

ಲೇಹ್: ಪ್ಯಾರಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದು, ಅವರ ಫೋಟೋ ಈಗ ವೈರಲ್ ಆಗಿದೆ.
ಧೋನಿ ಅವರು ಲೇಹ್ ನ ಬಾಸ್ಕೆಟ್ ಬಾಲ್ ಕೋರ್ಟ್ ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಧೋನಿ ಅವರು ಲಡಾಖ್ ನಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ನಿಂದ ಎರಡು ತಿಂಗಳ ಬ್ರೇಕ್ ತೆಗೆದುಕೊಂಡಿರುವ ಧೋನಿ ಅವರು, ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿದ್ದು, ಭಾರತೀಯ ಸೇನೆಯ 106 ಟಿಎ ಪ್ಯಾರಾ ಬೆಟಾಲಿಯನ್ ನಲ್ಲಿ 15 ದಿನಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿ, ವಾಪಸ್ ಆಗಿದ್ದಾರೆ.
ಧೋನಿ 15 ದಿನಗಳ ಕಾಲ ಕಾಶ್ಮೀರ ಕಣಿವೆಯಲ್ಲಿ ಸೈನಿಕರೊಂದಿಗೆ ಪಹರೆ, ಕಾವಲು ಮತ್ತು ಹೊರ ಠಾಣೆಗಳ ಕಾವಲು ಕರ್ತವ್ಯಗಳನ್ನು ನಿರ್ವಹಿಸಿದ್ದರು. ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ಟರ್ ಫೋರ್ಸ್‌ನಲ್ಲಿಯೂ ಧೋನಿ ಸೇವೆ ಸಲ್ಲಿಸಿದ್ದಾರೆ.