3ನೇ ಟೆಸ್ಟ್: ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ್ದಾರೆ...
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ್ದಾರೆ. 
ಪಲ್ಲೆಕಿಲೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸದ್ಯ ಎರಡನೇ ದಿನದ ಊಟದ ವೇಳೆ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 487 ರನ್ ಪೇರಿಸಿದೆ. ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ 93 ಎಸೆತಗಳಲ್ಲಿ 7 ಸಿಕ್ಸರ್ ಸೇರಿದಂತೆ ಅಜೇಯ 108 ರನ್ ಗಳಿಸಿದ್ದು 3 ರನ್ ಸಿಡಿಸಿರುವ ಉಮೇಶ್ ಯಾದವ್ ಸಾಥ್ ನೀಡುತ್ತಿದ್ದಾರೆ. 
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಜೋಡಿ 188 ರನ್ ಗಳ ಭರ್ಜರಿ ಜತೆಯಾಟ ನೀಡಿತು. ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ 85 ರನ್ ಗಳಿಸಿದ್ದಾಗ ಪುಷ್ಪಕುಮಾರ್ ಎಸೆತದಲ್ಲಿ ಕರುಣರತ್ನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶಿಖರ್ ಧವನ್ 123 ಎಸೆತಗಳನ್ನು ಎದುರಿಸಿ 17 ಬೌಂಡರಿಗಳಿಂದ ಒಟ್ಟು 119 ರನ್ ಗಳಿಸಿ ಔಟ್ ಆದರು. ಇನ್ನು ಚೇತೇಶ್ವರ ಪೂಜಾರ 8, ಅಜಿಂಕ್ಯ ರಹಾನೆ 17, ವಿರಾಟ್ ಕೊಹ್ಲಿ 42, ರವಿಚಂದ್ರನ್ ಅಶ್ವಿನ್ 31 ರನ್ ಗಳಿಸಿ ಔಟಾಗಿದ್ದಾರೆ. ಎರಡನೇ ದಿನದಾಟ ಪ್ರಾರಂಭಿಸಿದ ವೃದ್ಧಿಮಾನ್ ಸಹಾ 16 ರನ್ ಗಳಿಸಿ ಔಟಾದರೆ, ಕುಲ್ದೀಪ್ ಯಾದವ್ 26 ರನ್ ಗಳಿಸಿ ಔಟಾದರು. 
ಶ್ರೀಲಂಕಾ ಪರ ಸಂದಕನ್ 4, ಪುಷ್ಪಕುಮಾರ 3 ಮತ್ತು ಫರ್ನಾಂಡೋ 2 ವಿಕೆಟ್ ಪಡೆದಿದ್ದಾರೆ. 
ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಅದಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com