
ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ನ ನಿಯಮಾವಳಿಗಳಲ್ಲಿ ಐಸಿಸಿ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಈ ಹಿಂದೆ ಕ್ರಿಕೆಟ್ "ಪಿತಾಮಹಾ" ಎಂಸಿಎ ರೂಪಿಸಿದ್ದ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಎಂಸಿಎ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಪ್ರಮುಖವಾಗಿ ಬ್ಯಾಟ್ ನ ಗಾತ್ರ, ರನೌಟ್ ನಿಯಮಾವಳಿ, ಸ್ಟಂಪಿಂಗ್ ನಿಯಮ ಹಾಗೂ ಮೈದಾನದಲ್ಲಿ ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಕಳಿಸುವ ಅಧಿಕಾರವನ್ನು ಅಂಪೈರ್ ಗಳಿಗೆ ನೀಡುವ ಬಗ್ಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ನೂತನ ಶಿಫಾರನಿನ ಪ್ರಕಾರ ಬ್ಯಾಟ್ ಗಾತ್ರದಲ್ಲಿ ವ್ಯತ್ಯಾಸವಾಗಲಿದ್ದು, ಅಂಚುಗಳ ದಪ್ಪ 40 ಮಿಲಿ ಮೀಟರ್ ಹಾಗೂ ಬ್ಲೇಡ್ ನ ದಪ್ಪ 67 ಮಿಲಿ ಮೀಟರ್ ಮೀರಬಾರದು ಎಂದು ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಹಲವು ಆಟಗಾರರು 50 ಮಿಲಿ ಮೀಟರ್ ಗಾತ್ರದ ಬ್ಯಾಟ್ ಗಳನ್ನು ಬಳಕೆ ಮಾಡುತ್ತಿದ್ದು, ಇನ್ಮುಂದೆ ಅದರ ಬಳಕೆಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷ ಹಾಗೂ ಹಾಲಿ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಹಲವು ಪ್ರಮುಖ ನಿಯಮಗಳಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಈ ನೂತನ ನಿಯಮದನ್ವಯ ಬ್ಯಾಟ್ಸ್‌ಮನ್ ಒಮ್ಮೆ ಕ್ರೀಸ್ ನಲ್ಲಿ ಬ್ಯಾಟ್ ಇಟ್ಟಿದ್ದರೆ ಸಾಕು, ಬೇಲ್ಸ್ ಹಾರುವಾಗ ಬ್ಯಾಟ್ ಗಾಳಿಯಲ್ಲಿದ್ದರೂ ಔಟ್ ಎಂದು ನಿರ್ಧರಿಸುವಂತಿಲ್ಲ ಎಂಬ ಬದಲಾವಣೆಯನ್ನೂ ತರಲಾಗುತ್ತಿದೆ. ಇದೇ ವೇಳೆ ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ಸಂದರ್ಭದಲ್ಲಿ ಫುಟ್ಬಾಲ್‌ನಂತೆ ಅಂಪೈರ್ ಕೆಂಪು ಕಾರ್ಡ್ ನೀಡಿ ಆತನನ್ನು ಮೈದಾನದಿಂದ ಹೊರಹಾಕುವ ಅಧಿಕಾರ ಸಹ ನೀಡಲಾಗುತ್ತಿದೆ. ಒಂದೊಮ್ಮೆ ಆಟಗಾರ ಕೆಂಪು ಕಾರ್ಡ್ ಪಡೆದರೆ ಆತ ಇಡೀ ಪಂದ್ಯದಿಂದಲೇ ಹೊರಬೀಳಲಿದ್ದಾನೆ ಎಂದು ಹೇಳಲಾಗಿದೆ.
Advertisement