
ಮುಂಬೈ: ನ್ಯೂಜಿಲೆಂಡ್'ನ್ನು 6 ರನ್ ಗಳಿಂದ ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ವನಿತೆಯರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್'ಗೆ ಪ್ರವೇಶ ಪಡೆದಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ ವನಿತೆಯರ ತಂಡ ಬ್ರಿಟ್ನಿ ಕೂಪರ್ ಅವರ (48 ಕ್ಕೆ 61) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ 6 ವಿಕೆಟ್ ಗಳ ನಷ್ಟಕ್ಕೆ 146 ರನ್ ಗಳನ್ನು ಗಳಿಸಿತ್ತು.
ವೆಸ್ಟ್ ಇಂಡೀಸ್ ನೀಡಿದ 147 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ವನಿತೆಯರು ಆರಂಭಿಕ ಆಘಾತ ಅನುಭವಿಸಿದ್ದರು. ಬೌಲಿಂಗ್ ನಲ್ಲಿ ಮಿಂಚಿದ್ದ ಸೀಫಿ ಡಿವಿನ್ ಬ್ಯಾಟಿಂಗ್ ನಲ್ಲೂ ಅಬ್ಬರಿಸಿದ್ದರು.
ಇನ್ನು ಆರಂಭಿಕ ಆಟಗಾರರಾದ ಸೂಜಿ ಬೇಟ್ಸ್ (12), ರಾಚೆಲ್ ಪ್ರೀಸ್ಟ್ (6) ಅವರು ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸಾರಾ (34), ಆಮಿ (24) ಗೆಲುವಿನ ದಡದತ್ತ ಕೊಂಡೊಯ್ಯುವ ಮುನ್ಸೂಚನೆ ನೀಡಿದರಾದರೂ ನಂತರ ಬಂದ ಯಾವ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್ ಗಳಿಗೆ 8 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಟ್ ಆಟಗಾರ್ತಿಯರು 137 ರನ್ ಗಳಿಸಿದರು. ಆ ಮೂಲಕ ವೆಸ್ಟ್ ಇಂಡೀಸ್ ತಂಡ 6ರನ್ ಗಳಿಂದ ಮಣಿಸಿ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆಯಿತು.
ಸೆಮೀಸ್ ನಲ್ಲಿ ಗೆದ್ದಿರುವ ವಿಂಡೀಸ್ ವನಿತೆಯರು ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಮಹಿಳೆಯರನ್ನು ಎದುರಿಸಲಿದ್ದಾರೆ.
Advertisement