ಪಿಸಿಬಿಗೆ ವಕಾರ್ ಯೂನಿಸ್ ಸೋಲಿನ ವರದಿ

ಕಳಪೆ ಪ್ರದರ್ಶನದಿಂದಾಗಿ ಟಿ20 ವಿಶ್ವಕಪ್ ಸರಣಿಯ ಲೀಗ್ ಹಂತದಲ್ಲೇ ಮುಗ್ಗರಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಇದೀಗ..
ಕೋಚ್ ವಕಾರ್ ಯೂನಿಸ್ ಮತ್ತು ನಾಯಕ ಶಾಹಿದ್ ಅಫ್ರಿದಿ
ಕೋಚ್ ವಕಾರ್ ಯೂನಿಸ್ ಮತ್ತು ನಾಯಕ ಶಾಹಿದ್ ಅಫ್ರಿದಿ

ಕರಾಚಿ: ಕಳಪೆ ಪ್ರದರ್ಶನದಿಂದಾಗಿ ಟಿ20 ವಿಶ್ವಕಪ್ ಸರಣಿಯ ಲೀಗ್ ಹಂತದಲ್ಲೇ ಮುಗ್ಗರಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ಪಾಕ್ ಆಟಗಾರರ ಹೀನಾಯ ಪ್ರದರ್ಶನ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇನ್ನು ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ ಟೂರ್ನಿಯಲ್ಲಿನ ತಂಡದ ಕಳಪೆ ಪ್ರದರ್ಶನದ ಕುರಿತು ಅಸಮಾಧಾನಗೊಂಡಿರುವ ಕೋಚ್ ವಕಾರ್ ಯೂನಿಸ್, ಪಿಸಿಬಿಗೆ ತಮ್ಮ ವರದಿ ನೀಡಿದ್ದಾರೆ.  ಮಂಗಳವಾರ ಕರಾಚಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶಹರ್ಯಾರ್ ಖಾನ್ ರನ್ನು ಭೇಟಿ ಮಾಡಿದ್ದ ವಕಾರ್ ಯೂನಿಸ್ ತಮ್ಮ ವರದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವಕಾರ್ ನೀಡಿರುವ ವರದಿಯಲ್ಲಿ ಆಟಗಾರರ ಕುರಿತು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಂಡದಲ್ಲಿ ಕೋಚ್ ಮಾತಿಗೆ ಯಾರು ಬೆಲೆ ನೀಡುತ್ತಿಲ್ಲ ಎಂದು ತಮ್ಮ  ಅಸಮಾಧಾನವನ್ನು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ತಂಡದ ಆಟಗಾರರು ಕೋಚ್‌ ಹೇಳಿದ ಯಾವ ಮಾತುಗಳನ್ನು ಕೇಳುವುದಿಲ್ಲ. ಜತೆಗೆ ಪಂದ್ಯದ ದಿನ ರೂಪಿಸಿದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿಯೂ ನಿರ್ಲಕ್ಷ ತೋರುತ್ತಾರೆ. ಕೆಲ  ಆಟಗಾರರು ಕೋಚ್‌ ತೀರ್ಮಾನಗಳನ್ನು ಗೌರವಿಸುವುದಿಲ್ಲ. ಎಲ್ಲಾ ವಿಚಾರಗಳಲ್ಲೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ.  ಅಭ್ಯಾಸಕ್ಕೂ ಸರಿಯಾಗಿ ಹಾಜರಾಗುವುದಿಲ್ಲ. ತಮಗೆ  ತೋಚಿದ ಹಾಗೆ  ನಡೆದುಕೊಳ್ಳುತ್ತಾರೆ ಇದು ತಂಡದ ಶಿಸ್ತಿನ ಮೇಲೆ ಪರಿಣಾಮ ಬೀರಿದ್ದು, ಇದೇ ಸೋಲಿಗೆ ಪ್ರಮುಖ ಕಾರಣ ಎಂದು ವಕಾರ್‌ ತಮ್ಮ ವರದಿಯಲ್ಲಿ ಗಂಭೀರ ಆರೋಪ  ಮಾಡಿದ್ದಾರೆ.

ಇನ್ನು ನಾಯಕ ಅಫ್ರಿದಿ ವರ್ತನೆ ಬಗ್ಗೆಯೂ ವಕಾರ್‌ ಬೇಸರ ವ್ಯಕ್ತಪಡಿಸಿದ್ದು, ತಂಡವನ್ನು ಮುನ್ನಡೆಸಲು ಅಫ್ರಿದಿ ಯೋಗ್ಯರಲ್ಲ. ನಾಯಕನಾಗಿ ಅವರು ತೆಗೆದುಕೊಳ್ಳುವ ಕೆಲ ನಿರ್ಧಾರಗಳು  ತಂಡದ ಯಶಸ್ಸಿಗೆ ಮಾರಕವಾಗುವಂತಿರುತ್ತವೆ. ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ  ಹರೂನ್‌ ರಶೀದ್‌ ಅವರು ತಂಡದ ಆಯ್ಕೆ ವೇಳೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.  ಬದಲಾಗಿ ನಾಯಕ ಅಫ್ರಿದಿ ಸೂಚಿಸಿದ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು ಎಂದು ವಕಾರ್ ಆರೋಪಿಸಿದ್ದಾರೆ.

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ನೀರಸ ಪ್ರದರ್ಶನ ನೀಡುತ್ತಿದ್ದು, ಇತ್ತೀಚೆಗೆ ನಡೆದ ಇಂಗ್ಲೆಂಡ್‌, ನ್ಯೂಜಿಲೆಂಡ್‌ ವಿರುದ್ಧದ ಸರಣಿಗಳು ಹಾಗೂ ಏಷ್ಯಾಕಪ್‌ ಮತ್ತು ವಿಶ್ವ  ಟ್ವೆಂಟಿ–20 ಟೂರ್ನಿಗಳಲ್ಲಿ ನೀರಸ ಆಟ ಆಡಿ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ತಂಡದ ವೈಫಲ್ಯಕ್ಕೆ ಕಾರಣ ಪತ್ತೆ ಹಚ್ಚಲು ಪಿಸಿಬಿ ಇತ್ತೀಚೆಗೆ  ತನಿಖಾ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿತ್ತು. ಈ  ಸಮಿತಿಯಲ್ಲಿ ಟೆಸ್ಟ್‌ ತಂಡದ ನಾಯಕ ಮಿಸ್ಬಾ ಉಲ್‌ ಹಕ್‌ ಮತ್ತು ಹಿರಿಯ ಆಟಗಾರ ಯೂನಿಸ್‌ ಖಾನ್‌ ಅವರೂ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com