
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿದ್ದ ಅಜಯ್ ಶಿರ್ಕೆ ಅವರ ಹೊಸದೊಂದು ವಿವಾದದಲ್ಲಿ ಸಿಲುಕಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಪತ್ರ ಬರೆಯುವ ಮೂಲಕ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಂದ ವಜಾಗೊಂಡಿದ್ದ ಬಿಸಿಸಿಐನ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಅವರು ವಜಾ ಆದೇಶದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ನ ಮುಖ್ಯಸ್ಥ ಗಿಲ್ಸ್ ಕ್ಲಾರ್ಕ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಸುಪ್ರೀಂ ಆದೇಶದಂತೆ ತಾವು ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದಿದ್ದು, ಪ್ರಸ್ತುತ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಏಕದಿನ ಸರಣಿ ಕುರಿತಂತೆ ಅನಿಶ್ಚಿತತೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಸರಣಿ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ಇಸಿಬಿ ಬಿಸಿಸಿಐಗೆ ಇ-ಮೇಲ್ ರವಾನಿಸಿದ್ದು, "ಶಿರ್ಕೆ ತನಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಅವರು ಬಿಸಿಸಿಐ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿರುವ ವಿಷಯ ತಿಳಿಯಿತು. ಅವರು ಇಂಗ್ಲೆಂಡ್ ಸರಣಿ ನಡೆಯುವ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು.
ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಈ ಹಿಂದಿನಂತೆಯೇ ಸೂಕ್ತ ಭದ್ರತೆ, ದಿನ ಭತ್ಯೆ, ಹೊಟೇಲ್ ಬಿಲ್ಸ್ ಹಾಗೂ ಎಲ್ಲ ಸಮಯದಲ್ಲಿ ಸಾರಿಗೆ ವ್ಯವಸ್ಥೆ ಸಿಗಲಿದೆ ಎಂಬ ಬಗ್ಗೆ ಖಚಿತಪಡಿಸಬೇಕು. ಬಿಸಿಸಿಐ ಎಲ್ಲಿ ಪಂದ್ಯಗಳು ನಡೆಯಬೇಕೆಂದು ನಿರ್ಧರಿಸುತ್ತದೆ. ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಯಿದೆಯೇ ಎಂಬ ಕುರಿತು ದಯವಿಟ್ಟು ಮಾಹಿತಿ ನೀಡಿ ಎಂದು ಬಿಸಿಸಿಐ ಸಿಇಒಗೆ ಬರೆದ ಇ-ಮೇಲ್‌ನಲ್ಲಿ ಇಸಿಬಿ ಮುಖ್ಯಸ್ಥರು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈ ಬಗ್ಗೆ ಅಜಯ್ ಶಿರ್ಕೆ ಅವರಲ್ಲಿ ವಿವರ ಕೇಳಿದಾಗ ಅವರು ವರದಿಯನ್ನು ನಿರಾಕರಿಸಿದ್ದಾರೆ. ಅಲ್ಲದೆ ಇಸಿಬಿ ಮುಖ್ಯಸ್ಥರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.
Advertisement