
ನವದೆಹಲಿ: ಬೌಲರ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಎಂಬ ಪ್ರತಿಭಾವಂತ ಆಟಗಾರನ ಪ್ರಾಣಕ್ಕೆ ಎರವಾದ ಘಟನೆ ಇನ್ನೂ ಹಸಿರಾಗಿರುವಂತೆಯೇ ಅಂತಹ ಸಾಕಷ್ಟು ಪ್ರಕರಣಗಳು ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ.
ನಿನ್ನೆ ವಿಶಾಖಪಟ್ಟಣಂನಲ್ಲಿ ದೆಹಲಿ ಡೇರ್ ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ದೆಹಲಿ ತಂಡದ ಕಾಲ್ಟರ್ ನೈಲ್ ಎಸೆದ ಬೌನ್ಸರ್ ಒಂದು ಬ್ಯಾಟಿಂಗ್ ಮಾಡುತ್ತಿದ್ದ ಜಾರ್ಜ್ ಬೈಲಿ ತಲೆಗೆ ಬಲವಾಗಿ ತಾಗಿದೆ. ಅದೃಷ್ಟವಶಾತ್ ಜಾರ್ಜ್ ಬೈಲಿ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ಅವರಿಗೆ ಹೆಚ್ಚೇನು ತೊಂದರೆಯಾಗಲಿಲ್ಲ. ಕಾಲ್ಟರ್ ನೈಲ್ ಎಸೆದ ಮಾರಕ ಬೌನ್ಸರ್ ಜಾರ್ಜ್ ಬೈಲಿ ಅವರ ಹೆಲ್ಮೆಟ್ ಅನ್ನೇ ತಲೆಯಿಂದ ಹಾರಿಸಿದೆ.
ಕಾಲ್ಟನ್ ನೈಲ್ ಎಸೆದ ಬೌನ್ಸರ್ ಅನ್ನು ಜಾರ್ಜ್ ಬೈಲಿ ಕಟ್ ಮಾಡಲು ಹೋದರು. ಆದರೆ ಬಾಲ್ ಅವರ ಗ್ಲೌಸ್ ಗೆ ತಾಗಿ ಬಳಿಕೆ ಅವರ ಹೆಲ್ಮೆಟ್ ತುದಿಗೆ ಬಲವಾಗಿ ಬಿದ್ದಿದೆ. ಇದರಿಂದ ಬೈಲಿ ತಲೆಯಲ್ಲಿದ್ದ ಹೆಲ್ಮೆಟ್ ಕೂಡಲೇ ಕೆಳಗೆ ಬಿದ್ದಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿದ್ದ ಎಲ್ಲ ಆಟಗಾರರೂ ಅವಾಕ್ಕಾದರು. ಕೂಡಲೇ ಬೈಲಿ ಹತ್ತಿರಕ್ಕೆ ಬಂದು ಅವರಿಗೇನಾಯಿತು ಎಂದು ನೋಡಿದರು.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಒಂದು ವೇಲೆ ಹೆಲ್ಮೆಟ್ ಇಲ್ಲದೇ ಹೋಗಿದ್ದರೆ ಜಾರ್ಜ್ ಬೈಲಿ ಅವರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಕೂಡ ಕಷ್ಟವಾಗುತ್ತಿತ್ತೇನೋ. ಪಂದ್ಯದ ಬಳಿಕ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಜಾರ್ಜ್ ಬೈಲಿ ಅದೃಷ್ಟವಶಾತ್ ನಾನು ಹೊಸ ಹೆಲ್ಮೆಟ್ ಧರಿಸಿದ್ದೆ ಎಂದು ಚಟಾಕಿ ಹಾರಿಸಿದರು.
Advertisement