ಕೊಹ್ಲಿಯನ್ನು ಶ್ರೇಷ್ಠ ಎನ್ನುವವರು ಮೊದಲು ಬಾಬರ್‌ ಬ್ಯಾಟ್‌ ಗಮನಿಸಿ: ಟಾಮ್ ಮೂಡಿ

ಭಾರತದ ವಿರಾಟ್ ಕೊಹ್ಲಿ ಅವರನ್ನೇ ಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವವರು ಮೊದಲು ಪಾಕಿಸ್ತಾನದ ಯುವ ಪ್ರತಿಭೆ ಬಾಬರ್ ಅಜಮ್ ಬ್ಯಾಟಿಂಗ್ ನೋಡಿ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್‌ ಟಾಮ್‌ ಮೂಡಿ ಹೇಳಿದ್ದಾರೆ.
ಕೊಹ್ಲಿ ಮತ್ತು ಬಾಬರ್ ಅಜಮ್ (ಸಂಗ್ರಹ ಚಿತ್ರ)
ಕೊಹ್ಲಿ ಮತ್ತು ಬಾಬರ್ ಅಜಮ್ (ಸಂಗ್ರಹ ಚಿತ್ರ)

ಲಾಹೋರ್‌: ಭಾರತದ ವಿರಾಟ್ ಕೊಹ್ಲಿ ಅವರನ್ನೇ ಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವವರು ಮೊದಲು ಪಾಕಿಸ್ತಾನದ ಯುವ ಪ್ರತಿಭೆ ಬಾಬರ್ ಅಜಮ್ ಬ್ಯಾಟಿಂಗ್ ನೋಡಿ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್‌ ಟಾಮ್‌ ಮೂಡಿ ಹೇಳಿದ್ದಾರೆ.

ಪಾಕಿಸ್ತಾನ ತಂಡದ ಯುವ ಬ್ಯಾಟ್ಸ್‌ಮನ್‌ ಬಾಬರ್‌ ಆಜಮ್‌ ಇತ್ತೀಚಿನ ದಿನಗಳಲ್ಲಿ ಅಮೋಘ ಪ್ರತಿಭೆಯಾಗಿ ಹೊರಬಂದಿದ್ದು, ಮುಂದಿನ ದಶಕದಲ್ಲಿ ವಿಶ್ವದ ಐದು ಅಗ್ರಮಾನ್ಯ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗುತ್ತಾರೆ ಎಂದು ಹೇಳಿರುವ ಟಾಮ್‌ ಮೂಡಿ, ಕಳೆದ ಒಂದು ವರ್ಷದಲ್ಲಿ  ಪರಿಪೂರ್ಣ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿರುವ ಬಾಬರ್‌, ಭವಿಷ್ಯದಲ್ಲಿ ವಿಶೇಷ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಬ್ಬ ಬ್ಯಾಟ್ಸ್‌ಮನ್‌ ಆಗಿ ವಿರಾಟ್‌ ಕೊಹ್ಲಿ ಎಷ್ಟು ಉತ್ತಮ ಆಟಗಾರ ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ಅಂದಹಾಗೆ ವಿರಾಟ್‌ ಕೊಹ್ಲಿಯೇ ಶ್ರೇಷ್ಠ ಎನಿಸಿದರೆ ಮೊದಲು ನೀವು ಬಾಬರ್‌ ಆಝಮ್‌ ಬ್ಯಾಟ್‌ ಗಮನಿಸಬೇಕು. ಅಬ್ಬಾ.. ಆತ ನಿಜಕ್ಕೂ ವಿಶೇಷ ಆಟಗಾರ," ಎಂದು ಮೂಡಿ  ಪಾಕಿಸ್ತಾನ್ ಕ್ರಿಕೆಟ್‌ ವೆಬ್‌ಸೈಟ್‌ ಒಂದಕ್ಕೆ ನೀಡಿರುವ ಆನ್‌ಲೈನ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

"ಮುಂದಿನ ಐದು ಅಥವಾ ಹತ್ತು ವರ್ಷಗಳಲ್ಲಿ ಬಾಬರ್‌ ಆಜಮ್‌ ನಿಸ್ಸಂದೇಹವಾಗಿ ವಿಶ್ವದ ಐದು ಅಗ್ರಮಾನ್ಯ ಟೆಸ್ಟ್‌ ಬ್ಯಾಟ್ಸ್‌ಮನ್‌ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳಲಿದ್ದಾರೆ. ಈವರೆಗೆ ಅವರು 26 ಟೆಸ್ಟ್‌ಗಳನ್ನು ಮಾತ್ರ ಆಡಿದ್ದಾರೆ. ಇದರಲ್ಲಿ ಅರ್ಧದಷ್ಟು ಪಂದ್ಯಗಳಲ್ಲಿ ಅವರು ಪಾಕ್‌  ತಂಡದ ಪ್ರಮುಖ ಬ್ಯಾಟಿಂಗ್‌ ವಿಭಾಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೂ ಇಷ್ಟು ಪ್ರಭಾವಯುತ ಪ್ರದರ್ಶನ ನೀಡಿದ್ದಾರೆ. ಅವರು ಆಡುತ್ತಿರುವ ಕ್ರಮಾಂಕ ಸೂಕ್ತವಾದುದ್ದೇ ಎಂದು ಈಗಲೇ ಹೇಳಲಾಗದು. ಮನೆಯಾಚೆ ಅವರ ಬ್ಯಾಟಿಂಗ್‌ ಸರಾಸರಿ ಕೇವಲ 37ರಷ್ಟಿದ್ದು, ತವರಿನಲ್ಲಿ 67ರ  ಸರಾಸರಿ ಹೊಂದಿದ್ದಾರೆ. ಆದರೆ, ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಮಾತ್ರ ಅವರು ವಿದೇಶದಲ್ಲಿ ಆಡಿರುವುದು. ಜೊತೆಗೆ ವಿದೇಶದಲ್ಲಿ ಹೆಚ್ಚು ಆಡುವ ಅವಕಾಶವೂ ಸಿಕ್ಕಿಲ್ಲ ಎಂಬುದನ್ನು ಇಲ್ಲಿ ಪರಿಗಣಿಸಬೇಕು ಎಂದು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮಾಜಿ ಕೋಚ್‌  ಆಗಿದ್ದ ಮೂಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com