
ಸಿಡ್ನಿ: ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ವೇಳೆ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಚೂರು ಪಾರು ಆಟಗಾರ ಎಂದು ಹೀಯಾಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸಂಜಯ್ ಮಾಂಜ್ರೇಕರ್ ಅವರನ್ನು ಬಿಸಿಸಿಐ ತನ್ನ ಕಾಮೆಂಟರಿ ಪ್ಯಾನಲ್‌ನಿಂದ ಕಿತ್ತೊಗೆದಿತ್ತು.
ಇದೀಗ ಭಾರತ-ಆಸ್ಟ್ರೇಲಿಯಾ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಪ್ರಸಾರ ಹಕ್ಕು ಪಡೆದಿರುವ ಸೋನಿ ಸಿಕ್ಸ್ ಸಂಸ್ಥೆಯ ವೀಕ್ಷಕ ವಿವರಣೆಗಾರರ ತಂಡದ ಸದಸ್ಯತ್ವ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಮೆಂಟರಿ ನೀಡುವ ಕೆಲಸಕ್ಕೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಮರಳಿದ್ದಾರೆ. ಆದರೆ, ಶುಕ್ರವಾರ ನಡೆದ ಇಂಡೊ-ಆಸೀಸ್ ನಡುವಣ ಮೊದಲ ಒಡಿಐ ಪಂದ್ಯಕ್ಕೂ ಮೊದಲೇ ಹಾಗೂ ಪಂದ್ಯದ ವೇಳೆ ಕೆಲ ಅನಗತ್ಯ ಮಾತುಗಳಿಂದಾಗಿ ಮತ್ತೊಮ್ಮೆ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ತಮ್ಮ ಆಯ್ಕೆಯ ಭಾರತ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟ ಮಾಡಿದ್ದ ಮಾಂಜ್ರೇಕರ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರಗಿಟ್ಟದ್ದು ಅಭಿಮಾನಿಗಳನ್ನು ಬಡಿದೆಬ್ಬಿಸಿತ್ತು. ಅಷ್ಟೇ ಅಲ್ಲದೆ ತಮ್ಮ ಆಯ್ಕೆಯ ಸ್ಪಿನ್ನರ್ ಕುಲ್ದೀಪ್ ಯಾದವ್ ಆಗಿದ್ದು, ಸಹಜವಾಗಿಯೇ ವಿರಾಟ್ ಕೊಹ್ಲಿ ತಮ್ಮ 11ರ ಬಳಗಕ್ಕೆ ರವೀಂದ್ರ ಜಡೇಜಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅಣಕವಾಡಿದ್ದರು.
Advertisement