
ಚೆನ್ನೈ: ಮಹಿಳಾ ಟಿ20 ವಿಶ್ವಕಪ್ ನ ಭಾನುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರ ತಂಡವನ್ನು ವೆಸ್ಟ್ ಇಂಡೀಸ್ ವನಿತೆಯರು 49 ರನ್ ಗಳ ಅಂತರದಿಂದ ಮಣಿಸಿದ್ದಾರೆ.
ಚೆನ್ನೈನ ಚೆಪಾಕ್ ನಲ್ಲಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ವಿಂಡೀಸ್ ಪರ ಹೆಚ್ ಕೆ ಮ್ಯಾಥ್ಯೂಸ್ 41 ರನ್ ಗಳಿಸಿದರೆ, ಟೇಲರ್ 40 ರನ್ ಗಳಿಸಿ ವಿಂಡೀಸ್ ನ ಸವಾಲಿನ ಮೊತ್ತಕ್ಕೆ ಕಾರಣರಾದರು. ಇನ್ನು ಬಾಂಗ್ಲಾ ಪರ ನಹೀದಾ ಅಖ್ತರ್ 3 ವಿಕೆಟ್ ಪಡೆದರೆ, ರುಮಾನ ಅಹ್ಮದ್ 1 ವಿಕೆಟ್ ಪಡೆದರು.
ಬಳಿಕ ವಿಂಡೀಸ್ ವನಿತೆಯರು ನೀಡಿದ 149 ರನ್ ಗಳ ಮೊತ್ತವನ್ನು ಬೆನ್ನುಹತ್ತಿದ ಬಾಂಗ್ಲಾ ವನಿತೆಯರು 18.3 ಓವರ್ ಗಳಲ್ಲಿ ಕೇವಲ 99 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 49 ರನ್ ಗಳ ಅಂತರದಿಂದ ಶರಣಾದರು. ಬ್ಯಾಟಿಂಗ್ ನಲ್ಲಿ 40 ರನ್ ಸಿಡಿಸಿ, ಬೌಲಿಂಗ್ ವೇಳೆ 3 ವಿಕೆಟ್ ಕಬಳಿಸಿದ ವೆಸ್ಟ್ ಇಂಡೀಸ್ ನ ಸ್ಟಾಫನಿ ಟೇಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement