'ಒಂದು ರಾಜ್ಯ, ಒಂದು ಮತ' ನೀತಿ ಕೈಬಿಟ್ಟ 'ಸುಪ್ರೀಂ', ಬಿಸಿಸಿಐ ಕರಡು ಸಂವಿಧಾನಕ್ಕೆ ಒಪ್ಪಿಗೆ

ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 'ಒಂದು ರಾಜ್ಯ ಒಂದು ಮತ' ನೀತಿಯನ್ನು ಸುಪ್ರೀಂ ಕೋರ್ಟ್ ಕೈ ಬಿಟ್ಟಿದ್ದು, ಮಹಾರಾಷ್ಟ್ರ, ಗುಜರಾತ್‌ ನ ಎಲ್ಲ ಮೂರು ಕ್ರಿಕೆಟ್‌ ಸಮಿತಿಗಳಿಗೆ ಪೂರ್ಣ ಸದಸ್ಯತ್ವವನ್ನು ಸರ್ವೋಚ್ಛ ನ್ಯಾಯಾಲಯ ಸಮ್ಮತಿ ನೀಡಿದೆ. ಆ ಮೂಲಕ ಒಂದು ರಾಜ್ಯ ಒಂದು ಮತ ಎಂಬ ಮಾನದಂಡವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ. 
ಅಲ್ಲದೆ, ರೈಲ್ವೇಸ್, ಸರ್ವೀಸ್ ಹಾಗೂ ವಿಶ್ವವಿದ್ಯಾನಿಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐನಲ್ಲಿ ಸುಪ್ರೀಂಕೋರ್ಟ್ ಪೂರ್ಣ ಸದಸ್ಯತ್ವ ನೀಡಿದೆ. ಈ ಹಿಂದೆ ಲೋಧಾ ಸಮಿತಿಯ ಶಿಫಾರಸಿನಂತೆ ಅವರೆಲ್ಲರ ಸದಸ್ಯತ್ವವನ್ನು ಕೋರ್ಟ್ ರದ್ದುಗೊಳಿಸಿತ್ತು. ಇನ್ನು, ಈ ನೂತನ ಸಂವಿಧಾನವನ್ನು ನಾಲ್ಕು ವಾರಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಬಿಸಿಸಿಐಗೆ ತಿಳಿಸಿದೆ. ಜತೆಗೆ, ರಾಜ್ಯಗಳ ಹಾಗೂ ಇತರೆ ಸದಸ್ಯತ್ವ ಸಂಸ್ಥೆಗಳು ಬದಲಾದ ಸಂವಿಧಾನವನ್ನು 30 ದಿನಗಳಲ್ಲಿ ದಾಖಲಿಸಿಕೊಳ್ಳಿ ಎಂದೂ ಸುಪ್ರೀಂಕೋರ್ಟ್ ಸೂಚಿಸಿದೆ. 
ಬಿಸಿಸಿಐನಲ್ಲಿ ಒಂದೇ ಹುದ್ದೆಯನ್ನು ಸತತ ಎರಡು ಬಾರಿ ಹೊಂದಿದ ಬಳಿಕ ಆ ಸದಸ್ಯನನ್ನು ಉಚ್ಛಾಟಿಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ, ಈ ಸಂವಿಧಾನವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ರಾಜ್ಯ ಕ್ರಿಕೆಟ್ ಸಂಘಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಹಾಗೆ, ಬಿಸಿಸಿಐ ಸಂವಿಧಾನವನ್ನು 30 ದಿನಗಳೊಳಗೆ ಅಳವಡಿಸಿಕೊಳ್ಳಿ ಎಂದು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಗಳಿಗೆ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. 
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಬಿಸಿಸಿಐ ಆಡಳಿತ ವ್ಯವಸ್ಥೆ ಕಲುಷಿತಗೊಂಡಿದ್ದು ಪಾರದರ್ಶಕ ಮತ್ತು ಸ್ವಚ್ಛ ಆಡಳಿತಕ್ಕೆ ಕೆಲವೊಂದು ರೂಪುರೇಷೆಗಳನ್ನು ಅಳವಡಿಸುವುದಲ್ಲದೆ, ಅದರ ಸಂವಿಧಾನವನ್ನು ಬದಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಲೋಧಾ ನೇತೃತ್ವದ ಸಮಿತಿಯನ್ನು 2015ರ ಜನವರಿಯಲ್ಲಿ ನೇಮಿಸಿತ್ತು. ಅದರಂತೆ ಸಮಿತಿ ನೀಡಿದ್ದ ಬಹುಪಾಲು ಶಿಫಾರಸುಗಳನ್ನು ಬಿಸಿಸಿಐ ಮಾತ್ರವಲ್ಲದೆ, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ಅಳವಡಿಸಿಕೊಳ್ಳಬೇಕೆಂದು 2016 ಜುಲೈ ನಲ್ಲಿ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com