ಕೊಹ್ಲಿ ಅಬ್ಬರಿಸದಿದ್ದರೆ ಆಸಿಸ್ ಗೆ ಭಾರತದ ವಿರುದ್ಧ 4-0 ಅಂತರದ ಗೆಲುವು: ಮೈಕೆಲ್ ಕ್ಲಾರ್ಕ್

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಆಬ್ಬರಿಸದಿದ್ದರೆ ಆಸಿಸ್ ತಂಡಕ್ಕೆ 4-0 ಅಂತರದ ಗೆಲುವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ-ಮೈಕಲ್ ಕ್ಲಾರ್ಕ್
ವಿರಾಟ್ ಕೊಹ್ಲಿ-ಮೈಕಲ್ ಕ್ಲಾರ್ಕ್
Updated on

ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಆಬ್ಬರಿಸದಿದ್ದರೆ ಆಸಿಸ್ ತಂಡಕ್ಕೆ 4-0 ಅಂತರದ ಗೆಲುವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಕುರಿತು ಸ್ಕೈ ಸ್ಪೋರ್ಟ್ಸ್ ರೇಡಿಯೋಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, 'ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಟೀಂಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳುವುದು  ಖಚಿತವಾಗಿದೆ. ಡಿಸೆಂಬರ್ 17ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಪಿತೃತ್ವದ ರಜೆಯ ಮೇರೆಗೆ ತವರಿಗೆ ವಾಪಾಸಾಗಲಿದ್ದಾರೆ. ಹೀಗಾಗಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ಬಳಿಕ ಉಳಿದ  ಮೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೆ ಕೊಹ್ಲಿಅನುಪಸ್ಥಿತಿಯಲ್ಲಿ ಎಲ್ಲಾ ಆಟಗಾರರು ಭಾರತ ತಂಡದ ಗೆಲುವಿಗೆ ಶಕ್ತಿಮೀರಿ ಹೋರಾಟ ನಡೆಸಬೇಕು. ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ಎದುರು ಕೊಂಚ ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ. ವಿರಾಟ್  ಕೊಹ್ಲಿ ತವರಿಗೆ ಮರಳುವ ಮುನ್ನ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಡುವುದರ ಜತೆಗೆ ಆಟಗಾರರಲ್ಲಿ ಮಾನಸಿಕ ಸ್ಟೈರ್ಯ ತುಂಬುವುದು ಸಾಕಷ್ಟು ಮಹತ್ವದ್ದಾಗಿದೆ. ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಿದ್ದರೆ ಅಡಿಲೇಡ್‌ನಲ್ಲಿ ನಡೆಯಲಿರುವ  ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಬೇಕಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ನವೆಂಬರ್ 27ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕನ ಆಟವಾಡುವ ಮೂಲಕ ತಂಡಕ್ಕೆ ಹುರುಪು ತುಂಬಬೇಕಾಗಿದೆ. ಹೀಗಾದಲ್ಲಿ ಮಾತ್ರ ಟೀಂ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಉತ್ತಮ ಪ್ರದರ್ಶನ ತೋರಲು ಸಾಧ್ಯ. ಒಂದು  ವೇಳೆ ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮುಗ್ಗರಿಸಿದರೆ, ಟೆಸ್ಟ್ ಸರಣಿಯಲ್ಲಿ ಮತ್ತೆ ಒತ್ತಡಕ್ಕೆ ಸಿಲುಕಲಿದೆ. ಇಂತಹ ಒತ್ತಡದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 4-0 ಅಂತರದ ಹೀನಾಯ ಸೋಲು ಕಾಣಲಿದೆ ಎನ್ನುವುದು ನನ್ನ  ಅಭಿಪ್ರಾಯವೆಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಬೇಕಿದ್ದರೆ ಜಸ್ಟ್ರೀತ್ ಬುಮ್ರಾ ಪಾತ್ರ ಪ್ರಮುಖವಾಗಿರಲಿದೆ. ಬೌನ್ಸಿ ಪಿಚ್‌ನಲ್ಲಿ ಬುಮ್ರಾ ಆಸೀಸ್ ಬ್ಯಾಟ್ಸ್‌ಮನ್‌ ಗಳಿಗೆ ಸವಾಲಾಗಬಹುದು. ಕೊಹ್ಲಿ ಮತ್ತು ಬುಮ್ರಾ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು,  ಆಸಿಸ್ ತಂಡಕ್ಕೆ ಸಮರ್ಥ ಸವಾಲೆಸೆಯುವ ಸಾಮರ್ಥ್ಯಹೊಂದಿದ್ದಾರೆ. ಸೀಮಿತ ಓವರ್ ಗಳ ಮಾದರಿಯ ಕ್ರಿಕೆಟ್ ನಲ್ಲಿ ಬುಮ್ರಾ ಅತ್ಯುತ್ತಮ ಬೌಲರ್ ಆಗಿದ್ದಾರೆ. ಬುಮ್ರಾ ಅವರ ವೇಗ ಮತ್ತು ಅವರ ಬೌಲಿಂಗ್ ಶೈಲಿ ಎಂತಹ ಬಲಿಷ್ಟ ಬ್ಯಾಟ್ಸ್ ಮನ್ ಗಲಿಗೂ ಕಠಿಣ ಸವಾಲಾಗಿರಲಿದೆ.  ಐಪಿಎಲ್ ನಲ್ಲಿ ಆಸಿಸ್ ನ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ರನ್ನು ಬುಮ್ರಾ ಸಾಕಷ್ಟು ಬಾರಿ ಔಟ್ ಮಾಡಿದ್ದಾರೆ. ವಾರ್ನರ್ ಮಾತ್ರವಲ್ಲದೇ ಸ್ಟೀವೆನ್ ಸ್ಮಿತ್ ಕೂಡ ಶಾರ್ಟ್ ಪಿಚ್ ಎಸೆತಗಳಿಗೆ ವಿಕೆಟ್ ಒಪ್ಪಿಸಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. 

2018-2019ರಲ್ಲಿ ಆಸಿಸ್ ಪ್ರವಾಸ ಕೈಗೊಂಡಿದ್ದ ಭಾರತ ಆಸಿಸ್ ನೆಲದಲ್ಲಿ ತನ್ನ ಮೊಟ್ಟ ಮೊದಲ ಟೆಸ್ಟ್ ಸರಣಿ ಜಯಿಸಿತ್ತು. ಆದರೆ ಅಂದು ಆಸಿಸ್ ತಂಡದ ಸ್ಟಾರ್ ಆಟಗಾರರಾದ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡದಲ್ಲಿರಲಿಲ್ಲ. ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ  ತುತ್ತಾಗಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com