ಕೊಹ್ಲಿಯನ್ನು ತಡೆಯಲು ರಣತಂತ್ರ ಹುಡುಕಬೇಕು: ಆಸ್ಟ್ರೇಲಿಯಾ ಕೋಚ್ ಡರೇನ್ ಲೆಹ್ಮನ್

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದು, ಅವರನ್ನು ತಡೆಯಲು ಆಸ್ಟ್ರೇಲಿಯಾ ತಂಡ ರಣತಂತ್ರ ಹುಡುಕಬೇಕು ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಡೆರೇನ್ ಲೆಹ್ಮನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದು, ಅವರನ್ನು ತಡೆಯಲು ಆಸ್ಟ್ರೇಲಿಯಾ ತಂಡ ರಣತಂತ್ರ ಹುಡುಕಬೇಕು ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಡೆರೇನ್ ಲೆಹ್ಮನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಆಸ್ಟ್ರೇಲಿಯಾ ತಂಡದ ಕೋಚ್ ಡೆರೇನ್ ಲೆಹ್ಮನ್ ಹೇಳಿಕೆ ಭಾರಿ ಕುತೂಹಲ  ಮೂಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಲೆಹ್ಮನ್, ಭಾರತ ಪ್ರವಾಸ ನಿಜಕ್ಕೂ ಕುತೂಹಲಕಾರಿಯಾಗಿರುತ್ತದೆ. ಭಾರತ ತಂಡವನ್ನು ಎದುರಿಸಲು ಆಸ್ಟ್ರೇಲಿಯಾ ತಂಡ ಸಕಲ ರೀತಿಯಲ್ಲೂ ಸಿದ್ಧತೆ ನಡೆಸಿದೆ ಎಂದು  ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕುರಿತಂತೆ ಮಾತನಾಡಿದ ಲೆಹ್ಮನ್, ಪ್ರಸ್ತುತ ವಿರಾಟ್ ಕೊಹ್ಲಿ ಅದ್ಬುತ ಫಾರ್ಮ್ ನಲ್ಲಿದ್ದಾರೆ.  ಕೊಹ್ಲಿ ಆರ್ಭಟಕ್ಕೆ ಕಡಿವಾಣ ಹಾಕಲು ಉತ್ತಮ ಬೌಲಿಂಗ್ ನೊಂದಿಗೆ ನಮಗೆ  ಅದೃಷ್ಟದ ನೆರವೂ ಬೇಕು. ಅವರ ಆಕ್ರಮಣಕಾರಿ ಆಟ ಎದುರಾಳಿ ತಂಡದ ನಿದ್ದೆಗೆಡಿಸುವುದರಲ್ಲಿ ಅನುಮಾನವೇ ಇಲ್ಲ. 28 ವರ್ಷದ ವಿರಾಟ್‌ ಕೊಹ್ಲಿ ಶೇ.60.76 ಸರಾಸರಿಯಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ 15 ಶತಕ ಬಾರಿಸಿದ್ದಾರೆ.  ಅದರಲ್ಲಿ 6 ಶತಕ ಆಸ್ಟ್ರೇಲಿಯಾ ವಿರುದ್ಧ ಗಳಿಸಿರುವುದು ವಿಶೇಷ. ತರಬೇತಿ ಸಮಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಕೊಹ್ಲಿ ಬ್ಯಾಟಿಂಗ್‌ ವಿಡಿಯೊಗಳನ್ನು ತೋರಿಸಲಾಗುತ್ತಿದೆ. ಆ ಮೂಲಕ ಅವರ ಬ್ಯಾಟಿಂಗ್ ನಲ್ಲಿನ  ದೋಷಗಳನ್ನು ಪತ್ತೆ ಮಾಡಿ ಅದರ ಕುರಿತಂತೆ ಅವರ ರನ್‌ ಗಳಿಕೆಗೆ ಕಡಿವಾಣ ಹಾಕಲು ತಂತ್ರ ರೂಪಿಸುತ್ತಿದ್ದೇವೆ ಎಂದು ಲೆಹ್ಮನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ ಉತ್ತಮ ಬೌಲರ್ ಗಳಿದ್ದು, ಸ್ಪಿನ್ ವಿಭಾಗ ಈ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಹೀಗಾಗಿ ಎದುರಾಳಿ ತಂಡ ರನ್ ಗಳಿಸದಂತೆ ತಡೆ ಒಡ್ಡಬಲ್ಲ ಮತ್ತು ಒತ್ತಡ ಹೇರಬಲ್ಲ ಸಾಮರ್ಥ್ಯ ಆಸಿಸ್ ತಂಡಕ್ಕಿದೆ.  ಈ ಹಿಂದೆ ಮ್ಯಾಥ್ಯೂ ಹೇಡನ್ ಹಾಗೂ ಡೇಮಿಯನ್ ಮಾರ್ಟಿನ್ ರಂತಹ ಆಟಗಾರರಿದ್ದರು. ತಂಡ ಯಾವುದೇ ಹಂತದಲ್ಲಿ ಕುಸಿದರೂ ಉತ್ತಮ ಬೆಂಬಲ ನೀಡಿ ಆಡುತ್ತಿದ್ದರು. ಈಗ ಅಂತಹ ಆಟಗಾರರ ಉದಯವಾಗುತ್ತದೆ ಎಂದು  ಭಾವಿಸುತ್ತೇನೆ ಎಂದು ಲೆಹ್ಮನ್ ಹೇಳಿದ್ದಾರೆ.

ಇದೇ ಫೆಬ್ರವರಿ 23ರಿಂದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಪುಣೆಯಲ್ಲಿ ಆರಂಭವಾಗಲಿದೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧದ 4–0 ಸರಣಿ ಗೆಲುವು ಸಾಧಿಸಿರುವ ಭಾರತ  ತಂಡ ಈ ಸರಣಿಯನ್ನೂ ಗೆಲ್ಲುವ ವಿಶ್ವಾಸವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com