ನಾನು ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದು ನನ್ನ ಅರಿವಿಗೆ ಬಂದಿರಲಿಲ್ಲ: ಸ್ಯಾಮ್ ಕರ್ರನ್‌

ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರುವ ಬಗ್ಗೆ ಅರಿವಿಗೆ ಬಂದಿರಲಿಲ್ಲ ಎಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ಆಲ್‌ರೌಂಡರ್ ಸ್ಯಾಮ್‌ ಕರ್ರನ್‌ ಹೇಳಿದ್ದಾರೆ.
ವಿಕೆಟ್ ಪಡದ ಸಂಭ್ರಮದಲ್ಲಿ ಸ್ಯಾಮ್‌ ಕರ್ರನ್‌
ವಿಕೆಟ್ ಪಡದ ಸಂಭ್ರಮದಲ್ಲಿ ಸ್ಯಾಮ್‌ ಕರ್ರನ್‌

ಮೊಹಾಲಿ: ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರುವ ಬಗ್ಗೆ ಅರಿವಿಗೆ ಬಂದಿರಲಿಲ್ಲ ಎಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ಆಲ್‌ರೌಂಡರ್ ಸ್ಯಾಮ್‌ ಕರ್ರನ್‌ ಹೇಳಿದ್ದಾರೆ.

ನಿನ್ನೆ ರಾತ್ರಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್, ನಿಗದಿತ 20 ಓವರ್‌ಗಳಲ್ಲಿ 166 ರನ್ ದಾಖಲಿಸಿ ಡೆಲ್ಲಿ ಕ್ಯಾಪಿಟಲ್ಸ್‌ ಗೆ 167 ರನ್‌ ಗುರಿ ನೀಡಿತ್ತು.

ಗುರಿ ಬೆನ್ನತ್ತಿದ ಡೆಲ್ಲಿ, ಒಂದು ಹಂತದಲ್ಲಿ 144 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಗೆಲುವಿನ ಹಾದಿಯಲ್ಲಿತ್ತು. ನಂತರ, ಮಾರಕ ದಾಳಿ ನಡೆಸಿದ ಸ್ಯಾಮ್‌ ಕರ್ರನ್‌, 2.2 ಓವರ್‌ಗಳಲ್ಲಿ ಕೇವಲ 11 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಇದರಿಂದಾಗಿ ಡೆಲ್ಲಿ 152 ರನ್‌ಗಳಿಗೆ ಸರ್ವಪತನವಾಯಿತು. ಇದರೊಂದಿಗೆ ಪಂಜಾಬ್‌ 14 ರನ್‌ಗಳಿಂದ ಗೆಲುವು ಸಾಧಿಸಿತು.

ಪಂದ್ಯದ ಬಳಿಕ ಮಾತನಾಡಿದ ಕರ್ರನ್, “ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ಪಡೆದಿರುವ ಬಗ್ಗೆ ತಿಳಿದಿರಲಿಲ್ಲ. ಆದರೆ, ಸಹ ಆಟಗಾರರೊಬ್ಬರು ತನ್ನ ಬಳಿ ಎಂದು ಹ್ಯಾಟ್ರಿಕ್‌ ವಿಕೆಟ್‌ ಪಡೆದಿರುವ ಕುರಿತು ತಿಳಿಸಿದ್ದರು” ಎಂದರು.

18ನೇ ಓವರ್‌ನ ಕೊನೆಯ ಎಸೆತದಲ್ಲಿ ಹರ್ಷಲ್‌ ಪಟೇಲ್‌ ಅವರ ವಿಕೆಟ್‌ ಪಡೆಯುತಿದ್ದಂತೆ ಹ್ಯಾಟ್ರಿಕ್ ವಿಕೆಟ್‌ ಪಡೆಯುವ ಹಾದಿ ಶುರುವಾಯಿತು. ನಂತರ, 20ನೇ ಓವರ್‌ನಲ್ಲಿ ಮತ್ತೆ ಬೌಲಿಂಗ್‌ಗೆ ಇಳಿದ ಕರ್ರನ್‌ , ಕಗಿಸೋ ರಬಡಾ ಹಾಗೂ ಸಂದೀಪ್‌ ಲಮಿಚೇನ್‌ ಅವರ ವಿಕೆಟ್‌ಗಳನ್ನು ಮೊದಲ ಎರಡು ಎಸೆತಗಳಲ್ಲಿ ಉರುಳಿಸಿದರು. ಆ ಮೂಲಕ ಹ್ಯಾಟ್ರಿಕ್‌ ಸಾಧನೆಗೆ 20 ವರ್ಷದ ಇಂಗ್ಲೆಂಡ್‌ ಆಟಗಾರ ಭಾಜನರಾದರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಕರ್ರನ್‌ 10 ಎಸೆತಗಳಲ್ಲಿ 20 ರನ್‌ ಸಿಡಿಸಿದ್ದರು.

“ಕಳೆದ ಹಲವು ತಿಂಗಳಿನಿಂದ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚು ಅಭ್ಯಾಸ ನಡೆಸಿದ್ದೆ. ಬ್ಯಾಟಿಂಗ್‌ ಜತೆ, ಬೌಲಿಂಗ್‌ ಹಾಗೂ ಕ್ಷೇತ್ರ ರಕ್ಷಣೆ ವಿಭಾಗದಲ್ಲೂ ಕಠಿಣ ಪರಿಶ್ರಮ ಪಟ್ಟಿದ್ದೆ. ಶಾಲಾ ಹಂತದಿಂದ ಆರಂಭವಾದ ನನ್ನ ಕ್ರಿಕೆಟ್‌ ಪಯಣ ಇದೀಗ ಮೊದಲ ಬಾರಿ ವೃತ್ತಿ ಕ್ರಿಕೆಟ್‌ನಲ್ಲಿ ತೊಡಗಿದ್ದೇನೆ. ಮುಂದಿನ ಪಂದ್ಯದಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಶ್ರಮಿಸುವುದಾಗಿ” ಸ್ಯಾಮ್‌ ಕರ್ರನ್‌ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com