ಸ್ಪಿನ್ನರ್ ಗಳ ಆರ್ಭಟಕ್ಕೆ ಕುಸಿದ ವಿಂಡೀಸ್, ಭಾರತಕ್ಕೆ 144 ರನ್ ಗಳ ಸಾಧಾರಣ ಗುರಿ

ಅಮೆರಿಕ ಫ್ಲೋರಿಡಾದಲ್ಲಿ ಭಾನುವಾರ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ಕುಸಿದ ವೆಸ್ಟ್ ಇಂಡೀಸ್ ತಂಡ ಕೇವಲ 143 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ 144 ರನ್ ಗಳ ಸಾಧಾರಣ ಗುರಿ ನೀಡಿದೆ.
ವಿಂಡೀಸ್ ನ ಸಿಮೋನ್ಸ್ ರನ್ನು ಸ್ಟಂಪ್ ಔಟ್ ಮಾಡಿದ ಧೋನಿ  (ಕ್ರಿಕ್ ಇನ್ಫೋ ಚಿತ್ರ)
ವಿಂಡೀಸ್ ನ ಸಿಮೋನ್ಸ್ ರನ್ನು ಸ್ಟಂಪ್ ಔಟ್ ಮಾಡಿದ ಧೋನಿ (ಕ್ರಿಕ್ ಇನ್ಫೋ ಚಿತ್ರ)

ಫ್ಲೋರಿಡಾ: ಅಮೆರಿಕ ಫ್ಲೋರಿಡಾದಲ್ಲಿ ಭಾನುವಾರ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ಕುಸಿದ ವೆಸ್ಟ್ ಇಂಡೀಸ್ ತಂಡ ಕೇವಲ 143 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ 144 ರನ್ ಗಳ ಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದು ವಿಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ನಾಯಕ ಧೋನಿ ನಿರ್ಧಾರ ನಿನ್ನೆಯಂತೇ ಕೈ ಕೊಡುತ್ತದೆ ಎಂದು ಶಂಕಿಸಲಾಗಿತ್ತಾದರೂ, ಭಾರತೀಯ ಸ್ಪಿನ್ನರ್ ಗಳು ತಮ್ಮ ಪ್ರಭಾವಿ ದಾಳಿ ಮೂಲಕವಾಗಿ ಆ ಶಂಕೆಯನ್ನು ದೂರ ಮಾಡಿದರು. ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯ ಪುರುಷೋತ್ತಮರಾಗಿದ್ದ ಎವಿನ್ ಲೂಯಿಸ್ ರನ್ನು ಇಂದು ಕೇವಲ 7 ರನ್ ಗಳಿಗೆ ಔಟ್ ಮಾಡಲಾಯಿತು. ವಿಂಡೀಸ್ ಗೆ ಆರಂಭಿಕ ಆಘಾತ ನೀಡಿದ ಮಹಮದ್ ಶಮಿ ಲೂಯಿಸ್ ರನ್ನು ಪೆವಿಲಿಯನ್ ಗೆ ಅಟ್ಟಿದರು. ಬಳಿಕ ಚಾರ್ಲ್ಸ್ ಜೊತೆಗೂಡಿದ ಸ್ಯಾಮುಯೆಲ್ಸ್ ನಿಧಾನಗತಿಯಲ್ಲಿ ರನ್ ಪೇರಿಸಲು ಮುಂದಾದರು. ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ಚಾರ್ಲ್ಸ್ ಉತ್ತಮವಾಗಿ ಆಡುತ್ತಲೇ ಅರ್ಧಶತಕದ ಗಡಿ ತಲುಪಿದ್ದರು.

ಈ ವೇಳೆ ದಾಳಿಗಿಳಿದ ಅಮಿತ್ ಮಿಶ್ರಾ 43 ರನ್ ಗಳಿಸಿದ್ದ ಚಾರ್ಲ್ಸ್ ರನ್ನು ಔಟ್ ಮಾಡುವ ಮೂಲಕ ವಿಂಡೀಸ್ ಗೆ ಮತ್ತೊಂದು ಶಾಕ್ ನೀಡಿದರು. ಬಳಿಕ ಬಂದ ವಿಂಡೀಸ್ ನ ಯಾವೊಬ್ಬ ಆಟಗಾರನೂ ಕೂಡ ಪ್ರಭಾವಿ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಟಿ20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿ ಸೋಲಿಗೆ ಕಾರಣರಾಗಿದ್ದ ಸಿಮೊನ್ಸ್ ಕೂಡ ಈ ಪಂದ್ಯದಲ್ಲಿ ಕೇವಲ 19 ರನ್ ಗಳಿಸಿ ನಿರ್ಗಮಿಸಿದರು. ಅವರ ಬೆನ್ನ ಹಿಂದೆಯೇ ಸ್ಯಾಮುಯೆಲ್ಸ್ (5 ರನ್), ಫ್ಲೆಚರ್ (3 ರನ್), ಪೊಲ್ಲಾರ್ಡ್ (13 ರನ್), ರಸೆಲ್ (13 ರನ್), ಬ್ರಾವೋ (3 ರನ್) ಕೂಡ ಔಟ್ ಆದರು. ಹೀಗಾಗಿ ಭಾರತೀಯ ಬೌಲರ್ ಗಳನ್ನು ಎದುರಿಸುವಲ್ಲಿ ವಿಂಡೀಸ್ ನ ಪ್ರಬಲ ಮಧ್ಯಮ ಕ್ರಮಾಂಕ ಕೂಡ ವಿಫಲವಾಗಿತ್ತು. ಈ ಹಂತದಲ್ಲಿ ವಿಂಡೀಸ್ ನಾಯಕ ಬ್ರಾಥ್ ವೇಟ್ ಕೊಂಚ ಪ್ರತಿರೋಧ ತೋರಿ 18 ರನ್ ಗಳಿಸಿದರಾದರೂ, ಮಿಶ್ರಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.

ಬಳಿಕ ಸುನಿಲ್ ನರೇನ್ ಜೊತೆಗೂಡಿದ ಬದ್ರಿ ಶಮಿ ಎಸೆದ ಅಂತಿಮ ಓವರ್ ನಲ್ಲಿ ಬೌಲ್ಡ್ ಆಗುವುದರೊಂದಿಗೆ ವಿಂಡೀಸ್ ಇನ್ನಿಂಗ್ಸ್ ಗೆ ತೆರೆ ಬಿದ್ದಿತು. ಅಂತಿಮವಾಗಿ ವೆಸ್ಚ್ ಇಂಡೀಸ್ ತಂಡ 19.4 ಓವರ್ ಗಳಲ್ಲಿ ಕೇವಲ 143 ರನ್ ಗಳಿಗೆ ಆಲ್ ಔಟ್ ಆಯಿತು.

ಭಾರತದ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ಅಮಿತ್ ಮಿಶ್ರಾ 4 ಓವರ್ ಎಸೆದು, ಕೇವಲ 24 ರನ್ ನೀಡಿ ವಿಂಡೀಸ್ ನ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ಬುಮ್ರಾ, ಆರ್ ಅಶ್ವಿನ್ ಹಾಗೂ ಶಮಿ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

2 ಪಂದ್ಯಗಳ ಈ ಟಿ20 ಸರಣಿಯಲ್ಲಿ ನಿನ್ನೆ ನಡೆದ ಮೊದಲ ಪಂದ್ಯ ಗೆದ್ದಿರುವ ವೆಸ್ಟ್ ಇಂಡೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಭಾರತ ಈ ಪಂದ್ಯ ಗೆದ್ದರೆ ಸರಣಿ 1-1ರಲ್ಲಿ ಸಮಬಲವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com