ಇಂದು ಭಾರತ-ವಿಂಡೀಸ್ 2ನೇ ಏಕದಿನ ಪಂದ್ಯ: ಸರಣಿ ಉಳಿಸಿಕೊಳ್ಳಲು ಕೊಹ್ಲಿ ಪಡೆ ಸಾಹಸ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ 0-1 ಅಂತರದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶಾಖಪಟ್ಟಣಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ 0-1 ಅಂತರದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಟಿ20 ಸರಣಿಯನ್ನು ಗೆದ್ದು ಆತ್ಮ ವಿಶ್ವಾಸದಿಂದ ಬೀಗುತ್ತಿದ್ದ ಭಾರತ ತಂಡಕ್ಕೆ ದೈತ್ಯ ವಿಂಡೀಸ್ ಪಡೆ ಮೊದಲ ಏಕದಿನ ಪಂದ್ಯವನ್ನು ಗೆದ್ದು ಮರ್ಮಾಘಾತ ನೀಡಿದೆ.  ಇಂದು ವಿಶಾಖಪ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ 2ನೇ ಏಕದಿನ ಪಂದ್ಯ ನಡೆಯುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. 

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸಿರುವ ಭಾರತ ಸರಣಿಯಲ್ಲಿ ಜೀವಂತವಾಗಿರುವ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.  ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ 2ನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಅಂತೆಯೇ ಭಾರತ ತಂಡ ಕೂಡ 2ನೇ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಹೀಗಾಗಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಇಂದಿನ ಪಂದ್ಯ ನಡೆಯುವ ವಿಶಾಖಪಟ್ಟಣಂನಲ್ಲಿ ತಾಪಮಾನ ಚೆನ್ನೈನಂತೆಯೇ ತುಸು ಹೆಚ್ಚಾಗಿರಲಿದ್ದು, ಅಟಗಾರರನ್ನು ಹೈರಾಣಾಗಿಸುವುದಲ್ಲಿ ಎರಡು ಮಾತಿಲ್ಲ. ಬಿಸಿಲ ಧಗೆಯ ನಡುವೆಯೇ ಆಟಗಾರರು ಆಟವಾಡುವುದು ಅನಿವಾರ್ಯ. ಇಂದು ಮಳೆರಾಯನ ಕಾಟ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ವೀಕ್ಷಿಸಬಹುದು. ವಿಶಾಖಪಟ್ಟಣಂ ಪಿಚ್ ನ ಬಗ್ಗೆ ಹೇಳುವುದಾದರೆ, ಬ್ಯಾಟ್ಸಮನ್ ಗಳಿಗೆ ಹೇಳಿ ಮಾಡಿಸಿದ ಪಿಚ್. ಪಿಚ್ ಬೌನ್ಸಿಯಾಗಿರಲಿದ್ದು, ಖಂಡಿತ ದೊಡ್ಡ ಹೊಡೆತಗಳ ಬ್ಯಾಟ್ಸ್ ಮನ್ ಗಳು ಒತ್ತಡವಿಲ್ಲದೇ ಬ್ಯಾಟ್ ಬೀಸಬಹುದು. 

ಇನ್ನು ಸಂಜೆಯ ಬಳಿಕ ಚೆಂಡು ಇನ್ನೂ ಹೆಚ್ಚು ಪುಟಿಯುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಮೊದಲು ಬ್ಯಾಟ್ ಮಾಡುವ ತಂಡಕ್ಕಿಂತ ಎರಡನೇ ಬಾರಿಗೆ ಬ್ಯಾಟ್ ಮಾಡುವ ತಂಡಕ್ಕೆ ಇದರಿಂದ ಹೆಚ್ಚು ಅನುಕೂಲ ಎಂದು ಹೇಳಬಹುದು. ಇದೇ ಕಾರಣಕ್ಕೆ ಎರಡೂ ತಂಡಗಳೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಚೇಸಿಂಗ್ ಮುಂದಾಗುವ ಸಾಧ್ಯತೆಗಳು ಹೆಚ್ಚಿವೆ. ಭಾರತ ತಂಡದ ಕುರಿತು ಹೇಳುವುದಾದರೆ ಬ್ಯಾಟಿಂಗ್ ನಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲ. ಆದರೆ ಭಾರತ ತಂಡದ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆ ವಿಭಾಗ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ. ಚೆನ್ನೈನಲ್ಲಿ ಭಾರತ ತಂಡ ಐದನೇ ಬೌಲರ್ ನ ಕೊರತೆ ಎದುರಿಸಿತ್ತು. ಯಜುವೇಂದ್ರ ಚಹಲ್ ರ ಅನುಪಸ್ಥಿತಿ ಖಂಡಿತಾ ಭಾರತ ತಂಡಕ್ಕೆ ದುಬಾರಿಯಾಯಿತು ಎನ್ನಬಹುದು. 

ಚೆನ್ನೈ ಪಂದ್ಯದಲ್ಲಿ ದೀಪಕ್ ಚಹರ್, ಕುಲದೀಪ್ ಯಾದವ್ ವಿಂಡೀಸ್ ದಾಂಡಿಗರನ್ನು ಕಟ್ಟಿಹಾಕುವ ಕೆಲಸ ಮಾಡಿದರೂ ಅವರಿಗೆ ಇತರೆ ಬೌಲರ್ ಗಳಿಂದ ಉತ್ತಮ ಸಾಥ್ ದೊರೆಯಲಿಲ್ಲ. ಶಿವಂ ದುಬೆ ಮತ್ತು ಮಹಮದ್ ಶಮಿ ಕೊಂಚ ದುಬಾರಿಯಾದರು. ಹೀಗಾಗಿ ಭಾರತ ತಂಡ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಸುಧಾರಿಸಬೇಕು.  ವಿಂಡೀಸ್ ತಂಡದ ಕುರಿತು ಹೇಳುವುದಾದರೆ ವಿಂಡೀಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಚೆನ್ನೈ ಪಂದ್ಯ ಇದಕ್ಕೆ ಸ್ಪಷ್ಟ ಸಾಕ್ಷಿ, ಬ್ಯಾಟಿಂಗ್ ನಲ್ಲಿ ಶಾಯ್ ಹೋಪ್, ಶಿಮ್ರಾನ್ ಹೇಟ್ಮರ್, ನಿಕೋಲಸ್ ಪೂರನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ಅಂತೆಯೇ ಕೀರನ್ ಪೊಲಾರ್ಡ್, ಸುನಿಲ್ ಅಂಬ್ರಿಸ್ ದೊಡ್ಡ ಹೊಡೆತಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಅತ್ತ ಬೌಲಿಂಗ್ ನಲ್ಲಿ ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ಕೀಮೋ ಪಾಲ್, ಅಲ್ ಜಾರಿ ಜೋಸೆಫ್ ಉತ್ತಮ ಫಾರ್ಮ್ ನಲ್ಲಿದ್ದು, ಬ್ಯಾಟ್ಸ್ ಮನ್ ಗಳ ಕಂಗೆಡಿಸಲಿದ್ದಾರೆ.

ಭಾರತ ವರ್ಸಸ್ ಹೆಡ್ ಟು ಹೆಡ್
ಇನ್ನು ವಿಶಾಖಪಟ್ಟಣಂ ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಟ್ಟು 129 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 62 ಪಂದ್ಯಗಳನ್ನು ಜಯಿಸಿದ್ದರೆ, ವಿಂಡೀಸ್ ಪಡೆ 63 ಪಂದ್ಯಗಳನ್ನು ಜಯಿಸಿದೆ. 2 ಪಂದ್ಯಗಳು ಟೈ ಆಗಿದ್ದು, 4 ಪಂದ್ಯಗಳು ಫಲಿತಾಂಶ ರಹಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com