ಹಿತಾಸಕ್ತಿ ಸಂಘರ್ಷ ಆರೋಪ: ಒಂಬುಡ್ಸ್ ಮನ್ ಗೆ ಪತ್ರ ಬರೆದ ಗಂಗೂಲಿ ಹೇಳಿದ್ದೇನು?

ಭಾರತೀಯ ಕ್ರಿಕೆಟ್ ರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ನಾಯಕ ಸೌರವ್‌ ಗಂಗೂಲಿ ಸ್ಪಷ್ಟನೆ ನೀಡಿದ್ದು, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ.

Published: 09th April 2019 12:00 PM  |   Last Updated: 09th April 2019 12:31 PM   |  A+A-


Sourav Ganguly replies to ombudsman, clarifies stand on conflict of interest

ಸಂಗ್ರಹ ಚಿತ್ರ

Posted By : SVN SVN
Source : PTI
ನವದೆಹಲಿ: ಭಾರತೀಯ ಕ್ರಿಕೆಟ್ ರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ನಾಯಕ ಸೌರವ್‌ ಗಂಗೂಲಿ ಸ್ಪಷ್ಟನೆ ನೀಡಿದ್ದು, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿರುವ ಗಂಗೂಲಿ, ಐಪಿಎಲ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗಂಗೂಲಿ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋಲ್ಕತ್ತಾದ ರಂಜೀತ್‌ ಸೀಲ್‌, ಅಭಿಜಿತ್‌ ಮುಖರ್ಜಿ ಮತ್ತು ಭಾಸ್ವತಿ ಶಾಂತುವ ಅವರು ನಿವೃತ್ತ ನ್ಯಾಯಮೂರ್ತಿ ಜೈನ್‌ ಅವರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ಸಂಬಂಧ ಒಂಬುಡ್ಸ್ ಮನ್‌, ಗಂಗೂಲಿ ಅವರಿಂದ ಸ್ಪಷ್ಟನೆ ಕೇಳಿತ್ತು. ಈ ಹಿನ್ನಲೆಯಲ್ಲಿ ಇಂದು ಗಂಗೂಲಿ ಪತ್ರ ಬರೆದಿದ್ದರು.

ಪತ್ರದಲ್ಲಿ ತಮ್ಮ ಸ್ಪಷ್ಟನೆ ನೀಡಿರುವ ಗಂಗೂಲಿ, 'ಎರಡು ಹುದ್ದೆಗಳನ್ನು ನಿಭಾಯಿಸುತ್ತಿರುವುದು ನಿಜ. ಇದು ಬಿಸಿಸಿಐ ಸಂವಿಧಾನಕ್ಕೆ ವಿರುದ್ಧವಾಗಿಲ್ಲ. ಹೀಗಾಗಿ ಇಲ್ಲಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ 'ಸದ್ಯ ಬಿಸಿಸಿಐಯಲ್ಲಿ ನಾನು ಯಾವುದೇ ಲಾಭದಾಯಕ ಹುದ್ದೆ ಹೊಂದಿಲ್ಲ. ಬಿಸಿಸಿಐ ರಚಿಸಿರುವ ಕ್ರಿಕೆಟ್‌ ಸಮಿತಿಗಳಲ್ಲೂ ನನ್ನ ಪಾತ್ರವಿಲ್ಲ. ಜೊತೆಗೆ ಐಪಿಎಲ್ ಗೆ ಸಂಬಂಧಿಸಿದಂತೆ ಬಿಸಿಸಿಐ ರಚಿಸಿರುವ ಸಮಿತಿಗಳಲ್ಲೂ ನಾನು ಯಾವ ಹುದ್ದೆಯನ್ನೂ ನಿಭಾಯಿಸುತ್ತಿಲ್ಲ. ಈ ಹಿಂದೆ ನಾನು ಬಿಸಿಸಿಐ ತಾಂತ್ರಿಕ ಸಮಿತಿಯಲ್ಲಿದ್ದೆ. ಜೊತೆಗೆ ಐಪಿಎಲ್‌ ತಾಂತ್ರಿಕ ಸಮಿತಿ ಮತ್ತು ಐಪಿಎಲ್‌ ಆಡಳಿತ ಸಮಿತಿಗಳಲ್ಲೂ ಕೆಲಸ ಮಾಡುತ್ತಿದ್ದೆ. ಆ ಹುದ್ದೆಗಳಿಗೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ' ಎಂದು ಗಂಗೂಲಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಅಂತೆಯೇ 'ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಮಾಲೀಕತ್ವ ಹೊಂದಿದೆ. ಆ ಕಂಪನಿಯಲ್ಲಿ ನಾನು ಪಾಲು ಹೊಂದಿಲ್ಲ. ನಾನು ಆ ಕಂಪನಿಯ ನಿರ್ದೇಶಕ ಎಂಬುದು ಶುದ್ಧ ಸುಳ್ಳು. ರೆಡ್‌ ಚಿಲ್ಲೀಸ್‌ ಜೊತೆ ನಾನು ಯಾವ ವ್ಯವಹಾರವನ್ನೂ ಮಾಡುತ್ತಿಲ್ಲ’ ಎಂದೂ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp