ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಡಿಆರ್ ಎಸ್ ಅಳವಡಿಕೆ!

ಮಹತ್ವದ ಬೆಳವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಡಿಆರ್ ಎಸ್ ನಿಯಮ ಅಳವಡಿಕೆಗೆ ಐಸಿಸಿ ಆಸ್ತು ಎಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಮಹತ್ವದ ಬೆಳವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಡಿಆರ್ ಎಸ್ ನಿಯಮ ಅಳವಡಿಕೆಗೆ ಐಸಿಸಿ ಆಸ್ತು ಎಂದಿದೆ.

ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ ಮತ್ತೊಂದು ಮಹತ್ವದ ಕ್ರಿಕೆಟ್ ಸರಣಿಗೆ ಸಜ್ಜಾಗಿದ್ದು, 2017ನೇ ಸಾಲಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೂ ಆತಿಥ್ಯ ವಹಿಸಿದೆ. ಅಂತೆಯೇ ಮಹಿಳಾ  ಕ್ರಿಕೆಟ್ ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಐಸಿಸಿ ಈ ಭಾರಿಯ ಟೂರ್ನಿಯಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಸರಣಿಯಲ್ಲಿ ಅಂಪೈರ್ ಡಿಸಿಷನ್ ರಿವ್ಯೂ  ಸಿಸ್ಟಮ್-ಡಿಆರ್ ಎಸ್ ವ್ಯವಸ್ಥೆಯನ್ನು ಅಳವಡಿಸುವುದಾಗಿ ಘೋಷಣೆ ಮಾಡಿದೆ.

ಇದೇ ಜೂನ್ 24ರಿಂದ ಇಂಗ್ಲೆಂಡ್ ನಲ್ಲಿ ಮಹಿಳಾ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಈ ಪಂದ್ಯಾವಳಿಗೆ ಯುಕೆ ಆತಿಥ್ಯ ವಹಿಸಿಕೊಂಡಿದೆ. ಜಗತ್ತಿನ ಅಗ್ರ ಎಂಟು ಕ್ರಿಕೆಟ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು,  ಮುಂದಿನ ತಿಂಗಳ 23ರವರೆಗೆ ಟೂರ್ನಿ ನಡೆಯಲಿದೆ. ಟಾಪ್ 8 ತಂಡಗಳಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಭಾರತ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಯಲ್ಲಿ  ಪಾಲ್ಗೊಳ್ಳುತ್ತಿವೆ.

ಈಗಾಗಲೇ ಸರಣಿಯ ಅಭ್ಯಾಸ ಪಂದ್ಯಗಳು ಚಾಲ್ತಿಯಲ್ಲಿದ್ದು, ಜೂನ್ 24 ಶನಿವಾರದಿಂದ ಟೂರ್ನಿ ಆರಂಭವಾಗಲಿದೆ. ಭಾರತದ ಅಭಿಯಾನ ಕೂಡ ಇದೇ 24ರಿಂದ ಆರಂಭವಾಗಲಿದೆ.

31 ಪಂದ್ಯಗಳ ಪೈಕಿ 10 ಪಂದ್ಯಗಳಿಗೆ ಮಾತ್ರ ನೇರ ಪ್ರಸಾರದ ಅವಕಾಶ
ಇನ್ನು ಸರಣಿಯಲ್ಲಿ ಒಟ್ಟು 31 ಪಂದ್ಯಗಳನ್ನು ಆಡಿಸಲಾಗುತ್ತಿದ್ದು, ಈ ಪೈಕಿ ಕೇವಲ 10 ಪಂದ್ಯಗಳಿಗೆ ಮಾತ್ರ ಐಸಿಸಿ ನೇರ ಪ್ರಸಾರದ ಅವಕಾಶ ಕಲ್ಪಿಸಿದೆ. ಪ್ರಾಯೋಜಕರ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಹೇಳಲಾಗುತ್ತಿದೆ. ಇನ್ನು ಇದು ರೌಂಡ್‌ ರಾಬಿನ್‌ ಮಾದರಿಯ ಪಂದ್ಯಾವಳಿಯಾಗಿದ್ದು, ಲೀಗ್‌ ಹಂತದಲ್ಲಿ ಪ್ರತಿಯೊಂದು ತಂಡ ಉಳಿದ 7 ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿದೆ. ಮಿಥಾಲಿ ರಾಜ್‌ ನಾಯಕತ್ವದ  ಭಾರತ ತಂಡ ಜು. 24ರ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com