ದಾಖಲೆ ರನ್ ಚೇಸ್ ಮಾಡಿ ಗೆದ್ದು ಬೀಗಿದ ಆಂಗ್ಲರು

ಶುಕ್ರವಾರ ಮುಂಬೈನಲ್ಲಿ ಅಕ್ಷರಶಃ ರನ್ ಗಳ ಹೊಳೆ ಹರಿಯಿತು. ಕೇವಲ 40 ಓವರ್ ಗಳಲ್ಲಿ ಉಭಯ ತಂಡಗಳಿಂದ ಹರಿದಿದ್ದು ಬರೊಬ್ಬರಿ..
ಇಂಗ್ಲೆಂಡ್ ತಂಡದ ಜೆ ರೂಟ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಇಂಗ್ಲೆಂಡ್ ತಂಡದ ಜೆ ರೂಟ್ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮುಂಬೈ: ಶುಕ್ರವಾರ ಮುಂಬೈನಲ್ಲಿ ಅಕ್ಷರಶಃ ರನ್ ಗಳ ಹೊಳೆ ಹರಿಯಿತು. ಕೇವಲ 40 ಓವರ್ ಗಳಲ್ಲಿ ಉಭಯ ತಂಡಗಳಿಂದ ಹರಿದಿದ್ದು ಬರೊಬ್ಬರಿ 459 ರನ್ ಗಳು.

ಇದು 50 ಓವರ್ ಗಳ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಬಹುಶಃ ಇಷ್ಟು ರನ್ ಗಳ ಮೊತ್ತವನ್ನು ನೋಡಿರಲಿಕ್ಕೆ ಸಾಧ್ಯವಿಲ್ಲ ಎನ್ನಬಹುದು. ನಿನ್ನೆ ಐಸಿಸಿ ಟಿ20 ವಿಶ್ವಕಪ್ ನಿಮಿತ್ತ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ದ.ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಬ್ಯಾಟ್ಸಮನ್ ಗಳದ್ದೇ ಅಬ್ಬರ. ಬೃಹತ್ ಮೊತ್ತದ ಈ ಪಂದ್ಯದಲ್ಲಿ ಸಾಂಘಿಕ  ಹೋರಾಟ ಪ್ರದರ್ಶಿಸಿದ ಇಂಗ್ಲೆಂಡ್ 2 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಗೆ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟಿಂಗ್ ಲೈನ್ ಅಪ್ ಅಕ್ಷರಶಃ ಶಾಕ್ ನೀಡಿತ್ತು. ದಕ್ಷಿಣ ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಇಂಗ್ಲೆಂಡ್ ತಂಡದ ನಾಯಕನ ತಂತ್ರಗಾರಿಕೆ ತಿರುಗುಬಾಣವಾಗಿತ್ತು. ಮೊದಲ ವಿಕೆಟ್ ಗೇ ಹಶೀಮ್ ಆಮ್ಲಾ (58ರನ್) ಮತ್ತು ಡಿಕಾಕ್ (52) 96 ರನ್ ಗಳ ಭರ್ಜರಿ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಡಿಕಾಕ್ ಅಲಿ ಬೌಲಿಂಗ್ ನಲ್ಲಿ ವಿಕೆಟ್ ಕೈಚೆಲ್ಲಿದರು.

ಬಳಿಕ ಬಂದ ಡಿವಿಲಿಯರ್ಸ್ ಬಂದಷ್ಟೇ ವೇಗವಾಗಿ 16 ರನ್ ಗಳಿಸಿ ಔಟಾದರು. ನಂತರ ಬಂದ ಡುಪ್ಲೆಸಿಸ್ ರಕ್ಷಣಾತ್ಮಕ ಆಟವಾಡಿದರಾದರೂ 17 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಆಮ್ಲಾ ಕೂಡ 58 ರನ್ ಗಳಿಸಿ ನಿರ್ಗಮಿಸಿದ್ದರು. ಬಳಿಕ ಜೆಪಿ ಡುಮಿನಿ ಆಕರ್ಷಕ ಅರ್ಧಶತಕದ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಬೃಹತ್ ಮೊತ್ತದತ್ತ ಸಾಗಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇಂಗ್ಲೆಂಡ್ ಪರ ಎಂಎಂ ಅಲಿ 2 ವಿಕೆಟ್ ಗಳಿಸಿದರೆ, ವಿಲ್ಲೆ ಮತ್ತು ರಷೀದ್ ತಲಾ 1 ವಿಕೆಟ್ ಗಳಿಸಿದರು.

ಇನ್ನು ದಕ್ಷಿಣ ಆಫ್ರಿಕಾ ನೀಡಿದ ಬೃಹತ್ ಮೊತ್ತ ಒಂದೆಡೆಯಾದರೆ ಮೊದಲ ಪಂದ್ಯದ ಸೋಲಿನ ಬಳಿಕ ಮಾಡು ಇಲ್ಲವೇ ಮಡಿಯಂತಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿತ್ತು. ಹೀಗಾಗಿ ಆರಂಭದಿಂದಲೇ ಇಂಗ್ಲೆಂಡ್ ನ ಆರಂಭಿಕರು ಹೊಡಿಬಡಿ ಆಟಕ್ಕೆ ಮುಂದಾದರು. ಪ್ರಮುಖವಾಗಿ ಜೆಜೆ ರಾಯ್ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಗೈದು ಕೇವಲ 16 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ಹೇಲ್ಸ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಇವರು ಇಂಗ್ಲೆಂಡ್ ತಂಡಕ್ಕೆ 48 ರನ್ ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಬಂದ ಸ್ಟೋಕ್ಸ್ 15 ರನ್ ಗಳಿಸಿ ಔಟಾದರೆ, ಅನಂತರ ಶುರುವಾಗಿದ್ದೇ ಜೆಎ ರೂಟ್ ಅವರ ಬ್ಯಾಟಿಂಗ್ ದಾಳಿ. ಅಕ್ಷರಶಃ ರೂಟ್ ರನ್ ಮೆಷಿನ್ ಆಗಿ ಪರಿವರ್ತನೆಯಾಗಿದ್ದರು.

ಕೇವಲ 44 ಎಸೆತಗಳನ್ನು ಎದುರಿಸಿದ ರೂಟ್ 83 ರನ್ ಗಳನ್ನು ಸಿಡಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಇನ್ನಿಂಗ್ಸ್ ನ 19 ಓವರ್ ನಲ್ಲಿ ರೂಟ್ ರಬಾಡಾ ಅವರಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅಲಿ ಮತ್ತು ರಷೀದ್ ಗೆಲುವಿನ ಲೆಕ್ಕಾಚಾರ ಪೂರ್ಣ ಗೊಳಿಸಿದರು. ಈ ಪಂದ್ಯದ ಗೆಲುವಿನ ಮೂಲಕ ಇಂಗ್ಲೆಂಡ್ 2 ಅಂಕಗಳ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಕೊನೆಯ ಓವರ್ ನಲ್ಲಿ ಹೈಡ್ರಾಮಾ

ಇನ್ನು ಇಂಗ್ಲೆಂಡ್ ತಂಡ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ ತಿರುಗಿಬಿದ್ದ ದಕ್ಷಿಣ ಆಫ್ರಿಕಾ ಬೌಲರ್ ಗಳು ಕೊನೆಯ ಓವರ್ ನಲ್ಲಿ ಸತತ 2 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದರು. ಇಂಗ್ಲೆಂಡ್ ಗೆಲ್ಲಲು 6 ಎಸೆತಗಳಲ್ಲಿ ಕೇವಲ 1 ರನ್ ಅವಶ್ಯಕತೆ ಇತ್ತು. ಆದರೆ ಈ ಹಂತದಲ್ಲಿ ಬೌಲಿಂಗ್ ಮಾಡಿದ ಅಬಾಟ್ ನೋಡನೋಡುತ್ತಿದ್ದಂತೆಯೇ ಜೋರ್ಡಾನ್ ಅವರ ವಿಕೆಟ್ ಪಡೆದರು. ನಂತರದ ಎಸೆತದಲ್ಲಿ ವಿಲ್ಲೆ ಕೂಡ ರನ್ ಔಟ್ ಆಗುವ ಮೂಲಕ ಇಂಗ್ಲೆಂಡ್ ತಂಡ ಒತ್ತಡಕ್ಕೆ ಸಿಲುಕಿತು. ಪಂದ್ಯ ಟೈ ಆಗಿ ಸೂಪರ್ ಓವರ್ ಅವಕಾಶ ಸಿಗಬಹುದು ಎಂದು ಎಂದೆಣಿಸುತ್ತಿದ್ದಾಗ, ಅಬಾಟ್ ಎಸೆದ ಎಸೆತವನ್ನು ಲಾಂಗ್ ಆಫ್ ನತ್ತ ಬಾರಿಸಿದ ಅಲಿ 1 ರನ್ ಗಳಿಸುವ ಮೂಲಕ ಇಂಗ್ಲೆಂಡ್ ರೋಚಕ ಜಯ ಸಾಧಿಸಿತು. ಅಂತಿಮವಾಗಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

ಟಿ20 ವಿಶ್ವಕಪ್ ಇತಿಹಾಸದ ದಾಖಲೆಯ ಚೇಸಿಂಗ್ ಮೂಲಕ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 2 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿತು. ಇದರಿಂದ ಟೂರ್ನಿಯ ಮೊದಲ ಜಯ ಕಂಡ ಆಂಗ್ಲ ಪಡೆ ಉಪಾಂತ್ಯ ಹಾದಿ ಜೀವಂತವಾಗಿರಿಸಿಕೊಂಡಿದೆ. 83 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿದ ಜೆ ರೂಟ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com