ಶಿವಕುಮಾರ್‌ ನೂರು ದಿನಗಳ ಆಡಳಿತ: ಸಮಯವೇ ಸವಾಲು (ನೇರ ನೋಟ)

ಮುಂದಿನ ವಿಧಾನಸಭಾ ಚುನಾವಣೆಗೆ ಬಹಳ ದೂರವಿಲ್ಲ. ಇನ್ನು 20 ತಿಂಗಳಿಗೆ ಅಸೆಂಬ್ಲಿ ಎಲೆಕ್ಷನ್‌. ಬ್ಯಾಟಿಂಗ್‌ಗೆ ಇಳಿದಿರುವ ಶಿವಕುಮಾರ್ ತಂಡಕ್ಕೆ ಚೆಂಡಿನ ಪ್ರತಿ ಎಸೆತವೂ ಮುಖ್ಯವೇ.
In the wake of the completion of 100 days of the Government led by CM DK Shivakumar, the "Drudh Karnatakada Sankalpa" programme at Vidhana Soudha in Bengaluru.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ “ದೃಢ ಕರ್ನಾಟಕದ ಸಂಕಲ್ಪ” ಕಾರ್ಯಕ್ರಮ ಆಯೋಜಿಸಲಾಗಿತ್ತು.Express photo: Nagaraja Gadekal
Updated on

ಯಾವುದೇ ಒಂದು ಸರಕಾರದ ಸಾಧನೆಯನ್ನು ನೂರು ದಿನಗಳ ಆಳ್ವಿಕೆಯಿಂದಲೇ ಅಳೆಯಲು ಸಾಧ್ಯವಿಲ್ಲ. ಆದರೆ, ರಾಜ್ಯದ ಡಿ.ಕೆ.ಶಿವಕುಮಾರ್ ಅವರ ಸರಕಾರಕ್ಕೆ ಈ ಮಾತು ಅನ್ವಯ ಆಗುವಂತಹ ಪರಿಸ್ಥಿತಿಯೇ ಇಲ್ಲ. ಏಕೆಂದರೆ, ಕಾಂಗ್ರೆಸ್‌ ಸರಕಾರಕ್ಕೆ ಈಗಾಗಲೇ ಮೂರು ವರ್ಷಗಳು ಕಳೆದಿವೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ನೂರು ದಿನಗಳು ಆಗಿದ್ದರೂ ಹಿಂದಿನ ಸರಕಾರದ ಕಾರ್ಯಕ್ಷಮತೆಯ ಮಾನದಂಡದಿಂದಲೇ ಮಾಪನ ಮಾಡಬೇಕಾದ ಸ್ಥಿತಿ ಇದೆ. ಅದಕ್ಕಾಗಿಯೇ ಅವರದು ಈಗ 20:20 ಕ್ರಿಕೆಟ್‌ ಮ್ಯಾಚ್‌. ಬ್ಯಾಟಿಂಗ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳನ್ನೇ ಬಾರಿಸಬೇಕಿದೆ. ಜಾಹೀರಾತುಗಳಲ್ಲಿ ಅವರೇ ಹೇಳಿಕೊಂಡಂತೆ ಅವರದು ಈಗ ಟೀಂ ಕರ್ನಾಟಕ.

ಮುಂದಿನ ವಿಧಾನಸಭಾ ಚುನಾವಣೆಗೆ ಬಹಳ ದೂರವಿಲ್ಲ. ಇನ್ನು 20 ತಿಂಗಳಿಗೆ ಅಸೆಂಬ್ಲಿ ಎಲೆಕ್ಷನ್‌. ಬ್ಯಾಟಿಂಗ್‌ಗೆ ಇಳಿದಿರುವ ಶಿವಕುಮಾರ್ ತಂಡಕ್ಕೆ ಚೆಂಡಿನ ಪ್ರತಿ ಎಸೆತವೂ ಮುಖ್ಯವೇ. ನಾಗೇಂದ್ರ ರಾಜೀನಾಮೆ ಪ್ರಕರಣ ಹಾಗೂ ಸಾರ್ವಜನಿಕ ಪಾರ್ಕ್‌ಗಳ ಜಾಗದಲ್ಲಿ ಶೇ.5ರಷ್ಟನ್ನು ಬಳಸುವ ಮಸೂದೆ ವಿಷಯದಲ್ಲಿ ಹಿಟ್‌ ವಿಕೆಟ್‌ ಆಯಿತು. ಶಿವಕುಮಾರ್ ತಂಡ ಎದುರಾಳಿ ಬಿಜೆಪಿ ತಂಡದ ಬೌಲಿಂಗ್‌ಗೆ ಔಟ್‌ ಆಗುವುದಕ್ಕಿಂತಲೂ ತನ್ನದೇ ತಪ್ಪಿನಿಂದ ಪೆವಲಿಯನ್‌ಗೆ ಹಿಂತಿರುಗುತ್ತಿದೆ. ಟೀಂ ಕರ್ನಾಟಕಕ್ಕೆ ಸಮಯವೇ ಮೊದಲ ಸವಾಲು. ಬ್ಯಾಟಿಂಗ್‌ನಲ್ಲಿ ರನ್ನುಗಳ ಸುರಿಮಳೆ ಆಗಲೇಬೇಕಿದೆ. ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹೇಳುವಂತೆ ಕ್ಯಾಪ್ಟನ್‌ ಸಾಮರ್ಥ್ಯ ಕೆಲವು ಓವರುಗಳಲ್ಲೇ ತಿಳಿಯುವುದಿಲ್ಲ. ಮ್ಯಾಚ್‌ ಮುಗಿದ ಬಳಿಕ ಗೊತ್ತಾಗುತ್ತದೆ. ಕಾಯಬೇಕು.

ಪ್ರಾರಂಭದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಮಂದಗತಿಯ ಬ್ಯಾಟಿಂಗ್‌. ಕೆಲವು ಬ್ಯಾಟ್ಸ್‌ಮನ್‌ಗಳು ಇರುತ್ತಾರೆ. ರನ್ನುಗಳನ್ನು ಬಾರಿಸುವುದಿಲ್ಲ, ವಿಕೆಟ್ಟೂ ಒಪ್ಪಿಸುವುದಿಲ್ಲ. ಸ್ಕ್ರೀಜ್‌ ಬಿಟ್ಟು ಅಲುಗಾಡಿದರೆ ಕೇಳಿ. ಸಿದ್ದರಾಮಯ್ಯ ಸರಕಾರದ ಮೊದಲ ಮೂರು ವರ್ಷಗಳು ಬಹುತೇಕ ಇಂಥದ್ದೇ ಪರಿಸ್ಥಿತಿಯಾಗಿತ್ತು. ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಸರಕಾರ ಟೇಕಾಫೇ ಅಗಲಿಲ್ಲ. ಈಗ ಶಿವಕುಮಾರ್ ಸರಕಾರದ ಮುಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಅನುಷ್ಠಾನದ ಜವಾಬ್ದಾರಿ ಇದೆ. ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆದ್ಯತಾ ವಲಯಗಳಿಗೆ ಹೆಚ್ಚು ಆದ್ಯತೆ ನೀಡಲು ಸಂಪನ್ಮೂಲಗಳನ್ನು ಕ್ರೂಢೀಕರಿಸಬೇಕಿದೆ. ಬಹುತೇಕ ಭಾಗಗಳಲ್ಲಿ ಬರ. ಇವೆಲ್ಲವೂ ಗೂಗ್ಲಿ, ಯಾರ್ಕರ್‌ಗಳೇ. ಸವಾಲುಗಳ ಸರಮಾಲೆಯೇ.

ಶಿವಕುಮಾರ್ ತಮ್ಮ ನೂರು ದಿನಗಳ ಸಾಧನೆಗಳನ್ನು ಪಟ್ಟಿ ಮಾಡಿಲ್ಲ. ಇವು ಮುಂದೆ ಸಾಗಬೇಕಾದ ಹಾದಿಗೆ ದಿಕ್ಸೂಚಿ ಅಂತ ಕರೆದಿದ್ದಾರೆ. ಜನರಿಗೆ ಇಂದು ಏನು ಸಿಕ್ಕಿದೆ ಎನ್ನುವುದಕ್ಕಿಂತ ನಾಳೆ ಅವರಿಗೆ ಇನ್ನೇನು ಬೇಕು ಎಂಬುದನ್ನು ಅರಿತು ಕೆಲಸ ಮಾಡಬೇಕು. ಅದೇ ದೃಷ್ಟಿಕೋನ ಹಾಗೂ ಗುರಿಯಾಗಬೇಕು ಅಂದಿದ್ದಾರೆ. ನಿಜ. ಇದಕ್ಕೆ ಸರಕಾರ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕಿದೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ತಾವೊಬ್ಬರೇ ಕ್ರಿಯಾಶೀಲರಾಗಿ ಮುನ್ನುಗ್ಗಿದರೆ ಸಾಲದು. ಇಡೀ ತಂಡ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕಿದೆ. ಆದರೆ, ಅದು ಕಾಣುತ್ತಿಲ್ಲ. ಸಚಿವ ಸಂಪುಟದಲ್ಲಿ ಬೆರಳೆಣಿಕೆಯ ಕೆಲವು ಸದಸ್ಯರನ್ನು ಹೊರತುಪಡಿಸಿದರೆ ಉಳಿದವರ ಕಾರ್ಯ ನಿರ್ವಹಣೆ ಅರಿವಿಗೇ ಬರುತ್ತಿಲ್ಲ. ಶಿವಕುಮಾರ್‌ ತಮ್ಮ ಸಚಿವ ಸಂಪುಟವನ್ನು ಟೀಂ ಕರ್ನಾಟಕ ಅಂತಾರೆ. ಆದರೆ, ಸರಕಾರದಲ್ಲಿ ಸಾಮೂಹಿಕ ನಾಯಕತ್ವಕ್ಕಿಂತ ತಮ್ಮದೇ ಏಕವ್ಯಕ್ತಿ ನಾಯಕತ್ವದ ಗಟ್ಟಿ ಛಾಪು ಒತ್ತುವ ತವಕ ಅವರದು. ಇದಾಗಬಾರದು. ಅವರೊಬ್ಬರ ಬ್ಯಾಟಿಂಗ್‌ನಿಂದ ಮ್ಯಾಚ್‌ ಗೆಲ್ಲುವುದು ಕಷ್ಟ.

In the wake of the completion of 100 days of the Government led by CM DK Shivakumar, the "Drudh Karnatakada Sankalpa" programme at Vidhana Soudha in Bengaluru.
ಅಹಿಂದ ಸಂಘಟನೆ ಮೇಲೆ ಒಡಕಿನ ಛಾಯೆ (ನೇರ ನೋಟ)

ಶಿವಕುಮಾರ್‌ ಸರಕಾರ ನಗರ ಕೇಂದ್ರೀತ ಬೆಳವಣಿಗೆಗಳಿಗೆ ನೀಡುವಷ್ಟು ಆದ್ಯತೆ ಗ್ರಾಮೀಣ ಭಾಗಗಳ ವಿಚಾರದಲ್ಲಿ ಕಂಡು ಬರುತ್ತಿಲ್ಲ. ಬೆಂಗಳೂರಿನ ಅಭಿವೃದ್ಧಿ ಅವರ ಪ್ರಮುಖ ಅಜೆಂಡಾ ಆಗಿರಬಹುದು. ಬೆಂಗಳೂರು ಅಭಿವೃದ್ಧಿ ಗುಂಗಿನಲ್ಲೇ ಹೊರಟು ರಾಜ್ಯದ ಇತರ ಭಾಗಗಳ ಪ್ರಗತಿ, ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ಲಕ್ಷಿಸಿದರೆ, ಆದ್ಯತಾ ವಲಯಗಳನ್ನು ಅಲಕ್ಷಿಸಿದರೆ ಸರಕಾರದ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಯಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಬರಗಾಲ ಹಾಗೂ ಕಸ್ತೂರಿರಂಗನ್‌ ವರದಿ ಕುರಿತು ಚರ್ಚೆಗೆ ಸೆಪ್ಟೆಂಬರ್‌ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹವೇ.

ಕಾಂಗ್ರೆಸ್ಸಿಗೆ ಅಹಿಂದ ಮತದಾರರೇ ಬೆನ್ನೆಲುಬು. ಕಳೆದ ಚುನಾವಣೆಯಲ್ಲೂ ಅಹಿಂದ ಮತದಾರರೇ ಕಾಂಗ್ರೆಸ್ಸಿಗೆ ಆಸರೆಯಾದವರು. ತಾವು ಮುಖ್ಯಮಂತ್ರಿಯಾದ ನಂತರ ಅಹಿಂದ ವೋಟುಗಳನ್ನು ಹಿಡಿದಿಡುವ ಸವಾಲು ಕಾಂಗ್ರೆಸ್‌ಗೆ ಇದೆ ಎಂಬುದನ್ನು ಶಿವಕುಮಾರ್ ಮರೆಯಬಾರದು. ಅಹಿಂದ ನಾಯಕ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದ ನಂತರವೂ ಗೆಲ್ಲುವ ಸಾಮರ್ಥ್ಯವನ್ನು ಶಿವಕುಮಾರ್ ಪ್ರದರ್ಶಿಸಬೇಕಿದೆ. ಅಹಿಂದ ವರ್ಗದವರಿಗೆ ಈ ಸರಕಾರ ತಮ್ಮಿಂದ ದೂರ ಸರಿದಿದೆ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳಬೇಕಿದೆ. ಇದು ಶಿವಕುಮಾರ್ ಮುಂದಿರುವ ಸವಾಲು. ಈ ಕಾರಣಕ್ಕಾಗಿಯೇ ಅವರು ಸಿದ್ದರಾಮಯ್ಯ ಅವರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ.

ಶಿವಕುಮಾರ್ ಸರಕಾರಕ್ಕೆ ನೂರು ದಿನಗಳು ಪೂರೈಸಿದ ಹೊತ್ತಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮತ್ತು ಕಚೇರಿಗಳ ಮೇಲಿನ ಜಾರಿ ನಿರ್ದೇಶನಾಲಯದ ದಾಳಿ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷಗಿರಿ ಕೈ ತಪ್ಪಿರುವುದು ಕಾಂಗ್ರೆಸ್‌ ಒಳರಾಜಕಾರಣವನ್ನು ಮುನ್ನೆಲೆಗೆ ತಂದಿದೆ. ಸತೀಶ್‌ ವಿರುದ್ಧ ಇಡಿಗೆ ದೂರು ನೀಡಿದವರು ಯಾರೆಂಬ ಪ್ರಶ್ನೆಗೆ ಕಾಂಗ್ರೆಸ್‌ನಲ್ಲೇ ಉತ್ತರ ಹುಡುಕಲಾಗುತ್ತಿದೆ. ತಮ್ಮ ವಿರುದ್ಧ ಒಳಗಿನವರೇ ದೂರು ನೀಡಿದ್ದಾರೆಂದು ಸತೀಶ್‌ ಹೇಳಿರುವುದು ಕಾಂಗ್ರೆಸ್ಸಿನ ಬಣ ರಾಜಕಾರಣಕ್ಕೆ ಸಾಕ್ಷಿ. ವೆಂಕ, ಸೀನ, ನಾಣಿ ಮೇಲೆ ಅನುಮಾನದ ಮುಳ್ಳು ತೂಗಾಡುತ್ತಿದೆ.

In the wake of the completion of 100 days of the Government led by CM DK Shivakumar, the "Drudh Karnatakada Sankalpa" programme at Vidhana Soudha in Bengaluru.
ಹೈಕಮಾಂಡ್‌ ಅತಿಯಾದ ಹಸ್ತಕ್ಷೇಪವೇ ಡಿಕೆಶಿಗೆ ಸಂಕಟ (ನೇರ ನೋಟ)

ಇನ್ನು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದವರು ಶಿವಕುಮಾರ್ ಆಪ್ತರಾದ ವಿಧಾನಪರಿಷತ್‌ ಸದಸ್ಯ ರವಿ ಅವರು. ಈ ಸ್ಥಾನಕ್ಕೆ ಶಾಸಕ ಕೆ.ಎನ್‌.ರಾಜಣ್ಣ ಅವರೂ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ಅವರು ತಮ್ಮ ಪರವಾಗಿ ಬಲವಾಗಿ ನಿಲ್ಲಲಿಲ್ಲ ಎಂಬ ಅಸಮಾಧಾನ ರಾಜಣ್ಣ ಅವರಿಗಿದೆ. ಶಿವಕುಮಾರ್ ಕೈ ಮೇಲಾಯಿತು. ರವಿ ಅವಿರೋಧವಾಗಿ ಆಯ್ಕೆಯಾದರು. ರಾಜಣ್ಣ ಮುನಿಸಿಕೊಂಡಿದ್ದಾರೆ. ಜೆಡಿಎಸ್‌ನತ್ತ ಚಿತ್ತ ಹರಿಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ವಾಲ್ಮೀಕಿ ಸಮಾಜದ ನಾಗೇಂದ್ರ, ಸತೀಶ್‌ ಜಾರಕಿಹೊಳಿ, ರಾಜಣ್ಣ ಇವತ್ತು ರಾಜಕೀಯವಾಗಿ ಒಂದು ರೀತಿ ಸಂಕಷ್ಟದಲ್ಲಿರುವವರೇ. ರಾಜಣ್ಣ ಅವರ ಮುಂದಿನ ಹೆಜ್ಜೆ ಕಾದು ನೋಡಬೇಕು.

ನೂರು ದಿನದ ಆಡಳಿತಾವಧಿಯಲ್ಲಿ ಶಿವಕುಮಾರ್‌ ಭರವಸೆಯ ಟ್ರೆಂಡ್‌ ಸೃಷ್ಟಿಸಿರುವುದು ನಿಜ. ಜನರ ನಿರೀಕ್ಷೆಯೂ ಬೆಟ್ಟದಷ್ಟಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಜೊತೆ ನಿರಂತರ ಸಂಘರ್ಷಕ್ಕೆ ಇಳಿದಿದ್ದರು. ಆದರೆ, ಶಿವಕುಮಾರ್ ಇದರಿಂದ ದೂರ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡಿದ್ದರೆ, ಶಿವಕುಮಾರ್ ತಮ್ಮನ್ನು ಪ್ರಜಾಸೇವಕ ಅಂತ ಕರೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ ಶೈಲಿಗೆ ಶಿವಕುಮಾರ್ ಮಾರು ಹೋದಂತೆ ಭಾಸವಾಗುತ್ತದೆ. ನರೇಂದ್ರ ಮೋದಿ ಅವರ ಸರಕಾರದಲ್ಲಿ ಗ್ರೂಪ್‌ ಆಫ್‌ ಮಿನಿಸ್ಟರ್ಸ್‌ ಇರುವಂತೆ ಶಿವಕುಮಾರ್ ತಮ್ಮ ಸಚಿವ ಸಂಪುಟದಲ್ಲಿ ಅದೇ ಮಾದರಿಯಲ್ಲಿ ಸಚಿವರ ತಂಡ ರಚಿಸಿಕೊಂಡಿರುವುದು ಇದಕ್ಕೆ ಸಾಕ್ಷಿ.

ಒಂದಂತೂ ಸ್ಪಷ್ಟ. ಶಿವಕುಮಾರ್‌ 2028ರ ವಿಧಾನಸಭಾ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅವರ ಗುರಿಯೇ 2028ರ ವಿಧಾನಸಭಾ ಚುನಾವಣೆ. ಇಪ್ಪತ್ತು ತಿಂಗಳ ಮುಖ್ಯಮಂತ್ರಿ ಅವಧಿಗೆ ಖಂಡಿತ ಅವರು ಸಮಾಧಾನ ಆಗುವವವರಲ್ಲ. ಶಿವಕುಮಾರ್‌ ಅವರಿಗೆ ಅವರ ದಾರಿ ಹಾಗೂ ಗುರಿ ಬಗ್ಗೆ ಸ್ಪಷ್ಟತೆ ಇದೆ. ಶಿವಕುಮಾರ್ ಅವರು ಬಂಗಾರಪ್ಪನವರ ಕಣ್ಣಿಗೆ ಮೊದಲು ಬಿದ್ದವರು. ಎಸ್‌.ಎಂ.ಕೃಷ್ಣ ಕೈ ಹಿಡಿದು ನಡೆಸಿದವರು. ಶಿವಕುಮಾರ್ ಅವರಲ್ಲಿ ಬಂಗಾರಪ್ಪನವರ ಛಲ, ಕೃಷ್ಣ ಅವರ ರಾಜನೀತಿಜ್ಞವೂ ಇದೆ. ಶಿವಕುಮಾರ್ ಅವರದ್ದೇ ಒಂದು ಮಾತಿದೆ- “ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾರೂ ಯಾವ ರೀತಿ ಕಾಯಿ ನಡೆಸುತ್ತೇವೆ ಎಂಬುದನ್ನು ಹೇಳುವುದಿಲ್ಲ’’.

ಶಿವಕುಮಾರ್‌ ಚದುರಂಗದ ಆಟದಲ್ಲಿ ಹೇಗೆ ಕಾಯಿಗಳನ್ನು ನಡೆಸುತ್ತಾರೆ ಎಂಬುದೇ ಕುತೂಹಲಕಾರಿ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com