ಬಲಾಢ್ಯ ಮುಂಬೈ ಮಣಿಸಿದ ಡೆಲ್ಲಿ ಡೇರ್ ಡೆವಿಲ್ಸ್

ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ತಂಡ ವಿರುದ್ಧದ ಪಂದ್ಯದಲ್ಲಿ ರೋಚಕವಾಗಿ ಸೋಲನ್ನು ಒಪ್ಪಿಕೊಂಡಿದೆ...
ಗೆಲುವಿನ ಸಂಭ್ರಮದಲ್ಲಿ ಅಮಿತ್ ಮಿಶ್ರಾ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆಲುವಿನ ಸಂಭ್ರಮದಲ್ಲಿ ಅಮಿತ್ ಮಿಶ್ರಾ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ತಂಡ ವಿರುದ್ಧದ ಪಂದ್ಯದಲ್ಲಿ ರೋಚಕವಾಗಿ ಸೋಲನ್ನು ಒಪ್ಪಿಕೊಂಡಿದೆ.

ಶನಿವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡ ನೀಡಿದ 165 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಮುಂಬೈ ತಂಡ ನಿಗದಿತ 20  ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ದೆಹಲಿ ವಿರುದ್ಧ 10 ರನ್ ಗಳ ಸೋಲು ಕಂಡಿತು.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರಕ್ಕೆ ಬಂತು. ಅದರಂತೆ ಬ್ಯಾಟಿಂಗ್ ಗೆ ಇಳಿದೆ ದೆಹಲಿಗೆ ಆರಂಭಿಕ ಆಘಾತ ಎದುರಾಯಿತು. 9 ರನ್ ಗಳಿಸಿದ್ದ  ಡಿಕಾಕ್ ಪಂದ್ಯದ 2ನೇ ಓವರ್ ನ ಅಂತಿಮ ಎಸೆತದಲ್ಲಿ ಮೆಕ್ ಲೀನಿಘನ್ ಗೆ ವಿಕೆಟ್ ಒಪ್ಪಿಸುವ ಮೂಲಕ ದೆಹಲಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.  ಬಳಿಕ ಐಯ್ಯರ್ ಜೊತೆಗೂಡಿದ  ಸ್ಯಾಮ್ಸನ್ ದೆಹಲಿ ಇನ್ನಿಂಗ್ಸ್ ಗೆ ಒಂದಿಷ್ಟು ಜೀವ ತುಂಬಿದರು. ಈ ನಡುವೆ ಐಯ್ಯರ್ ಕೂಡ 19 ರನ್ ಗಳಿಸಿ ಔಟ್ ಆದರು. ಬಳಿಕ ನಾಯರ್ 5 ರನ್ ಗಳಿಸಿ ಔಟ್ ಆದರು. ಆ ಬಳಿಕ ಸ್ಯಾಮ್ಸನ್  ಜೊತೆಗೂಡಿದ ಜೆಪಿ ಡುಮಿನಿ ದೆಹಲಿ ಬ್ಯಾಟಿಂಗ್ ಗೆ ವೇಗ ನೀಡಿದರು. ಈ ಹಂತದಲ್ಲಿ 60 ರನ್ ಗಳಿಸಿದ್ದ ಸ್ಯಾಮ್ಸನ್ ಮತ್ತದೇ ಮೆಕ್ ಲೀನಿಘನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಡುಮಿನಿ  ಜೊತೆಗೂಡಿದ ಪವನ್ ನೇಗಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಗಳನ್ನು ಪೇರಿಸಿತು.

ಈ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೂ ಕೂಡ ಆರಂಭಿಕ ಆಘಾತ ಎದುರಾಯಿತು. ತನ್ನ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿಯೇ ಪಾರ್ಥಿವ್ ಪಟೇಲ್ 1 ರನ್  ಗಳಿಸಿ ಔಟ್ ಆದರು. ಆದರೆ ತಮ್ಮ ಅಮೋಘ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಸಿಡಿದು ನಿಂತರು. 48 ಎಸೆತಗಳನ್ನು ಎದುರಿಸಿದ ರೋಹಿತ್  ಶರ್ಮಾ 65 ರನ್ ಗಳಿಸಿ ರನ್ ಔಟ್ ಆದರು. ರೋಹಿತ್ ಬಳಿಕ ರಾಯುಡು (25 ರನ್)ಮತ್ತು ಪಾಂಡ್ಯಾ (36 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಪ್ರಯತ್ನ ಪಟ್ಟರಾದರೂ ಅದನ್ನು  ಗೆಲುವಾಗಿ ಪರಿಣಮಿಸುವಲ್ಲಿ ವಿಫಲರಾದರು. ಪಾಂಡ್ಯಾ ಔಟ್ ಆಗುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಪರಿಣಾಮ ನಿಗದಿತ 20 ಓವರ್  ಗಳಲ್ಲಿ ಮುಂಬೈ ತಂಡ 7 ವಿಕೆಟ್ ನಷ್ಟಕ್ಕೆ 154 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಡೆಲ್ಲಿ ತಂಡದ ಎದುರು 10 ರನ್ ಗಳಿಂದ ಮಂಡಿಯೂರಿತು.

ಪ್ರಮುಖವಾಗಿ ಕೊನೆಯ 2 ಓವರ್ ಗಳು ಪಂದ್ಯದ ಗತಿಯನ್ನೇ ಬದಲಿಸಿತು. ಕೊನೆಯ 2 ಓವರ್ ಎಸೆದ ಜಹೀರ್ ಖಾನ್ ಮತ್ತು ಕ್ರಿಸ್ ಮಾರಿಸ್ ಪಂದ್ಯದ ಗತಿಯನ್ನೇ ಬದಲಿಸಿದರು.  ಅಂತಿಮವಾಗಿ ದೆಹಲಿ ತಂಡ ಮುಂಬೈ ಎದುರು 10 ರನ್ ಗಳ ರೋಚಕ ಜಯ ಸಾಧಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ದೆಹಲಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದ ಸ್ಯಾಮ್ಸನ್  ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com