ದುಬೈ: ಐಸಿಸಿ ಮಹಿಳಾ ವಿಶ್ವಕಪ್ ಟಿ20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನು ಇದೇ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಡಿಆರ್ಎಸ್ ಅನ್ನು ಬಳಸಲಾಗುತ್ತಿದೆ.
2018ರ ನವೆಂಬರ್ 9 ರಿಂದ 24ರವರೆಗೆ ವೆಸ್ಟ್ ಇಂಡೀಸ್ ನಲ್ಲಿ ಪಂದ್ಯಾವಳಿ ನಡೆಯಲಿದ್ದು ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಕಳೆದ ಐದು ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಟೀಂ ಇಂಡಿಯಾ ಎಡವಿದೆ. ಇನ್ನು ತನ್ನ ಎರಡನೇ ಪಂದ್ಯದಲ್ಲಿ ನವೆಂಬರ್ 11ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಪಂದ್ಯಾವಳಿಯ ಎ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅರ್ಹತಾ ತಂಡ 1 ಇರಲಿದೆ. ಇನ್ನು ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅರ್ಹತಾ ತಂಡ 2 ಇರಲಿದೆ.
ಅರ್ಹತಾ ತಂಡಗಳ ಪೈಕಿ ಬಾಂಗ್ಲಾದೇಶ, ಐರ್ಲ್ಯಾಂಡ್, ನೆದರ್ಲ್ಯಾಂಡ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲಾಂಡ್, ಥಾಯ್ಲಾಂಡ್ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ತಂಡಗಳು ಸೆಣೆಸಲಿವೆ.