
ನವದೆಹಲಿ: ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡದ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ತೆರವಾದ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಆರಿಸುವ ಹೊಣೆಗಾರಿಕೆಯನ್ನು ಹಿರಿಯ ವಕೀಲ ಫಾಲಿ ನಾರಿಮನ್ ಅವರಿಗೆ ನೀಡಲಾಗಿತ್ತು. ಆದರೆ ವಕೀಲ ಫಾಲಿ ಎಸ್ ನಾರಿಮನ್ ಅವರು ಹೊಣೆಗಾರಿಕೆಯನ್ನು ನಿರಾಕರಿಸಿದ್ದಾರೆ.
2009ರಲ್ಲಿ ಬಿಸಿಸಿಐನ ಪರವಾಗಿ ಹಿರಿಯ ವಕೀಲ ಫಾಲಿ ನಾರಿಮನ್ ಅವರು ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಇದೀಗ ಬಿಸಿಸಿಐಗೆ ಆಡಳಿತಾಧಿಕಾರಿಗಳ ನೇಮಕ ಹೊಣೆಗಾರಿಕೆ ವಹಿಸಿಕೊಳ್ಳುವುದು ಸೂಕ್ತವಲ್ಲ ಎಂದು ಫಾಲಿ ಎಸ್ ನಾರಿಮನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು, ನಾರಿಮನ್ ಅವರು ಒಪ್ಪುವುದಾದರೆ ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ಆರಿಸುವ ಹೊಣೆಗಾರಿಕೆಯನ್ನು ನೀಡುತ್ತೇವೆ ಎಂದು ಹೇಳಿದ್ದರು.
ಅಂತೆಯೇ ಫಾಲಿನಾರಿಮನ್ ಅವರೊಂದಿಗೆ ಇತರೆ ಇಬ್ಬರು ಹಿರಿಯ ವಕೀಲರನ್ನು ನೇಮಿಸಲಾಗಿದ್ದು, ಹಿರಿಯ ವಕೀಲ ಅನಿಲ್ ದಿವಾನ್ ಹಾಗೂ ಆ್ಯಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯನ್ ಅವರು ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ನೇಮಿಕ ಮಾಡುವ ಕಾರ್ಯ ನಿರ್ವಹಿಸಲಿದ್ದಾರೆ.
"ಹೊಸ ಪದಾಧಿಕಾರಿಗಳ ನೇಮಕವಾಗುವವರೆಗೆ ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿಗಳು ಕ್ರಮವಾಗಿ ಹಂಗಾಮಿ ಅಧ್ಯಕ್ಷ, ಹಂಗಾಮಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವರು. ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರು ಉಸ್ತುವಾರಿ ನೋಡಿಕೊಳ್ಳುವರು" ಎಂದೂ ನ್ಯಾಯಪೀಠ ತಿಳಿಸಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿದ್ದು, ಅಂದು ಬಿಸಿಸಿಐಗೆ ಹೊಸ ಅಧ್ಯಕ್ಷರು ಯಾರು ಎಂಬುದು ಪ್ರಕಟವಾಗುವ ನಿರೀಕ್ಷೆ ಇದೆ.
Advertisement