ಐಸಿಸಿ ಮಹಿಳಾ ಟಿ20 ವಿಶ್ವಕಪ್: ಪೂನಮ್ ಯಾದವ್ ಸ್ಪಿನ್ ಮೋಡಿ, ಆಸ್ಟ್ರೇಲಿಯಾ ಮಣಿಸಿ ಭಾರತ ಶುಭಾರಂಭ!

ಪೂನಮ್ ಯಾದವ್ (19 ಕ್ಕೆ 4) ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್ ಜಯ ಸಾಧಿಸಿತು.
ಭಾರತ
ಭಾರತ
Updated on

ಸಿಡ್ನಿ: ಪೂನಮ್ ಯಾದವ್ (19 ಕ್ಕೆ 4) ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್ ಜಯ ಸಾಧಿಸಿತು.

ಭಾರತ ನೀಡಿದ 133 ರನ್ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 35  ಎಸೆತಗಳಲ್ಲಿ 51 ರನ್ ಚಚ್ಚಿದರು. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಪೂನಮ್ ಯಾದವ್ ಸ್ಪಿನ್ ಬಲೆಗೆ ಬೀಳಿಸಿದರು.

ಕೊನೆಯ ಓವರ್‌ವೆರೆಗೂ ಭಾರತದ ಸವಾಲನ್ನು ಮೆಟ್ಟಿನಿಂತ ಆ್ಯಶ್ಲೆ ಗಾರ್ಡನರ್ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಇನ್ನುಳಿದ ಆಟಗಾರ್ತಿಯರು ಭಾರತದ ಶಿಸ್ತುಬದ್ಧ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಯಾರೂ ವೈಯಕ್ತಿಕ ಎರಡಂಕಿ ಮೊತ್ತ ಗಳಿಸುವಲ್ಲಿ ವಿಫಲರಾದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಪೂನಮ್ ಯಾದವ್ ನಾಲ್ಕು ಮತ್ತು ಶಿಖಾ ಪಾಂಡೆ ಮೂರು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದು, ಆಸ್ಟ್ರೇಲಿಯಾಗೆ 133 ರನ್ ಗುರಿ ನೀಡಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲನೇ ವಿಕೆಟ್ಗೆ 41 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತು. 10 ರನ್ ಗಳಿಸಿ ಆಡುತ್ತಿದ್ದ ಮಂಧಾನ ಬೇಗ ವಿಕೆಟ್ ಕೊಟ್ಟರು.

ಆರಂಭದಲ್ಲಿ ಅಬ್ಬರಿಸಿದ ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿ 29 ರನ್ ಚಚ್ಚಿದರು. ಒಂದು ಸಿಕ್ಸರ್ ಹಾಗೂ ಐದು ಬೌಂಡರಿ ಗಳಿಸಿ ಆಡುತ್ತಿದ್ದ ಶಫಾಲಿಯನ್ನು ಎಲೆಸ್ ಫೆರ್ರಿ ಕಟ್ಟಿ ಹಾಕಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಬಹುಬೇಗ ವಿಕೆಟ್ ಕೊಟ್ಟರು. ಇದರಿಂದ ತಂಡಕ್ಕೆ ಹೆಚ್ಚು ಹಿನ್ನಡೆಯಾಯಿತು. ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ದೀಪ್ತಿ ಶರ್ಮಾ 46 ಎಸೆತಗಳಲ್ಲಿ 49 ರನ್ ಗಳಿಸಿದರು. ಆ ಮೂಲಕ ತಂಡವನ್ನು 130ರ ಗಡಿ ದಾಟಿಸಿದರು. ಇದಕ್ಕೂ ಮುನ್ನ ಜೆಮಿಮಾ ರೊಡ್ರಿಗಸ್ 26 ರನ್ ಗಳಿಸಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡಿದ್ದರು.

ಪಂದ್ಯದ ಆರಂಭದಲ್ಲಿ 10ರ ಸರಾಸರಿಯಲ್ಲಿ ಬರುತ್ತಿದ್ದ ರನ್ ಗಳನ್ನು ಡೆತ್ ಓವರ್ನಲ್ಲಿ ಆಸ್ಟ್ರೇಲಿಯಾ ಬೌಲರ್ ಗಳು ನಿಯಂತ್ರಿಸಿದರು. ಇದರ ಫಲವಾಗಿ ಭಾರತವನ್ನು 132 ರನ್ ಗಳಿಗೆ ಕಟ್ಟಿ ಹಾಕಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್
ಭಾರತ(ಮ): 20 ಓವರ್ ಗಳಿಗೆ 132/4 (ದೀಪ್ತಿ ಶರ್ಮಾ ಔಟಾಗದೆ 49, ಶಫಾಲಿ ವರ್ಮಾ 29, ಜೆಮಿಮಾ ರೊಡ್ರಿಗಸ್ 26; ಜೆಸ್ ಜೊನಾಸನ್ 24 ಕ್ಕೆ 2)

ಆಸ್ಟ್ರೇಲಿಯಾ(ಮ): 19.5 ಓವರ್ ಗಳಿಗೆ 115/10 (ಅಲಿಸಾ ಹೀಲಿ 51, ಆ್ಯಶ್ಲೆ ಗಾರ್ಡನರ್ 34; ಪೂನಮ್ ಯಾದವ್ 19 ಕ್ಕೆ 4, ಶಿಖಾ ಪಾಂಡೆ 14 ಕ್ಕೆ 3, ರಾಜೇಶರ್ವರಿ ಗಾಯಕ್ವಾಡ್ 31 ಕ್ಕೆ 1)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com