ಬಾಲ್ ವಿರುದ್ಧ ಬ್ಯಾಟ್ ಅಬ್ಬರಕ್ಕೆ ಬ್ರೇಕ್; ಕ್ರಿಕೆಟ್ ನಿಯಮಾವಳಿಗಳಲ್ಲಿ ಮಹತ್ತರ ಬದಲಾವಣೆ!

ಬ್ಯಾಟ್ಸಮನ್ ಗಳ ಅಬ್ಬರದಿಂದಾಗಿ ನೈಜ ಕ್ರಿಕೆಟ್ ನ ಅನುಭವವೇ ಕಳೆದು ಹೋಗಿರುವ ಈ ದಿನಗಳಲ್ಲಿ ಕ್ರಿಕೆಟ್ ಕ್ರೀಡೆಯಲ್ಲಿನ ನಿಯಮಾವಳಿಗಳಲ್ಲಿ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಬ್ಯಾಟ್ಸಮನ್ ಗಳ ಅಬ್ಬರದಿಂದಾಗಿ ನೈಜ ಕ್ರಿಕೆಟ್ ನ ಅನುಭವವೇ ಕಳೆದು ಹೋಗಿರುವ ಈ ದಿನಗಳಲ್ಲಿ ಕ್ರಿಕೆಟ್ ಕ್ರೀಡೆಯಲ್ಲಿನ ನಿಯಮಾವಳಿಗಳಲ್ಲಿ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ.

ಬಾಲ್ ವಿರುದ್ಧ ಬ್ಯಾಟ್ಸಮನ್ ಗಳ ಅಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಬ್ಯಾಟ್ ಗಳ ದಪ್ಪ ಮತ್ತು ಆಳತೆಯಲ್ಲಿ ಬದಲಾವಣೆ ತರಲಾಗಿದೆ. ಅಂತೆಯೇ ಮೈದಾನದಲ್ಲಿ ಆಟಗಾರರು ದುರ್ವರ್ತನೆ ತೋರಿದರೆ ದಂಡವಾಗಿ ಎದುರಾಳಿ  ತಂಡಕ್ಕೆ ಹೆಚ್ಚುವರಿ ರನ್ ನೀಡುವ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ನೂತನ ನಿಯಮಾವಳಿಗಳು ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಲಂಡನ್ ಮಾರಿಲೆಬೊನ್ ಕ್ರಿಕೆಟ್ ಕ್ಲಬ್ ನಲ್ಲಿ ನಡೆದ ಸುಧೀರ್ಘ ಚರ್ಚೆಯ ಬಳಿಕ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಬ್ಯಾಟ್ಸಮನ್ ನ ಬ್ಯಾಟ್ ಆಳತೆ ನಿಗದಿತ ಪ್ರಮಾಣವನ್ನು ಮೀರುವಂತಿಲ್ಲ. ನೂತನ ನಿಯಮಾಳಿಗಳ  ಪ್ರಕಾರ ಬ್ಯಾಟ್ ಗರಿಷ್ಠ ಗಾತ್ರದಲ್ಲಿ ಇಳಿಕೆ ಮಾಡಲಾಗಿದ್ದು, 108 ಮಿಲಿ ಮೀಟರ್ ಅಗಲ, 67 ಮಿಲಿ ಮೀಟರ್ ಎತ್ತರ ಹಾಗೂ ಟೋ ನ ಅಗಲ ಗರಿಷ್ಠ 40 ಮಿಲಿಮೀಟರ್ ಗೆ ನಿಗದಿ ಪಡಿಸಲಾಗಿದೆ. ಅಂತೆಯೇ ಮೈದಾನದಲ್ಲಿ ಸ್ಲೆಡ್ಜಿಂಗ್,  ಜಗಳ, ಜನಾಂಗಿಯ ನಿಂದನೆಯಂತಹ ದುರ್ವರ್ತನೆಗಳನ್ನು ತಡೆಯುವ ನಿಟ್ಟಿನಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದುರ್ವರ್ತನೆ ತೋರುವ ಆಟಗಾರನ ವಿರುದ್ಧ ದಂಡದ ರೂಪವಾಗಿ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್  ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ಅಂತೆಯೇ ರನ್ ಔಟ್, ಅಂಪೈರ್ ತೀರ್ಪನ್ನು ಅಗೌರವದಿಂದ ಕಾಣುವುದು, ಸುಖಾಸುಮ್ಮನೆ ಔಟ್ ಗಾಗಿ ಅಂಪೈರ್ ಬಳಿ ಮನವಿ ಮಾಡುವುದನ್ನೂ ಕೂಡ ನೂತನ ನಿಯಮಾವಳಿಗಳ ಪ್ರಕಾರ ದುರ್ವರ್ತನೆ ಎಂದು  ಪರಿಗಣಿಸಲಾಗುತ್ತದೆ. ಇದಲ್ಲದೆ ಪಂದ್ಯ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಆಟಗಾರರು ಅಧಿಕಾರಿಗಳನ್ನು ಸಂಪರ್ಕಿಸುವುದೂ ಕೂಡ ದುರ್ವರ್ತನೆ ಅಡಿಯಲ್ಲೇ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿ20 ಕ್ರಿಕೆಟ್ ಆವಿಷ್ಕಾರವಾದ ಬಳಿಕ ಕ್ರಿಕೆಟ್ ತನ್ನ ನೈಜ ಸ್ವರೂಪವನ್ನೇ ಕಳೆದುಕೊಂಡಿದ್ದು, ಬೌಲರ್ ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪ್ರಸ್ತುತ ಕ್ರಿಕೆಟ್ ಎಂದರೆ ಹೊಡಬಡಿ ಎಂಬತಾಗಿದ್ದು, ಇಂತಹ ಪರಿಸ್ಥಿತಿ ನಿಯಂತ್ರಣಕ್ಕಾಗಿ  ಇಂಗ್ಲೆಂಡ್ ಕ್ರಿಕೆಟ್ ಪೋಷಕರು ಈ ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿದ್ದಾರೆ. ಕ್ರಿಕೆಟ್ ನಿಯಮಾವಳಿಗಳಿಗೆ ಲಂಡನ್ ನ ಎಂಸಿಸಿ ಕ್ಲಬ್ ಸದಸ್ಯರು ಜವಾಬ್ದಾರರಾಗಿದ್ದು, ಐಸಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲ್ವಿಚಾರಣೆ  ನಡೆಸಿದರೂ ಕ್ರಿಕೆಟ್ ನಲ್ಲಿನ ಯಾವುದೇ ನಿಯಮಾವಳಿ ಬದಲಾವಣೆಯಾಗಬೇಕಾದರೂ ಎಂಸಿಸಿಯಿಂದಲೇ ಆಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com