ವಿಜಯ್ ಹಜಾರೆ: ತ.ನಾಡು ವಿರುದ್ಧ 60 ರನ್ ಜಯ, ಕರ್ನಾಟಕಕ್ಕೆ 4ನೇ ಬಾರಿ  ಚಾಂಪಿಯನ್ ಪಟ್ಟ

ಕೆ.ಎಲ್ ರಾಹುಲ್(ಔಟಾಗದೆ 52 ರನ್) ಹಾಗೂ ಮಯಾಂಕ್ ಅಗರ್ವಾಲ್ (ಔಟಾಗದೆ 69 ರನ್) ಅವರ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ತಮಿಳುನಾಡು ವಿರುದ್ಧ 60 ರನ್‍ಗಳಿಂದ (ವಿಜೆಡಿ ನಿಯಮ) ಜಯ ಸಾಧಿಸಿತು. ಇದರೊಂದಿಗೆ ನಾಲ್ಕನೇ ಬಾರಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡಿತು.
ವಿಜಯ್ ಹಜಾರೆ: ತ.ನಾಡು ವಿರುದ್ಧ 60 ರನ್ ಜಯ, ಕರ್ನಾಟಕಕ್ಕೆ 4ನೇ ಬಾರಿ  ಚಾಂಪಿಯನ್ ಪಟ್ಟ
ವಿಜಯ್ ಹಜಾರೆ: ತ.ನಾಡು ವಿರುದ್ಧ 60 ರನ್ ಜಯ, ಕರ್ನಾಟಕಕ್ಕೆ 4ನೇ ಬಾರಿ ಚಾಂಪಿಯನ್ ಪಟ್ಟ

ಬೆಂಗಳೂರು:  ಕೆ.ಎಲ್ ರಾಹುಲ್(ಔಟಾಗದೆ 52 ರನ್) ಹಾಗೂ ಮಯಾಂಕ್ ಅಗರ್ವಾಲ್ (ಔಟಾಗದೆ 69 ರನ್) ಅವರ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ತಮಿಳುನಾಡು ವಿರುದ್ಧ 60 ರನ್‍ಗಳಿಂದ (ವಿಜೆಡಿ ನಿಯಮ) ಜಯ ಸಾಧಿಸಿತು. ಇದರೊಂದಿಗೆ ನಾಲ್ಕನೇ ಬಾರಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡಿತು.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 49.5 ಓವರ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 252 ರನ್ ಗಳಿಸಿತ್ತು. ನಂತರ, 253 ರನ್ ಹಿಂಬಾಲಿಸಿದ ಕರ್ನಾಟಕ ತಂಡ 23 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಅಂತಿಮವಾಗಿ ಮನೀಶ್ ಪಾಂಡೆ ಪಡೆ ವಿಜೆಡಿ ನಿಯಮದ ಅನ್ವಯ 60 ರನ್ ಗಳಿಂದ ಜಯ ಸಾಧಿಸಿತು. 

ನಿರಾಸೆ ಮೂಡಿಸಿದ ಪಡಿಕ್ಕಲ್: ಪ್ರಸಕ್ತ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಆರಂಭಿಕ ಬ್ಯಾಟ್ಸ್ ಮನ್ ದೇವದತ್ತ ಪಡಿಕ್ಕಲ್ ಕೇವಲ 11 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಕರ್ನಾಟಕಕ್ಕೆ ಆರಂಭಿಕ ಆಘಾತ ಉಂಟಾಯಿತು.

253 ರನ್ ಗುರಿ ಹಿಂಬಾಲಿಸಿದ ಕರ್ನಾಟಕಕ್ಕೆ ಆರಂಭದಲ್ಲೇ ದೇವದತ್ತ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ನಂತರ ಜತೆಯಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ಈ ಜೋಡಿಯು ಮುರಿಯದ ಎರಡನೇ ವಿಕೆಟ್‍ಗೆ  112 ರನ್ ಜತೆಯಾಟವಾಡುವ ಮೂಲಕ ಕರ್ನಾಟಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸುವ ಹಾದಿಯಲ್ಲಿತ್ತು. ಈ ಮಧ್ಯೆ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಅಂತಿಮವಾಗಿ ವಿಜೆಡಿ ನಿಯಮದ ಲೆಕ್ಕಚಾರದ ಪ್ರಕಾರ ಕರ್ನಾಟಕ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

 ಟೀಂ ಇಂಡಿಯಾ ಆಟಗಾರರಾದ ಕೆ.ಎಲ್ ರಾಹುಲ್ 72 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ ಅಜೇಯ 52 ರನ್ ಹಾಗೂ ಮತ್ತೊಂದು ತುದಿಯಲ್ಲಿ ಮಯಾಂಕ್ ಅಗರ್ವಾಲ್ 55 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ ಅಜೇಯ 69 ರನ್ ಗಳಿಸಿದರು. ಪ್ರಸಕ್ತ ಆವೃತ್ತಿಯಲ್ಲಿ ಒಂದೂ ಪಂದ್ಯ ಸೋಲದೆ ಅಜೇಯರಾಗಿ ಮುನ್ನಗ್ಗುತ್ತಿದ್ದ ತಮಿಳುನಾಡಿಗೆ ಫೈನಲ್ ಹಣಾಹಣಿಯಲ್ಲಿನ ಸೋಲು ತೀವ್ರ ನಿರಾಸೆ ಉಂಟು ಮಾಡಿತು. 

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 49.5 ಓವರ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 252 ರನ್ ಗಳಿಸಿತು. 

ಆರಂಭಿಕ ಆಘಾತ: 

ಆರಂಭಿಕರಾಗಿ ಕಣಕ್ಕೆ ಇಳಿದ ಮುರಳಿ ವಿಜಯ್ ಹಾಗೂ ಅಭಿನವ್ ಮುಕುಂದ್ ಜೋಡಿ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ. ನಿರೀಕ್ಷಿತ ಬ್ಯಾಟ್ಸ್ ಮನ್ ಮುರಳಿ ವಿಜಯ್ ಅವರನ್ನು ಅಭಿಮನ್ಯು ಮಿಥುನ್ ಶೂನ್ಯಕ್ಕೆ ಔಟ್ ಮಾಡಿದರು. ನಂತರ, ಕ್ರೀಸ್‍ಗೆ ಬಂದ ಆರ್. ಅಶ್ವಿನ್ ಕೇವಲ ಎಂಟು ರನ್ ಗಳಿಸಿ ವಿ.ಕೌಶಿಕ್‍ಗೆ ವಿಕೆಟ್ ಒಪ್ಪಿಸಿದರು.
 
ಮುಕುಂದ್-ಅಪರಿಜಿತ್ ಜುಗಲ್‍ಬಂದಿ:

ತಂಡದ ಮೊತ್ತ 24 ರನ್ ಗಳಿಗೆ ತಮಿಳುನಾಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ಅಭಿನವ್ ಮುಕುಂದ್ ಹಾಗೂ ಬಾಬಾ ಅಪರಿಜಿತ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿತು. ಯಾವುದೇ ತಪ್ಪು ಹೊಡೆತಗಳಿಗೆ ಮೊರ ಹೋಗದ ಈ ಜೋಡಿ ಮುರಿಯದ ಮೂರನೇ ವಿಕೆಟ್‍ಗೆ 124 ರನ್ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಆರಂಭದಿಂದಲೂ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ತಮಿಳುನಾಡಿಗೆ ಆಸರೆಯಾಗಿದ್ದ ಅಭಿನವ್ ಮುಕುಂದದ 110 ಎಸೆತಗಳಲ್ಲಿ ಒಂಬತ್ತು ಬೌಂಡರಿಯೊಂದಿಗೆ 85 ರನ್ ಗಳಿಸಿದ್ದರು. ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಅವರನ್ನು ಪ್ರತೀಕ್ ಜೈನ್ ಕಟ್ಟಿಹಾಕಿದರು.

ಮತ್ತೊಂದು ತುದಿಯಲ್ಲಿ ಮುಕುಂದ್‍ಗೆ ಹೆಗಲು ನೀಡುತ್ತಿದ್ದ ಬಾಬಾ ಅಪರಿಜಿತ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿ 84 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಅಪರಿಜಿತ್ ಅವರು ರನ್ ಕದಿಯಲು ಮುಂದಾಗಿ ರನೌಟ್ ಆದರು. ಇನ್ನುಳಿದಂತೆ ವಿಜಯ್ ಶಂಕರ್ (38), ಶಾರೂಖ್ ಖಾನ್ (27) ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.

ಮಿಥುನ್ ಹ್ಯಾಟ್ರಿಕ್: ಅದ್ಭುತ ಬೌಲಿಂಗ್ ಮಾಡಿದ ಕರ್ನಾಟಕದ ಅಭಿಮನ್ಯ ಮಿಥುನ್ ಅವರು ಐದು ವಿಕೆಟ್ ಗೊಂಚಲು ಪಡೆದರು. 50ನೇ ಓವರ್ ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಮಿಥನ್ ಅವರು ತಮಿಳುನಾಡು ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದರು. ಶಾರೂಖ್ ಖಾನ್, ಎಂ. ಮೊಹಮ್ಮದ್ ಹಾಗೂ ಮುರುಗನ್ ಅಶ್ವಿನ್ ಅವರನ್ನು ಆರ್. ಅಶ್ವಿನ್ ಬಲೆಗೆ ಕಡವಿದರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆಗೆ ಮಿಥುನ್ ಭಾಜನರಾದರು. 

ವಿ.ಕೌಶಿಕ್ ಎರಡು ವಿಕೆಟ್ ಹಾಗೂ ಪ್ರತೀಕ್ ಜೈನ್ ಹಾಗೂ ಕೆ.ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ತಮಿಳುನಾಡು: 49.5 ಓವರ್ ಗಳಿಗೆ 252/10 (ಅಭಿನವ್ ಮುಕುಂದ್ 85, ಬಾಬಾ ಅಪರಿಜಿತ್ 66, ವಿಜಯ್ ಶಂಕರ್ 38, ಶಾರೂಖ್ ಖಾನ್ 27; ಅಭಿಮನ್ಯು ಮಿಥುನ್ 34 ಕ್ಕೆ 5, ವಿ.ಕೌಶಿಕ್ 39 ಕ್ಕೆ 2, ಕೆ.ಗೌತಮ್ 48 ಕ್ಕೆ 1, ಪ್ರತೀಕ್ ಜೈನ್ 55 ಕ್ಕೆ 1)
 ಕರ್ನಾಟಕ: 23 ಓವರ್ ಗಳಿಗೆ 146/1 (ಮಯಾಂಕ್ ಅಗರ್ವಾಲ್ ಔಟಾಗದೆ 69, ಕೆ.ಎಲ್ ರಾಹುಲ್ ಔಟಾಗದೆ 52; ವಾಷಿಂಗ್ಟನ್ ಸುಂದರ್ 51 ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com