2ನೇ ಟಿ20 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ 88 ರನ್ ಗಳ ಭರ್ಜರಿ ಜಯ

ಶ್ರೀಲಂಕಾ ವಿರುದ್ಧ ಇಂದೋರ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 88 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಶತಕ ಸಿಡಿಸಿದ ರೋಹಿತ್ ಶರ್ಮಾ
ಶತಕ ಸಿಡಿಸಿದ ರೋಹಿತ್ ಶರ್ಮಾ

ಇಂದೋರ್: ಶ್ರೀಲಂಕಾ ವಿರುದ್ಧ ಇಂದೋರ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 88 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಶ್ರೀಲಂಕಾ ವಿರುದ್ಧ ಪಾರಮ್ಯ ಮೆರೆದ ಟೀಂ ಇಂಡಿಯಾ ಅರ್ಹವಾಗಿಯೇ ಪಂದ್ಯ ಜಯಿಸಿತು. ಭಾರತ ನೀಡಿದ 261 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಶ್ರೀಲಂಕಾ ಕೇವಲ 17.2 ಓವರ್ ಗಳಲ್ಲಿ 172 ರನ್ ಗಳಿಸಿ ಆಲ್ ಔಟ್ ಆಯಿತು.  ಶ್ರೀಲಂಕಾ ಪರ ಕುಸಾಲ್ ಪೆರೇರಾ (77 ರನ್), ಉಪುಲ್ ತರಂಗಾ (47) ಉತ್ತಮ ಪ್ರದರ್ಶನ ನೀಡಿದರು. ಆದರೆ ಪೆರೇರಾ ಔಟ್ ಆದ ಬಳಿಕ ನಿಗದಿತ ಸಮಯದಲ್ಲಿ ಲಂಕಾದ ವಿಕೆಟ್ ಉರುಳುತ್ತಾ ಹೋಗಿದ್ದು, ಆ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಇನ್ನು ಲಂಕಾ ದಾಂಡಿಗರ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬೌಲರ್ ಗಳು ನಿಗದಿತವಾಗಿ ವಿಕೆಟ್ ಪಡೆಯುವ ಮೂಲಕ ಲಂಕಾ ಪತನಕ್ಕೆ ಕಾರಣರಾದರು. ಪ್ರಮುಖವಾಗಿ ಚಾಹಲ್ 4 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 3 ವಿಕೆಟ್ ಪಡೆದರು. ಉನಾದ್ಕತ್  ಮತ್ತು ಪಾಂಡ್ಯಾ ತಲಾ 1 ವಿಕೆಟ್ ಪಡೆದರು.

ಈ ಪಂದ್ಯದ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-0 ಅಂತರದಲ್ಲಿ ಈಗಾಗಲೇ ಜಯಿಸಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಹಾಗೂ ಕೆಎಲ್ ರಾಹುಲ್ ಅವರ ಅಮೋಘ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು. 3ನೇ ವಿಕೆಟ್ ನಲ್ಲಿ ಧೋನಿ ಒಂದಷ್ಟು  ಉತ್ತಮ ಆಟದ ಪ್ರದರ್ಶನ ನೀಡಿದರು. ಇನ್ನಿಂಗ್ಸ್ ಕೊನೆಯಲ್ಲಿ ಲಂಕಾ ತಂಡ ಭಾರತದ 3 ವಿಕೆಟ್ ಗಳನ್ನು ತ್ವರಿತಗತಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಯಿತಾದರೂ ಭಾರತದ ಬೃಹತ್ ಮೊತ್ತಕ್ಕೆ ಅಡ್ಡಿಯಾಗಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com