ಐಸಿಸಿ ಟೆಸ್ಟ್ ಬೌಲರ್ ರ‍್ಯಾಂಕಿಂಗ್; ಅಗ್ರ ಸ್ಥಾನಕ್ಕೇರಿದ ರಬಾಡಾ, ಅಶ್ವಿನ್ ಗೆ 4ನೇ ಸ್ಥಾನ

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟೆಸ್ಟ್ ಬೌಲರ್ ಗಳ ರ‍್ಯಾಂಕಿಂಗ್ ನಲ್ಲಿ ಪರಿಷ್ಕರಣೆ ಮಾಡಿದ್ದು, ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟೆಸ್ಟ್ ಬೌಲರ್ ಗಳ ರ‍್ಯಾಂಕಿಂಗ್ ನಲ್ಲಿ ಪರಿಷ್ಕರಣೆ ಮಾಡಿದ್ದು, ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿ ಎರಡು ಪಂದ್ಯಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ರಬಾಜಾ ಪೋರ್ಟ್ ಎಲಿಜೆಬೆತ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ತೋರಿದ ಮ್ಯಾಚ್ ವಿನ್ನಿಂಗ್ ಪ್ರದರ್ಶನದಿಂದ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಆಸೀಸ್ ವಿರುದ್ಧದ ಪೋರ್ಟ್ ಎಲಿಜಬೆತ್ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಕಬಳಿಸಿರು ರಬಾಡ ತಮ್ಮ ರೇಟಿಂಗ್ ಅಂಕಗಳನ್ನು 900ಕ್ಕೆ ಏರಿಕೆ ಮಾಡಿಕೊಳ್ಳುವ ಮೂಲಕ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. 
ಈ ಮೂಲಕ 900 ರೇಟಿಂಗ್ ಅಂಕ ಗಳಿಸಿದ ದಕ್ಷಿಣ ಆಫ್ರಿಕಾದ 4ನೇ ಹಾಗೂ ಒಟ್ಟಾರೆಯಾಗಿ ವಿಶ್ವದ 23ನೇ ಬೌಲರ್ ಎಂಬ ಗೌರವಕ್ಕೆ ರಬಾಡಾ ಪಾತ್ರವಾಗಿದ್ದಾರೆ. ಉಳಿದಂತೆ ದ.ಆಫ್ರಿಕಾ ಪರ ವೆರ್ನಾನ್ ಪಿಲಾಂಡರ್ (2013ರಲ್ಲಿ 912 ಅಂಕ), ಶಾನ್ ಪೊಲಾಕ್ (1999ರಲ್ಲಿ 909 ಅಂಕ) ಹಾಗೂ ಡೇಲ್ ಸ್ಟೈನ್ (2014ರಲ್ಲಿ 909 ಅಂಕ) ಜೀವನಶ್ರೇಷ್ಠ ರ‍್ಯಾಂಕಿಂಗ್ ರೇಟಿಂಗ್ ಅಂಕಗಳನ್ನು ಪಡೆದಿದ್ದರು.
ಅಶ್ವಿನ್ ಗೆ ನಾಲ್ಕನೇ ಸ್ಥಾನ
ಇನ್ನುಳಿದಂತೆ ಆಸ್ಟ್ರೇಲಿಯಾದ ಜಾಶ್ ಹೇಜಲ್‌ವುಡ್ 4ರಿಂದ 5ನೇ ಸ್ಥಾನಕ್ಕೆ ಕುಸಿದಿದ್ದು, ಅಂತೆಯೇ ಮಿಚೆಲ್ ಸ್ಟಾರ್ಕ್ 5ರಿಂದ 9ನೇ ಸ್ಥಾನ ಕುಸಿದ ಪರಿಣಾಮ ಭಾರತದ ಆಫ್ ಸ್ಪಿನ್ನರ್ ಅಶ್ವಿನ್ ನಾಲ್ಕನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಅಂತೆಯೇ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಭಾರತದ ರವೀಂದ್ರ ಜಡೇಜಾ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. 
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅಗ್ರ ಸ್ಥಾನದಲ್ಲಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಚೇತೇಶ್ವರ ಪೂಜಾರ ಆರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ನಡುವೆ ಆಸೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿರುವ ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ (126* ಹಾಗೂ 28) ಐದು ಸ್ಥಾನಗಳ ನೆಗೆತ ಕಂಡು 7ನೇ ಸ್ಥಾನಕ್ಕೆ ತಲುಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com