ಟೀಂ ಇಂಡಿಯಾಗೆ 4ನೇ ಕ್ರಮಾಂಕದಲ್ಲಿ ರಹಾನೆ ರೀತಿಯ ಬ್ಯಾಟ್ಸ್ ಮನ್ ಅಗತ್ಯವಿದೆ- ಸಂಜಯ್ ಜಗದಾಳೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ನಿರ್ಗಮಿಸಿದ ನಂತರ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಚಿಂತೆ ಶುರುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ:  ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ನಿರ್ಗಮಿಸಿದ ನಂತರ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಚಿಂತೆ ಶುರುವಾಗಿದೆ.
ಅಜಿಂಕ್ಯಾ ರಹಾನೆ ಅವರಂತಹ  ಬ್ಯಾಟ್ಸ್ ಮನ್  ನಾಲ್ಕನೇ ಕ್ರಮಾಂಕದಲ್ಲಿ ಇದಿದ್ದರೆ ಟೀಂ ಇಂಡಿಯಾ ಗೆಲುವು ಸಾಧಿಸಬಹುದಾಗಿತ್ತು ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ. 
ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಶಿಖರ್ ಧವನ್ ಗಾಯಗೊಂಡ ಬಳಿಕ ವಿಜಯ್ ಶಂಕರ್   ನಾಲ್ಕನೇ ಕ್ರಮಾಂಕದಲ್ಲಿ ಆಡಿದರು. ಆದರೆ, ಅವರು ಗಾಯಗೊಂಡ ಬಳಿಕ ರಿಷಬ್ ಪಂಥ್  ಅವರಿಗೆ ಅವಕಾಶ ದೊರೆಯಿತಾದರೂ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾದರು.
ನಂಬರ್ 4ರಲ್ಲಿ ಅಜಿಂಕ್ಯಾ ರಹಾನೆ ರೀತಿಯ ಬ್ಯಾಟ್ಸ್ ಮನ್ ಗಳ ಅಗತ್ಯವಿದೆ . ಕಳೆದ ಮೂರು ತಿಂಗಳುಗಳಿಂದಲೂ ಇದನ್ನೇ ಹೇಳುತ್ತಾ ಬಂದಿದ್ದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ   ರಹಾನೆ ಉತ್ತಮ ರನ್ ಕಲೆಹಾಕಿದ್ದರು ಎಂದು ಜಗದಾಳೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಗೂ ಮುಂಚಿತವಾಗಿ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಗಾಗಿ ಹಲವು ಮಾರ್ಗಗಳಿದ್ದವು. ಆ ಕ್ರಮಾಂಕದಲ್ಲಿ ಅಂಬಟಿ ರಾಯುಡು ಸ್ಥಿರ ಪ್ರದರ್ಶನ ನೀಡುತ್ತಿದ್ದರು. ಆದರೆ, ಅವರ ಬದಲಿಗೆ ವಿಜಯ್ ಶಂಕರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಶಂಕರ್  ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುವುದರ ಜೊತೆಗೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದರು.
 ವಿದೇಶಗಳ ಪಿಚ್ ಗಳಲ್ಲಿ ರಿಷಬ್ ಪಂತ್ ಹಾಗೂ ರಹಾನೆ ಕೂಡಾ ಸ್ಥಿರ ಪ್ರದರ್ಶನ ನೀಡಿ, ಉತ್ತಮ ದಾಖಲೆ ಮಾಡಿದ್ದರು . ಇಂಗ್ಲೆಂಡ್  ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ  ರಿಷಬ್ ಪಂತ್ ಶತಕ ಬಾರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಪಂಥ್ ಹಾಗೂ ರಹಾನೆ ಚೆನ್ನಾಗಿ ಆಡಿದ್ದರು ಎಂದು ಜಗದಾಳೆ ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ , ಅಂಬಟ್ಟಿ ರಾಯಡು 2003ರಿಂದಲೂ ಆಡುತ್ತಿದ್ದರೂ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅಂತಹ ಸಂದರ್ಭದಲ್ಲಿ ಬೇರೆ ಮಾರ್ಗಗಳಿದ್ದವು. ನಾಲ್ಕನೇ ಕ್ರಮಾಂಕದಲ್ಲಿ ರಹಾನೆ ಅಗತ್ಯ ಎಂದು ಮೂರು ತಿಂಗಳಿಂದಲೂ ಸಲಹೆ ನೀಡುತ್ತಿದೆ. ಭವಿಷ್ಯದಲ್ಲಿ ರಿಷಬ್ ಪಂತ್ ಕೂಡಾ ಈ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟ್ಸ್ ಮನ್ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com