ಏಷ್ಯಾ ಕಪ್ : ಬಾಂಗ್ಲಾ ವಿರುದ್ಧ ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ !

ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶವನ್ನು ರೋಚಕ ರೀತಿಯಲ್ಲಿ ಮೂರು ವಿಕೆಟ್ ಗಳ ಅಂತರದಿಂದ ಮಣಿಸಿದ ಭಾರತ ದಾಖಲೆಯ ಏಳನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ದುಬೈ: ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ   ಬಾಂಗ್ಲಾದೇಶವನ್ನು  ರೋಚಕ ರೀತಿಯಲ್ಲಿ   ಮೂರು ವಿಕೆಟ್ ಗಳ ಅಂತರದಿಂದ ಮಣಿಸಿದ  ಭಾರತ  ದಾಖಲೆಯ ಏಳನೇ ಏಷ್ಯಾಕಪ್ ಪ್ರಶಸ್ತಿಯನ್ನು  ಮುಡಿಗೇರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಬಲಗೈ ಬ್ಯಾಟ್ಸ್ ಮನ್, ಪ್ರಾರಂಭಿಕ ಆಟಗಾರ  ಲಿಟನ್ ದಾಸ್ ಶತಕದ ನೆರವಿನಿಂದ  48.3 ಓವರ್‌ ಗಳಲ್ಲಿ 222  ರನ್ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 223 ರನ್ ಪಡೆದು ವಿಜಯದ ನಗೆ ಚೆಲ್ಲಿತು.

ಕೊನೆಯ ಓವರ್ ಅಂತೂ ಸಾಕಷ್ಟು ರೋಚಕತೆಗೆ ಸಾಕ್ಷಿಯಾಯಿತು. 6 ಎಸೆತಗಳಲ್ಲಿ 6 ರನ್ ಗಳಿಸಬೇಕಾಗಿತ್ತು. ಕೆಎಂ ಜಾದವ್  ಮತ್ತು ಕುಲದೀಪ್ ಯಾದವ್  ಜೋಡಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಒಂದು ಎಸೆತಕ್ಕೆ ಒಂದು ರನ್ ಗಳಿಸಬೇಕಾದ ಸಂದಿಗ್ಧತೆಯ ಸಂದರ್ಭದಲ್ಲಿ ಈ ಜೋಡಿ ತಾಳ್ಮೆ ಆಟವಾಡಿ ಟೀಂ ಇಂಡಿಯಾ ಗೆಲ್ಲಲು ನೆರವಾಯಿತು.

ಭಾರತದ ಪರ ರೋಹಿತ್ ಶರ್ಮಾ 48, ಶಿಖರ್ ಧವನ್, 15, ಅಂಬಟ್ಟಿ ರಾಯುಡು 2, ದೋನಿ  36 , ರವೀಂದ್ರ ಜಡೇಜಾ 23  ರನ್ ಗಳಿಸಿದರು. ಬಾಂಗ್ಲಾದೇಶ ಪರ  ಮುಸ್ತಪಿಝರ್ ರೆಹಮಾನ್ , ನಜ್ಮುಲ್  ಇಸ್ಲಾಂ,  ಮೊರ್ಟೇಜಾ, ರುಬೆಲ್ ಹುಸೇನ್,  ಹಾಗೂ ಮಹಮ್ಮದುಲ್ಲಾ  ತಲಾ 1 ವಿಕೆಟ್ ಪಡೆದುಕೊಂಡರು.

ಇದಕ್ಕೂ ಮುನ್ನ  ಬ್ಯಾಟಿಂಗ್ ಮಾಡಿದ ಬಾಂಗ್ಲಾ ಪರವಾಗಿ ಲಿಟನ್ ದಾಸ್ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 121 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಮೆಹಿದಿ ಹಸನ್ (32), ಸೌಮ್ಯ ಸರ್ಕಾರ್ (33) ರನ್ ಕಲೆಹಾಕಿದ್ದರು. ಇದರ ಹೊರತಾಗಿ ಮತ್ತಾರೂ ಎರಡಂಕಿ ಸಹ ತಲುಪುವುದಕ್ಕೆ ವಿಫಲರಾದರೆನ್ನುವುದು ಗಮನಾರ್ಹ.

ಭಾರತದ ಪರ ಕುಲದೀಪ್ ಯಾದವ್ 3,  ಕೇದಾರ್ ಜಾಧವ್ 2 ಹಾಗೂ ಬುಮ್ರಾ ಹಾಗೂ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com