ಐಪಿಎಲ್ 2019: ಡೆಲ್ಲಿಗೆ ಬಿಗ್ ಶಾಕ್, ಗರಿಷ್ಠ ವಿಕೆಟ್ ಟೇಕರ್ ಬೌಲರ್ ಟೂರ್ನಿಯಿಂದಲೇ ಔಟ್!

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ನೇರಳೆ ಬಣ್ಣದ ಕ್ಯಾಪ್ ಗೌರವಕ್ಕೆ ಪಾತ್ರರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರಕ ವೇಗಿ ಕಗಿಸೋ ರಬಾಡಾ ಗಾಯದ ಸಮಸ್ಯೆಗೆ ತುತ್ತಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ನೇರಳೆ ಬಣ್ಣದ ಕ್ಯಾಪ್ ಗೌರವಕ್ಕೆ ಪಾತ್ರರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರಕ ವೇಗಿ ಕಗಿಸೋ ರಬಾಡಾ ಗಾಯದ ಸಮಸ್ಯೆಗೆ ತುತ್ತಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ವೇಗಿ ಕಗಿಸೋ ರಬಾಡಾ ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಟೂರ್ನಿ ನಿರ್ಣಾಯಕ ಹಂತ ತಲುಪಿರುವ ಈ ಹಂತದಲ್ಲಿ ತಂಡದ ಮಾರಕ ವೇಗಿ ಹಾಗೂ ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್ ಬೌಲರ್ ಗಾಯದ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
ಇನ್ನು ಇದೇ ಮೇ 30ರಂದು ಐಸಿಸಿ ವಿಶ್ವಕಪ್ ಮಹತ್ವದ ಟೂರ್ನಿ ಇರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ರಬಾಡಾ ಅವರನ್ನು ತವರಿಗೆ ಮರಳುವಂತೆ ಅವರಿಗೆ ಸಲಹೆ ನೀಡಿತ್ತು. 23ರ ಪ್ರಾಯದ ರಬಡಾ 12 ಐಪಿಎಲ್‌ ಪಂದ್ಯಗಲ್ಲಿ ಒಟ್ಟು 25 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದು, ನೇರಳೆ ಬಣ್ಣದ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಬಗ್ಗೆ ನೋವಿನಿಂದಲೇ ಮಾತನಾಡಿರುವ ರಬಾಡಾ, 'ಐಪಿಎಲ್ ಟೂರ್ನಿ ಪ್ರಮುಖ ಘಟ್ಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯುತ್ತಿರುವುದು ಕಷ್ಟವಾಗುತ್ತಿದೆ. ಐಸಿಸಿ ವಿಶ್ವಕಪ್‌ ಪ್ರಾರಂಭವಾಗಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಹಾಗಾಗಿ, ತವರಿಗೆ ಮರಳುತ್ತಿದ್ದೇನೆ. ಪ್ರಸಕ್ತ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಚಾಂಪಿಯನ್‌ ಆಗಲಿದೆ ಎಂಬ ವಿಶ್ವಾಸ ನನಗಿದೆ. ನನ್ನ ಅಲಭ್ಯತೆ ತಂಡಕ್ಕೆ ಕಾಡುವುದಿಲ್ಲ. ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ನಮ್ಮ ತಂಡ ಪ್ರಶಸ್ತಿ ಎತ್ತಿ ಹಿಡಯಲಿದೆ ಎಂದು ರಬಾಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರನವಾಗಿ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ತರಬೇತುದಾರ  ರಿಕಿ ಪಾಂಟಿಂಗ್‌ ಅವರು, 'ಅನಿರೀಕ್ಷಿತವಾಗಿ ಕಗಿಸೋ ರಬಡಾ ಐಪಿಎಲ್‌ ಟೂರ್ನಿಯ ಪ್ರಮುಖ ಘಟ್ಟದಲ್ಲಿ ತಂಡವನ್ನು ತೆರೆಯುತ್ತಿದ್ದಾರೆ. ಆದರೆ, ತಂಡದ ಪ್ರತಿಯೊಬ್ಬ ಆಟಗಾರನು ತಂಡದ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು  ಹೇಳಿದ್ದಾರೆ.
ಈ ಹಿಂದೆಯೂ ಕೂಡ ಸಾಕಷ್ಟು ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದ ವಾಪಸ್ ಹೋಗಿದ್ದರು. ಆರ್ ಸಿಬಿಯ ವೇಗಿ ಡೇಲ್ ಸ್ಟೇಯ್ನ್ ಭುಜದ ನೋವಿಗೆ ತುತ್ತಾಗಿ ತಂಡ ತೊರೆದಿದ್ದರು. ಅಂತೆಯೇ ಲುಂಗಿ ನ್ಗಿಡಿ, ಅನ್ರಿಚ್ ನಾರ್ಟ್ಜೆ ಕೂಡ ಭುಜದ ನೋವಿನಿಂದಾಗಿ ಟೂರ್ನಿ ತೊರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com