ಸಿಡ್ನಿ: ಮೊಹಮ್ಮದ್ ಶಮಿ (29ಕ್ಕೆ 3) ಮತ್ತು ನವ್ ದೀಪ್ ಸೈನಿ (19ಕ್ಕೆ 3) ಅವರ ಕರಾರವಾಕ್ ಬೌಲಿಂಗ್ ನಿರ್ವಹಣೆಯಿಂದ ಮಿಂಚಿದ ಪ್ರವಾಸಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ತ್ರಿದಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡದ 48.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಬಳಿಕ ಇದಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎ ತಂಡ ದಿನದಾಟದ ಮುಕ್ತಾಯಕ್ಕೆ 32.2 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟಾಯಿತು. ಹೀಗಾಗಿ ಮೊದಲ ಇನಿಂಗ್ಸ್ ನಲ್ಲಿ ಬಾರತ 86 ರನ್ ಗಳ ಮುನ್ನಡೆ ಗಳಿಸಿದೆ.
ಆಸ್ಟ್ರೇಲಿಯಾ ಪರ ಮಾರ್ಕಸ್ ಹ್ಯಾರಿಸ್ (26), ನಿಕ್ ಮ್ಯಾಡಿನ್ಸನ್ (19) ಮತ್ತು ಅಲೆಕ್ಸ್ ಕ್ಯೇರಿ (32) ಅಲ್ಪ ಹೋರಾಟ ತೋರಿದ್ದನ್ನು ಹೊರತುಪಡಿಸಿದರೆ, ಇತರರು ಪ್ರವಾಸಿ ಬೌಲರ್ ಗಳನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾದರು. ಭಾರತದ ಶಿಸ್ತಿನ ಬೌಲಿಂಗ್ ನಡೆಸಿದ ಶಮಿ, ಸೈನಿ ಅವರಲ್ಲದೆ ಜಸ್ ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅನುಕ್ರಮವಾಗಿ 2 ಮತ್ತು 1 ವಿಕೆಟ್ ಉರುಳಿಸಿದರು.
Advertisement