
ಹೈದರಾಬಾದ್: ಬಹು ನಿರೀಕ್ಷಿತ ಐಪಿಎಲ್ 2017 ಚುಟುಕು ಕ್ರಿಕೆಟ್ ಟೂರ್ನಿ ಆರಂಭಗೊಂಡಿದ್ದು, ಬುಧವಾರ ಹೈದರಾಬಾದ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ವಿರುದ್ಧ 35 ರನ್ ಗಳ ಸೋಲು ಕಂಡಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಾಬಲ್ಯ ತೋರಿದ ಹೈದರಾಬಾದ್ ತಂಡ ಅರ್ಹವಾಗಿಯೇ ಗೆಲುವು ದಾಖಲಿಸಿದ್ದು, ಕಳಪೆ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ದುರ್ಬಲ ಬ್ಯಾಟಿಂಗ್ ನಿಂದ ಬಳಲಿದ ಬೆಂಗಳೂರು ತಂಡ 35 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಹೆನ್ರಿಕ್ಸ್ (52 ರನ್) ಮತ್ತು ಯುವರಾಜ್ ಸಿಂಗ್ (62 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತು. ಆ ಮೂಲಕ ಬೆಂಗಳೂರು ತಂಡಕ್ಕೆ ಗೆಲ್ಲಲು 208 ರನ್ ಗಳ ಬೃಹತ್ ಗುರಿ ನೀಡಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿಗೆ ಕ್ರಿಸ್ ಗೇಯ್ಲ್ (32 ರನ್) ಮತ್ತು ಮನ್ ದೀಪ್ ಸಿಂಗ್ (24 ರನ್) ಉತ್ತಮ ಆರಂಭ ನೀಡಿದರಾದರೂ, ತಂಡದ ಮೊತ್ತ 60 ರನ್ ಗಳಾಗುವಷ್ಟರಲ್ಲಿ ಇಬ್ಬರೂ ವಿಕೆಟ್ ಒಪ್ಪಿಸಿದರು. ಬಳಿಕ ಕಟ್ಟಿಂಗ್ ಬೌಲಿಂಗ್ ನಲ್ಲಿ 31 ರನ್ ಗಳಿಸಿದ ಜಾದವ್ ಔಟ್ ಆದರೆ 30 ರನ್ ಗಳಿಸಿದ್ದ ಹೆಡ್ ರಷೀದ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಚಿನ್ ಬೇಬಿ ಕೇವಲ 1 ರನ್ ಗಳಿಸಿ ಬಿಪುಲ್ ಶರ್ಮಾ ಬೌಲಿಂಗ್ ನಲ್ಲಿ ಔಟ್ ಆದರು. ನಂತರ ಬಿನ್ನಿ (11 ರನ್), ಎಸ್ ಅರವಿಂದ್ (0 ರನ್), ಮೈಲ್ಸ್ (6 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಬೆಂಗಳೂರು ತಂಡ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 172 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಆರ್ ಸಿಬಿ 35 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.
Advertisement