದರಲ್ಲಿ ತಮ್ಮನ್ನು ವಿಶ್ವಾಸಕ್ಕೆ ಪಡೆಯಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ ಎಂಬುದು ಅವರ ಅನಿಸಿಕೆ. ಪಕ್ಷ ಕಟ್ಟುವ ಉದ್ದೇಶದ ಈ ನಿಲುವು ಒಪ್ಪಬಹುದಾದರೂ ಬಿಜೆಪಿ-ಜೆಡಿಎಸ್ ನಡುವಿನ ದೋಸ್ತಿ ಅಷ್ಟು ಸರಳವಾಗಿಲ್ಲ. ಈ ದೋಸ್ತಿಗಳ ನಾಯಕರ ನಡುವೆ ಸರಳತೆಗಿಂತ ಸಂಕೀರ್ಣವೇ ಹೆಚ್ಚು.
ಭಾರತೀಯ ಜನತಾಪಕ್ಷದ ದೆಹಲಿಯ ವರಿಷ್ಠರಿಗೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿದು ಗಟ್ಟಿಯಾಗಬೇಕೆಂಬ ಇರಾದೆ ಇದೆ. ಕುಮಾರಸ್ವಾಮಿ ದೋಸ್ತಿ ಇಲ್ಲದೇ ಕಾಂಗ್ರೆಸ್ ಸೋಲಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿ ವರಿಷ್ಠರ ಖಚಿತ ನಿಲುವು. ಆದರೆ, ರಾಜ್ಯ ಬಿಜೆಪಿಯ ಅನೇಕ ನಾಯಕರಿಗೆ ಈ ವಿಚಾರದಲ್ಲಿ ಸಮ್ಮತವಿಲ್ಲ. ಮೈತ್ರಿಯಲ್ಲಿ ಬಿರುಕು ಮತ್ತಷ್ಟು ಆಳಕ್ಕೆ ಇಳಿದರೆ ಇಬ್ಬರಿಗೂ ನಷ್ಟ.
ಅವತ್ತು 2006ರಲ್ಲಿ ಜೆಡಿಎಸ್-ಬಿಜೆಪಿ ಮಧ್ಯೆ ಸರಕಾರ ರಚನೆಗೆ ಮೈತ್ರಿಯಾದಾಗ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರಿಗೆ ಇದು ಅಷ್ಟಾಗಿ ಸಮ್ಮತ ಇರಲಿಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಮೊದಲ 20 ತಿಂಗಳು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರ ಬಗ್ಗೆ ಆಡ್ವಾಣಿ ಅವರಿಗೆ ಆಕ್ಷೇಪವಿತ್ತು. ಆದರೆ, ಅಟಲ್ ಬಿಹಾರಿ ವಾಜಪೇಯಿ ಶಿಷ್ಯ ಬಿ.ಎಸ್.ಯಡಿಯೂರಪ್ಪ ಅವರು ಅಷ್ಟೊತ್ತಿಗಾಗಲೇ ಕುಮಾರಸ್ವಾಮಿ ಜೊತೆ ಚರ್ಚಿಸಿ ಅಧಿಕಾರ ಸೂತ್ರ ಸಿದ್ದಪಡಿಸಿದ್ದರು. ಆಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಹೈಕಮಾಂಡ್ ದುರ್ಬಲವಾಗಿತ್ತು. ಯಡಿಯೂರಪ್ಪ ಪ್ರಾದೇಶಿಕ ಮಟ್ಟದಲ್ಲಿ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದರು. ಬಿಜೆಪಿ ವರಿಷ್ಠರಿಗೆ ಬೇರೆ ದಾರಿ ಇರಲಿಲ್ಲ. ಯಡಿಯೂರಪ್ಪನವರ ಕೈ ಮೇಲಾಗಿತ್ತು. ಆದರೆ, ಇವತ್ತು ದೆಹಲಿಯ ಬಿಜೆಪಿ ವರಿಷ್ಠರಿಗೆ ಜೆಡಿಎಸ್ ಜೊತೆ ಕರ್ನಾಟಕದಲ್ಲಿ ಮೈತ್ರಿ ಗಟ್ಟಿಯಾಗಬೇಕೆಂಬ ಉದ್ದೇಶವಿದೆ. ಆದರೆ, ರಾಜ್ಯ ಬಿಜೆಪಿಯ ಕೆಲವು ಪ್ರಮುಖ ನಾಯಕರಿಗೆ ಈ ಮೈತ್ರಿಯ ಬಗ್ಗೆ ಒಲವಿಲ್ಲ. ಹೀಗಾಗಿಯೇ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈಗ ನಡೆದಿರುವ ಬಿಜೆಪಿ ಬಳ್ಳಾರಿ ಪಾದಯಾತ್ರೆಯೂ ಅಂತಹದ್ದೊಂದು ಸಂದೇಶವೇ ಇರಬಹುದು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com