ಕೊಲಂಬೊ: ಐದನೇ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿರುವ ಟೀಂ ಇಂಡಿಯಾ ಆತಿಥೇಯ ಶ್ರಿಲಂಕಾವನ್ನು 238ಕ್ಕೆ ಆಲೌಟ್ ಮಾಡಿದೆ.
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಆರಂಭಿಕ ಆಘಾತ ಅನುಭವಿಸಿ ನಂತರ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡರೂ ಕೊನೆ ಕ್ಷಣದಲ್ಲಿ ಮತ್ತೆ ಕುಸಿದು 49.4 ಓವರ್ ನಲ್ಲಿ ಕೇವಲ 238ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಭುವನೇಶ್ವರ್ ಕುಮಾರ್ 5, ಜಸ್‌ಪ್ರೀತ್ ಬೂಮ್ರಾ 2, ಕುಲದೀಪ್ ಯಾದವ್ 1, ಯಜುವೇಂದ್ರ ಚಾಹಲ್ 1 ವಿಕೆಟ್ ಪಡೆದಿದ್ದಾರೆ.
ಇನ್ನು ಶ್ರೀಲಂಕಾ ಪರ ತಿರಿಮನೆ 67, ಏಂಜೆಲೊ ಮ್ಯಾಥ್ಯೂಸ್ 55, ತರಂಗಾ 48 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆತ್ತು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ.
ಐದು ಪಂದ್ಯಗಳ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ಇನ್ನು ಅಂತಿಮ ಪಂದ್ಯದಲ್ಲಿ ಗೆದ್ದು ಲಂಕಾ ತಂಡವನ್ನು ವೈಟ್ ವಾಷ್ ಮಾಡಲು ಟೀಂ ಇಂಡಿಯಾ ಯೋಜನೆ ರೂಪಿಸಿದೆ. ಇನ್ನು ಅಂತಿಮ ಪಂದ್ಯದಲ್ಲಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಒತ್ತಡದಲ್ಲಿ ಲಂಕಾ ತಂಡ ಸಿದ್ಧತೆ ನಡೆಸಿದೆ.