ಅಸಭ್ಯ ಹೇಳಿಕೆ ವಿವಾದ: ಪಾಂಡ್ಯ, ರಾಹುಲ್ ಗೆ ಮತ್ತೊಂದು ಅವಕಾಶ ಕೊಡಿ: ಅಂಪೈರ್ ಸೈಮನ್ ಟಫೆಲ್

ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ನಿಷೇಧ ಭೀತಿ ಎದುರಿಸುತ್ತಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೆಎಲ್ ರಾಹುಲ್ ಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಖ್ಯಾತ ಅಂಪೈರ್ ಸೈಮನ್ ಟಫೆಲ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ನಿಷೇಧ ಭೀತಿ ಎದುರಿಸುತ್ತಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೆಎಲ್ ರಾಹುಲ್ ಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಖ್ಯಾತ ಅಂಪೈರ್ ಸೈಮನ್ ಟಫೆಲ್ ಹೇಳಿದ್ದಾರೆ.

ಕ್ರಿಕೆಟ್ ವಲಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಟೀಂ ಇಂಡಿಯಾ ಆಟಗಾರರ ಅಸಭ್ಯ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟ್ ಅಂಪೈರ್ ಟಫೆಲ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ತಪ್ಪು ಮಾಡುತ್ತೇವೆ. ನಮ್ಮ ಜೀವನದ ಜಂಜಾಟಗಳಲ್ಲಿ ಮತ್ತು ಒತ್ತಡದ ಜೀವನದಲ್ಲಿ ನಾವೆಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತೇವೆ. ಕೆಲವೊಮ್ಮೆ ನಮಗೆ ಅದು ತಿಳಿದಿರುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿನ ಅರಿವೇ ಇರುವುದಿಲ್ಲ. ಆದರೆ ಪಾಂಡ್ಯಾ ಮತ್ತು ರಾಹುಲ್ ವಿಚಾರದಲ್ಲಿ ದೂರಿನಲ್ಲಿರುವ ಕೆಲ ಅಂಶಗಳನ್ನು ನಾನು ಓದಿದ್ದೇನೆ. ಆದರೆ ಅವರ ತಪ್ಪು ತಿದ್ದಿಕೊಳ್ಳುವಿಕೆಗೆ ಅವರಿಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಅಂತೆಯೇ ನಾನೂ ಕೂಡ ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ತಪ್ಪು ಮಾಡಿದ್ದೇನೆ. ಆದರೆ ಆ ತಪ್ಪು ಗಳಿಂದ ನಾನು ಕಲಿತಿದ್ದೇನೆ ಮತ್ತು ತಿದ್ದುಕೊಂಡಿದ್ದೇನೆ. ಕ್ರಿಕೆಟಿಗರು ತಪ್ಪು ಮಾಡಿರಬಹುದು. ಅವರ ಹೇಳಿಕೆಗಳಿಂದ ಧಕ್ಕೆಯಾಗಿರಬಹುದು. ಆದರೆ ನನಗೆ ವಿಶ್ವಾಸವಿದೆ ಅವರು ಖಂಡಿತಾ ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತಾರೆ. ಈ ಪ್ರಕರಣದ ಬಳಿಕ ಬಹುಶಃ ಅವರು ತಮ್ಮ ಜೀವನದಲ್ಲಿ ಸುಧಾರಿಸಿಕೊಳ್ಳಬಹುದು. ಪಾಂಡ್ಯಾ ಮತ್ತು ರಾಹುಲ್ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನದಲ್ಲಿದ್ದು ಈ ಹೊತ್ತಿನಲ್ಲಿ ಈ ವಿವಾದ ಅವರಿಗೆ ಬೇಕಿರಲಿಲ್ಲ ಎಂದು ಹೇಳಿದರು.
ಇದೇ ವೇಳೆ ಟಫೆಲ್ ಶಿಕ್ಷಣ ಕ್ಷೇತ್ರದ್ಲಿ ಹೂಡಿಕೆಯ ಮಹತ್ವ ಮತ್ತು ಸಂಶೋಧನೆಗಳಿಗೆ ನೀಡಬೇಕಾದ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿದ ಟಫೆಲ್, ವಿರಾಟ್ ಕೊಹ್ಲಿ ಬೆಳವಣಿಗೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಭಾರತದ ಲೆಜೆಂಡ್ ಆಟಗಾರರಾದ ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕೊಹ್ಲಿ ವೃತ್ತಿ ಜೀವನ ಸಾಗಿಬಂದಿದೆ. ಹೀಗಾಗಿ ಅವರಲ್ಲಿದ್ದ ಕೆಲ ಒಳ್ಳೆಯ ಸಿದ್ಧಾಂತಗಳು ಗುಣಗಳನ್ನು ಅವರಲ್ಲೂ ಕಂಡಿದ್ದೇನೆ. 2012 ಸಿಬಿ ಸಿರೀಸ್ ನಲ್ಲಿ ಹೋಬರ್ಟ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 133 ರನ್ ಪೇರಿಸಿದ್ದರು. 
ನನ್ನ ಪ್ರಕಾರ ಕೊಹ್ಲಿ ಅವರ ಆ ಇನ್ನಿಂಗ್ಸ್ ಅವರ ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್ ಎನ್ನಬಹುದು. ಅವರು ಹೊಡೆದೆ ಪ್ರತೀ ಹೊಡೆತ ಬ್ಯಾಟ್ ನ ಮಧ್ಯ ಭಾಗದಿಂದ ಬಂದಿದ್ದಾಗಿತ್ತು. ಅಷ್ಟರ ಮಟ್ಟಿಗೆ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಅವರ ಆ ಇನ್ನಿಂಗ್ಸ್ ನಲ್ಲಿ ನೀವು ತಪ್ಪು ಹುಡುಕಲು ಸಾಧ್ಯವೇ ಇಲ್ಲ. ಇದೀಗ ಕೊಹ್ಲಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡದ ಸಾರಥಿಯಾಗಿದ್ದಾರೆ. ಅವರ ಈ ಬೆಳವಣಿಗೆ ಹಿಂದೆ ಸಚಿನ್, ಕುಂಬ್ಳೆ, ಎಂಎಸ್ ಧೋನಿ ಅವರ ಪಾತ್ರವೂ ಇದೆ ಎಂದು ಟಫೆಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com