ಐಪಿಎಲ್ ಹರಾಜಿನಲ್ಲಿ ಗರಿಷ್ಠ ಬೆಲೆ ದಕ್ಕಿಸಿಕೊಂಡ ವರುಣ್ ಚಕ್ರವರ್ತಿ ಯಾರು ಗೊತ್ತೆ?

ತಮಿಳುನಾಡಿನ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಅತೀ ಹೆಚ್ಚಿನ ಮೊತ್ತಕ್ಕೆ ಅಂದರೆ ರೂ.8.4 ಕೋಟಿ ಮೊತ್ತ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜೈಪುರ: ತಮಿಳುನಾಡಿನ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಅತೀ ಹೆಚ್ಚಿನ ಮೊತ್ತಕ್ಕೆ ಅಂದರೆ ರೂ.8.4 ಕೋಟಿ ಮೊತ್ತ ಪಡೆದು ಅಚ್ಚರಿ ಮೂಡಿಸಿದ್ದಾರೆ.
ವರುಣ್‌ ಅವರನ್ನು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಸೆಳೆದುಕೊಂಡಿದ್ದು, ಹರಾಜು ನಡೆಸಿಕೊಟ್ಟ ಹ್ಯೂ ಎಡ್ಮಿಡಸ್‌ ಅವರು ವರುಣ್ ಹೆಸರು ಕೂಗುತ್ತಿದ್ದಂತೆ ಫ್ರಾಂಚೈಸಿಗಳು ಜಿದ್ದಿಗೆ ಬಿದ್ದ ಹಾಗೆ ಬಿಡ್‌ ಮಾಡಿದವು. ಹೀಗಾಗಿ ಬೆಲೆ ಏರುತ್ತಲೇ ಹೋಯಿತು. ಅಂತಿಮವಾಗಿ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವನ್‌ ವರುಣ್‌ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ವರುಣ್‌ ಚಕ್ರವರ್ತಿ ನಿಮಗೆಷ್ಟು ಗೊತ್ತು?
ವಿದ್ಯಾಭ್ಯಾಸದಲ್ಲಿ ವರುಣ್‌ ಚಕ್ರವರ್ತಿ ಆರ್ಕಿಟೆಕ್ಟ್‌ (ವಾಸ್ತು ವಿನ್ಯಾಸಕಾರ) ಆಗಿದ್ದು, 13ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಶುರುಮಾಡಿದ್ದರು. 17ನೇ ವಯಸ್ಸಿನವರೆಗೂ ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ಆಗಿದ್ದರು. ಅವರಿಗೆ ವಿವಿಧ ವಯೋಮಾನದ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಗಲಿಲ್ಲ. ಹೀಗಿದ್ದರೂ ಅವರ ಕ್ರಿಕೆಟ್‌ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಪದವಿ ವ್ಯಾಸಂಗದ ನಂತರ ಕ್ರೊಮ್ ಬೆಸ್ಟ್‌ ಕ್ಲಬ್ ಗೆ ಸೇರಿದ ಅವರು ವೇಗದ ಬೌಲರ್‌ ಆಗಿ ಗುರುತಿಸಿಕೊಂಡರು. ಪಂದ್ಯ ವೊಂದರ ವೇಳೆ ಗಂಭೀರವಾಗಿ ಗಾಯಗೊಂಡು ಕೆಲ ಕಾಲ ಅಂಗಳದಿಂದ ದೂರ ಉಳಿದಿದ್ದರು. ಅದರಿಂದ ಚೇತರಿಸಿಕೊಂಡ ನಂತರ ಜ್ಯೂಬಿಲಿ ಕ್ಲಬ್‌ ಸೇರಿದರು. ಈ ಕ್ಲಬ್‌ ಪರ ರೋಬಸ್ಟ್‌ ಚೆನ್ನೈ ಲೀಗ್‌ನಲ್ಲಿ ಆಡಿದ್ದ ವರುಣ್‌, ಆಫ್‌ಬ್ರೇಕ್‌, ಲೆಗ್‌ಬ್ರೇಕ್‌, ಗೂಗ್ಲಿ, ಕೇರಂ ಬಾಲ್‌, ಫ್ಲಿಪ್ಪರ್‌ ಮತ್ತು ಟಾಪ್‌ ಸ್ಪಿನ್‌ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ ಮನ್‌ಗಳನ್ನು ಕಂಗೆಡಿಸಿದ್ದರು. ಏಳು ಪಂದ್ಯಗಳನ್ನು ಆಡಿದ್ದ ಅವರು 8.26ರ ಸರಾಸರಿಯಲ್ಲಿ 31 ವಿಕೆಟ್‌ ಉರುಳಿಸಿದ್ದರು.
ಈ ವರ್ಷ ನಡೆದಿದ್ದ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌), ವರುಣ್‌ ಕ್ರೀಡಾ ಬದುಕಿಗೆ ತಿರುವು ನೀಡಿತು. ಮಧುರೈ ಪ್ಯಾಂಥರ್ಸ್‌ ತಂಡದ ಪರ ಆಡಿದ್ದ ಅವರು ಮೋಡಿ ಮಾಡಿದ್ದರು. ಟಿಎನ್‌ಪಿಎಲ್‌ಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳ ಆಟಗಾರರಿಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ವಿಎಪಿ ಟ್ರೋಫಿ ಕ್ರಿಕೆಟ್‌ ಲೀಗ್‌ನಲ್ಲಿ ವಿಜಯ ಕ್ಲಬ್‌ ಪರ ಆಡಿ ಗಮನ ಸೆಳೆದಿದ್ದ ಅವರಿಗೆ ಈ ಬಾರಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುವ ಅವಕಾಶ ಸಿಕ್ಕಿತ್ತು. ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳಿಂದ 22 ವಿಕೆಟ್‌ ಕಬಳಿಸಿ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದ್ದರು.
ಬೌಲಿಂಗ್ ನಲ್ಲಿ 4 ರಿಂದ 5 ತರಹದ ವೇರಿಯೇಷನ್
ಇನ್ನು ಐಪಿಎಲ್ ಕುರಿತು ಸಕಾರಾತ್ಮಕವಾಗಿರುವ ವರುಣ್, ನಾನು ಬೌಲಿಂಗ್ ಮಾಡುವಾಗ 4ರಿಂದ  ವೇರಿಯಷನ್ ಗಳನ್ನು ಪ್ರಯತ್ನಿಸುತ್ತೇನೆ. ಇದು ಸಾಕಷ್ಟು ಬಾರಿ ನನಗೆ ಯಶಸ್ಸು ತಂದುಕೊಟ್ಟಿದೆ. ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಸಾಕಷ್ಟು ವಿಕೆಟ್ ಪಡೆದಿದ್ದೆ. ಟಿಎನ್ ಪಿಎಲ್ ಸಾಕಷ್ಟು ಅನುಭವ ನೀಡಿದ್ದು ವಿವಿಧ ಪರಿಸ್ಥಿತಿಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಮತ್ತು ಹೇಗೆ ಒತ್ತಡ ನಿಭಾಯಿಸಬೇಕು ಎಂಬುದನ್ನು ತಿಳಿದಿದ್ದೇನೆ. ಅಲ್ಲದೆ ಈ ಹಿಂದೆ ಕೆಕೆಆರ್ ತಂಡದಲ್ಲಿ ನಾನು 2 ತಿಂಗಳು ಕಾರ್ಯ ನಿರ್ವಹಿಸಿದ್ದೆ. ಈ ವೇಳೆ ಸುನಿಲ್ ನರೇನ್ ರಂತಹ ಅನುಭವಿ ಆಟಗಾರರೊಂದಿಗೆ ಆಡಿದ್ದೇನೆ. ಇದೇ ಕಾರಣಕ್ಕಾಗಿ ಐಪಿಎಲ್ ಟೂರ್ನಿಗಾಗಿ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ ಎಂದು ವರುಣ್ ಚಕ್ರವರ್ತಿ ಹೇಳಿದ್ದಾರೆ.
20 ಲಕ್ಷ ರೂಗೆ ಮಾರಾಟವಾಗಬಹದು ಎಂದು ಎಣಿಸಿದ್ದೆ
ಇನ್ನು ಐಪಿಎಲ್ ಹರಾಜು ಪ್ರಕ್ರಿಯೆ ಕುರಿತು ಮಾತನಾಡಿದ ವರುಣ್ ಹಾಲಿ ಟೂರ್ನಿಯಲ್ಲಿ 20 ಲಕ್ಷ ರೂಗೆ ಬಿಡ್ ಆಗಬಹುದು ಎಂದು ನನಗೆ ಅನ್ನಿಸಿತ್ತು. ಆದರೆ ನನ್ನ ನಿರೀಕ್ಷೆಯನ್ನೂ ಮೀರಿದೆ. ಪಂಜಾಬ್ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಖುಷಿಯಾಗಿದೆ. ಮೊದಲು ನನ್ನ ಮೂಲ ಮೊತ್ತ 20 ಲಕ್ಷಕ್ಕೇ ಮಾರಾಟವಾಗಬಹುದು ಎಂದು ಅನ್ನಿಸಿತ್ತು. ಆದರೆ ಅದನ್ನೂ ಮೀರಿದ ಹಣ ಸಿಕ್ಕಿದೆ. ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರುಣ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com