
ಕಾರ್ಡಿಫ್: ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಹಾಗೂ ಮಹಮ್ಮದುಲ್ಲಾ ದಾಖಲೆ ಜೊತೆಯಾಟದ ನೆರವಿನಿಂದ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿದೆ.
ಅಚ್ಚರಿ ಫಲಿತಾಂಶದಿಂದಲೇ ಸುದ್ದಿಯಾಗುತ್ತಿದ್ದ ಬಾಂಗ್ಲಾದೇಶ ಇದೀಗ ತನ್ನ ಬ್ಯಾಟಿಂಗ್ ಬಲದಿಂದಾಗಿ ಪ್ರಬಲ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಇಂಗ್ಲೆಂಡ್ ನ ಕಾರ್ಡಿಫ್ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ನ್ಯೂಜಿಲೆಂಡ್ ನೀಡಿದ 266 ರನ್ ಗಳ ಗೆಲುವಿನ ಗುರಿಯನ್ನು ರೋಚಕವಾಗಿ ಮುಟ್ಟಿ ಗೆಲುವು ದಾಖಲಿಸಿದೆ. ಅಂತೆಯೇ ತಾನೂ ಕೂಡ ಸೆಮೀಸ್ ರೆಸ್ ಗೆ ಸಿದ್ಧವಾಗಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿತು. ನಾಯಕ ವಿಲಿಯಮ್ಸನ್ (57 ರನ್), ಟೇಲರ್ (63 ರನ್) ಅರ್ಧಶತಕಗಳು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಅಲ್ಪ ಕಾಣಿಕೆ ಕಿವೀಸ್ ಪಡೆ ಸವಾಲಿನ ಗುರಿ ಕಲೆ ಹಾಕಲು ನೆರವಾಯಿತು. ಇನ್ನು 266 ರನ್ ಗಳ ಗುರಿ ಬೆನ್ನುಹತ್ತಿದ ಬಾಂಗ್ಲಾದೇಶ ನಿಧಾನಗತಿಯಲ್ಲೇ ಬ್ಯಾಟಿಂಗ್ ಅರಂಭಿಸಿತಾದರೂ ಪಂದ್ಯದ ಅಂತಿಮ ಘಟ್ಟದಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮಹಮದುಲ್ಲಾ ದಾಖಲೆ ಜೊತೆಯಾಟ ಸಂಪೂರ್ಣವಾದಗಿ ಬದಲಿಸಿ ಬಿಟ್ಟಿತು.
ಈ ಜೋಡಿ ಬರೊಬ್ಬರಿ 224 ರನ್ ಗಳ ಜೊತೆಯಾಟ ನ್ಯೂಜಿಲೆಂಡ್ ತಂಡಕ್ಕೆ ಮುಳುವಾಯಿತು. ಶಕೀಬ್ ಅಲ್ ಹಸನ್ 114 ರನ್ ಗಳಿಸಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರೆ, ಮಹಮದುಲ್ಲಾ 102 ರನ್ ಗಳಿ ಅಜೇಯರಾಗಿ ಉಳಿದರು. ಹುಸೇನ್ 7 ರನ್ ಗಳಿಸಿ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡ 47.2 ಓವರ್ ಗಳಲ್ಲಿಯೇ 268 ರನ್ ಗಳಿಸಿ ಗೆಲುವು ಸಾಧಿಸಿತು. 112 ರನ್ ಗಳಿಸಿ ಬಾಂಗ್ಲಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಶಕೀಬ್ ಅಲ್ ಹಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement